ಮಂಗಳೂರು: ನವರಾತ್ರಿ ನಮ್ಮ ದೇಶದ ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ನವರಾತ್ರಿಯು ಶಕ್ತಿ ದೇವತೆಯ ಹಬ್ಬ. ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳು. ಶಕ್ತಿದೇವತೆಯನ್ನು ಒಂಭತ್ತು ರಾತ್ರಿಗಳು ಹಾಗೂ ಹತ್ತು ಹಗಲುಗಳ ಕಾಲ ಒಂಭತ್ತು ರೂಪಗಳಲ್ಲಿ ಪೂಜಿಸುತ್ತಾರೆ. ಹತ್ತನೆಯ ದಿನವನ್ನು ವಿಜಯದಶಮಿ ಅಥವಾ ದಸರಾ ಎಂದು ಕರೆಯುತ್ತಾರೆ. ಭಾರತದಲ್ಲಿ ನವರಾತ್ರಿಯನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಉತ್ತರ ಭಾರತೀಯರಿಗೆ ನವರಾತ್ರಿ ಎಂದರೆ ಬಹುದೊಡ್ಡ ಹಬ್ಬವಾಗಿದೆ. ಒಂಭತ್ತು ದಿನಗಳ ಕಾಲ ದೇವಿಯನ್ನು ವಿವಿಧ ರೀತಿಯಲ್ಲಿ ಪೂಜಿಸುತ್ತಾರೆ, ಆರಾಧಿಸುತ್ತಾರೆ.
ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿಯನ್ನು ವಿವಿದ ವಿಧಿ ವಿಧಾನಗಳಿಂದ ಆಚರಿಸುತ್ತಾರೆ. ಹೆಚ್ಚಾಗಿ ಉತ್ತರ ಭಾರತೀಯರು ಉಪವಾಸವಿದ್ದು ದೇವಿಯನ್ನು ಆರಾಧಿಸುತ್ತಾರೆ. ಉತ್ತರ ಭಾರತದಲ್ಲಿ ರಾಮನು ರಾವಣನನ್ನು ಸಂವಾರ ಮಾಡಿದ ನೆನಪಿಗಾಗಿ ರಾಮನವಮಿ ದಿನದಂದು ರಾವಣ, ಕುಂಭಕರ್ಣ, ಮೇಘನಾಧನ ಪ್ರತಿಮೆಯನ್ನು ಮಾಡಿ ಅದನ್ನು ದಹಿಸುತ್ತಾರೆ. ಪಶ್ಚಿಮ ಭಾಗದ ರಾಜ್ಯಗಳಾದ ಮುಂಬೈ, ಗುಜರಾತ್ ಮೊದಲಾದೆಡೆಗಳಲ್ಲಿ ನವರಾತ್ರಿಯನ್ನು ಗಬರ್, ದಾಂಡಿಯಾ-ರಾಸ್ ನೃತ್ಯಗಳ ಮೂಲಕ ಆಚರಿಸುತ್ತಾರೆ.ನವರಾತ್ರಿಯ ಸಂಭ್ರಮವನ್ನು ಭಾರತದಲ್ಲಿರುವವರು ಮಾತ್ರವಲ್ಲ. ಕೆನಡಾ, ಲಂಡನ್, ಅಮೇರಿಕಾ ಮೊದಲಾದ ದೇಶಗಳಲ್ಲಿ ನೆಲೆಸಿರುವ ಭಾರತೀಯರೂ ಕೂಡಾ ಸಂಭ್ರಮದಿಂದ ಆಚರಿಸುತ್ತಾರೆ. ಸಾರಸ್ವತ ಬ್ರಾಹ್ಮಣರು ದೇವಿಯನ್ನು ಶಾಂತದುರ್ಗಾ, ಆರ್ಯದುರ್ಗಾ, ಮಹಾಲಸ, ಕಾತ್ಯಾಯಿನಿ, ಮಹಾಮಾಯಿ, ಕಾಮಾಕ್ಷಿ, ವಿಜಯದುರ್ಗಾ, ಭೂಮಿಕಾ, ಮಹಾಲಕ್ಷ್ಮಿ, ಮತ್ತು ನವದುರ್ಗೆಎಂಬ ನವ ನಾಮ ಹಾಗೂ ರೂಪಗಳಲ್ಲಿ ಪೂಜಿಸುತ್ತಾರೆ.
ನವರಾತ್ರಿಯ ಇತಿಹಾಸ:
ದೇವಿಯನ್ನು ಪೂಜಿಸುವಂತಹ ಈ ಪದ್ಧತಿ ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. ನವರಾತ್ರಿ ಆಚರಣೆಗೆ ಹಲವಾರು ನಂಬಿಕೆಗಳು ಹಾಗೂ ಪುರಾಣ ಕಥೆಗಳಿವೆ ಎಂದು ಹಲವು ಕಾಲಗಳಿಂದ ಜನರು ನಂಬುತ್ತಾ ಬಂದಿದ್ದಾರೆ. ಪುರಾಣ ಈ ರೀತಿಯಾಗಿ ಹೇಳುತ್ತದೆ: ದೈತ್ಯ ರಾಕ್ಷಸ ಎಂದೇ ಕರೆಯಲ್ಪಡುವ ಮಹಿಷಾಸುರ ಶಿವನ ಭಕ್ತನೂ ಆಗಿದ್ದ. ಶಿವನ ಕುರಿತು ಅಘೋರ ತಪಸ್ಸು ಮಾಡಿ ಅಮರವಾಗಿರುವಂತಹ ವರ ಪಡೆದ. ದುಷ್ಟನಾದ ಈತ ಅನೇಕ ಮುಗ್ಧ ಜನತೆಯ ನೆತ್ತರು ಹೀರುತ್ತಾ ಬಂದ. ಮೂರು ಲೋಕಗಳು ಇವನ ಹಿಂಸೆಯಿಂದ ನರಳುತ್ತಿದ್ದವು. ಇದನ್ನು ತಡೆಯುವ ಸಲುವಾಗಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಶಕ್ತಿ ಒಟ್ಟಾಗಿ ಶಕ್ತಿ ದೇವತೆಯಾದ ದುರ್ಗೆ ಜನ್ಮ ತಾಳಿದಳು. ಆಕೆ ರುದ್ರ ರೂಪ ತಾಳಿ ಮಹಿಷಾಸುರನೊಂದಿಗೆ ಒಂಭತ್ತು ದಿನಗಳ ಕಾಲ ಹೋರಾಟ ನಡೆಸಿದಳು. ಹತ್ತನೆಯ ದಿನ ಅವನ ಸಂವಾರವಾಯಿತು. ಹಾಗಾಗಿ ದುರ್ಗೆ ಈ ಒಂಭತ್ತು ದಿನ ಮಹಿಷಾಸುರನೊಂದಿಗೆ ನಡೆಸಿದ ಯುದ್ಧದ ಸಲುವಾಗಿ ಆ ದಿನಗಳನ್ನು ನವರಾತ್ರಿ ಮಹೋತ್ಸವವಾಗಿ ಆಚರಿಸುತ್ತಾರೆ.
ಕರ್ನಾಟಕದಲ್ಲಿ ನವರಾತ್ರಿ ಸಂಭ್ರಮ:
ಕರ್ನಾಟಕದಲ್ಲಿನ ದಸರಾ ಸಂಭ್ರಮವಂತೂ ನಮಗೆ ತಿಳಿದಿರುವುದೇ ಆಗಿದೆ. ಮೈಸೂರು, ಮಂಗಳೂರು, ಮಡಿಕೇರಿಯಲ್ಲಿ ಸಂಭ್ರಮದ ನವರಾತ್ರಿ ಮಹೋತ್ಸವ ನಡೆಯುತ್ತದೆ.ಮೈಸೂರು ದಸರಾ ನೋಡಲು ಕಣ್ಣುಗಳೇ ಸಾಲದು. ವಿದ್ಯುದ್ದೀಪಗಳಿಂದ ಅಲಂಕೃತವಾದ ಮೈಸೂರು ಅರಮನೆ ಘತ ವೈಭವ ಸಾರುವ ಆ ರಾಜ ವೈಭೋಗ, ದೇಶ ವಿದೇಶಗಳಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಆ ಜಂಬು ಸವಾರಿ, ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಇವೆಲ್ಲವೂ ಮೈಸೂರು ದಸರದ ವಿಶೇಷತೆ. ಮೈಸೂರು ದಸರವನ್ನು ಕಣ್ಮನ ತುಂಬಿಕೊಂಡವನೇ ಪುಣ್ಯವಂತ ಎಂದು ಹೇಳಬಹುದು. ನವರಾತ್ರಿಯ ಒಂಭತ್ತು ದಿನಗಳ ಕಾಲ ವಿಶಿಷ್ಟ ಪೂಜೆ ನಡೆಯುತ್ತದೆ.
ಇನ್ನು ಮಂಗಳೂರು ದಸರಾ ಕೂಡಾ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಕುದ್ರೋಳಿ ಗೋಕರ್ಣನಾಥ ದೇವಾಲಯ ಮೈಸೂರು ಅರಮನೆಗೆ ಕಡಿಮೆ ಇಲ್ಲ ಎಂಬಂತೆ ಜಗಮಗಿಸುತ್ತದೆ. ನವರಾತ್ರಿ ಸಮಯದಲ್ಲಿ ಇಡೀ ಮಂಗಳೂರೇ ವಿದ್ಯುದ್ದೀಪಾಲಂಕಾರದಿಂದ ಅಲಂಕೃತಗೊಳ್ಳುತ್ತದೆ. ದೇವಿಯ ಒಂಭತ್ತು ಮೂರ್ತಿಯ ಜತೆಗೆ ವಿಘ್ನ ನಿವಾರಕ ಗಣೇಶನ ಮೂರ್ತಿಯನ್ನು ಪೂಜಿಸುತ್ತಾರೆ. ದುರ್ಗೆ, ಸ್ಕಂದ ಮಾತಾ, ಕಾತ್ಯಾಯನಿ, ಕಾಳ ತಾತ್ರಿ, ಕುಷ್ಮಾಂಡಿನಿ, ಸಿದ್ಧಿಧಾತ್ರಿ, ಮಹಾಗೌರಿ, ಕಾತ್ಯಯಿನಿ, ಚಂದ್ರಘಂಟಾ, ಬ್ರಹ್ಮಚಾರಿಣಿ ಹೀಗೆ ಹತ್ತುಮೂರ್ತಿಗಳನ್ನು ಪೂಜಿಸಲಾಗುತ್ತದೆ.
ನವರಾತ್ರಿಯ ಒಂಭತ್ತು ದಿನಗಳ ಕಾಲ ಒಂದೊಂದು ಪೂಜೆ ನಡೆಯುತ್ತದೆ. ಲಲಿತಾ ಪಂಚಮಿ, ಶಾರದಾ ಪೂಜೆ, ಸರಸ್ವತಿ ಪೂಜೆ, ದುರ್ಗಾಪೂಜೆ ನಡೆಯುತ್ತದೆ. ನವರಾತ್ರಿಯ ಒಂಬತ್ತನೆಯ ದಿನ ಆಯುಧ ಪೂಜೆ ನಡೆಯುತ್ತದೆ. ಆ ದಿನ ವಾಹನಗಳಿಗೆ, ಕಂಪ್ಯೂಟರ್, ಅಡುಗೆ ಸಾಮಾಗ್ರಿಗಳು, ಕೃಷಿ ಸಾಧನಗಳು, ಮಷಿನ್ ಮುಂತಾದ ಜನರಿಗೆ ಅನ್ನ ಕೊಡಲು ಉಪಯೋಗವಾಗುವ ವಸ್ತುಗಳನ್ನು ಪೂಜಿಸುತ್ತಾರೆ. ಹೀಗೆ ದಿನೋ ಪಯೋಗಿ ವಸ್ತುಗಳನ್ನು ಪೂಜಿಸುವುದರಿಂದ ಹಾಗೂ ವಾಹನ ಇನ್ನಿತರ ಸಲಕರಣೆಗಳನ್ನು ಆ ದಿನ ಕೊಂಡು ಕೊಳ್ಳುವುದಿಂದ ಯಶಸ್ಸು ಪ್ರಾಪ್ತಿಯಾಗುತ್ತದೆ ಹಾಗೂ ಕೆಲಸ ಕಾರ್ಯಗಳು ನಿರ್ವಿಗ್ನವಾಗಿ ನೆರವೇರುವುದು ಎಂದು ಜನರ ನಂಬಿಕೆ.
ಶರದ್ ನವಾತ್ರಿಯ ಕೊನೆಯ ಮೂರು ದಿನಗಳನ್ನು ಅಷ್ಟಮಿ, ನವಮಿ, ಹಾಗೂ ವಿಜಯ ದಶಮಿ ಎಂದು ಕರೆಯುತ್ತಾರೆ. ಆ ದಿನಗಳಲ್ಲಿ ವಿದ್ಯಾದೇವತೆಯಾದ ಸರಸ್ವತಿಯನ್ನು ಪೂಜಿಸುತ್ತಾರೆ. ಹಾಗೂ ಶಾರದಾ ಪೂಜಾ ದಿನ ಮನೆಗಳಲ್ಲಿ, ನರ್ಸರಿ ಶಾಲೆಗಳಲ್ಲಿ, ದೇವಾಲಯಗಳಲ್ಲಿ ಪುಸ್ತಕವನ್ನು ಪೂಜಿಸುತ್ತಾರೆ. ಅದೇ ರೀತಿ ವಿಜಯದಶಮಿ ದಿನ ಮಕ್ಕಳಿಗೆ ಓದುವ ಹಾಗೂ ಬರವಣಿಗೆಯ ಆರಂಭ ಮಾಡುತ್ತಾರೆ, ಅದಕ್ಕೆ ವಿದ್ಯಾರಂಭಂ ಎಂದು ಕರೆಯುತ್ತಾರೆ.
ನವರಾತ್ರಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಮೊದಲ ಮೂರುದಿನಗಳ ಕಾಲ ದುರ್ಗಾ ಮಾತೆಯನ್ನು ಪೂಜಿಸುತ್ತಾರೆ. ಆಕೆಯನ್ನು ದುಷ್ಟರನ್ನು ಶಮನ ಮಾಡುವ ಅಥವಾ ನಮ್ಮಲ್ಲಿರುವ ಅವಗುಣಗಳನ್ನು ನಾಶಮಾಡುವ ಕಾಳಿ ಎಂದು ಕರೆಯುತ್ತಾರೆ. ನಂತರದ ಮೂರು ದಿನಗಳಲ್ಲಿ ದೇವಿಯನ್ನು ಲಕ್ಷ್ಮಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ಆಕೆಯನ್ನು ಧನ ಲಕ್ಷ್ಮಿ, ಸೌಭಾಗ್ಯಲಕ್ಷ್ಮಿ ಎಂದು ಕರೆಯುತ್ತಾರೆ. ಲಕ್ಷ್ಮಿಯನ್ನು ಕೇಳಿದ್ದನ್ನು ನೀಡುವ ಭಾಗ್ಯ ದೇವತೆಯ ರೂಪದಲ್ಲಿ ಆರಾಧಿಸುತ್ತಾರೆ. ಕೊನೆಯ ಮೂರು ದಿನಗಳ ಕಾಲ ವಿದ್ಯಾ ದೇವತೆಯಾದ ಸರಸ್ವತಿ ಮಾತೆಯನ್ನು ಪೂಜಿಸುತ್ತಾರೆ. ಜೀವನದಲ್ಲಿ ಯಶಸ್ಸು ಲಭಿಸಲು ಸರಸ್ವತಿಯನ್ನು ಆರಾಧಿ ಸುತ್ತಾರೆ. ನವರಾತ್ರಿ ದಿನಗಳಲ್ಲಿ ಪುಟ್ಟ ಮಕ್ಕಳು ನವದುರ್ಗೆಯರ ಅಲಂಕಾರ ಮಾಡಿಕೊಂಡು ಸಂಭ್ರಮಿಸುತ್ತಾರೆ.
ನವರಾತ್ರಿ ಹಬ್ಬ ದುರ್ಗಾ ದೇವಿ ಮತ್ತು ಆಕೆಯ ಒಂಭತ್ತು ಅವತಾರಗಳಿಗೆ ಮೀಸಲು. ನವರಾತ್ರಿಯು ಅಶ್ವಿಜ ಮಾಸದಲ್ಲಿ ಅಮವಾಸ್ಯೆಯ ಮರುದಿನದಿಂದ ಆರಂಭವಾಗುತ್ತದೆ. ಈ ಹಬ್ಬವನ್ನು ದೇಶದ ಎಲ್ಲಾ ಕಡೆಗಳಲ್ಲೂ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಕರ್ನಾಟಕ ಈ ಬಾರಿ 401 ನೇ ನವರಾತ್ರಿ ವರ್ಷಾಚರಣೆ ಸಂಭ್ರಮದಲ್ಲಿದೆ. ನಮ್ಮ ರಾಜ್ಯದಲ್ಲಿ ನವರಾತ್ರಿ ಆರಂಭವಾದುದು 1610ರಲ್ಲಿ ಅದನ್ನು ರಾಜ ಒಡೆಯರು ಆರಂಭಿಸಿದರು. ಇಂದು ನಾವು ನವರಾತ್ರಿ ಮಹೋತ್ಸವವನ್ನು ವಿಜಯನಗರ ಸಾಮ್ರಾಜ್ಯದ ಆಚರಣೆ ರೀತಿಯನ್ನು ಅನುಸರಿಸುತ್ತಿದ್ದೇವೆ. ಕರುನಾಡಲ್ಲಿ ನವರಾತ್ರಿಯನ್ನು ನಾಡಹಬ್ಬ ಎಂದೂ ಕರೆಯುತ್ತಾರೆ.
ಪಾವನಾ ಡಿ. ಆಚಾರ್ಯ
ಕೋಟೆಕಾರ್
Click this button or press Ctrl+G to toggle between Kannada and English