ಆನೇಕಲ್ : ಈತ ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ. ಪ್ರತಿಷ್ಠಿತ ಕಂಪನಿಯೊಂದರ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ಕೆಯಾಗಿದ್ದ. ವರ್ಷಕ್ಕೆ 14 ಲಕ್ಷ ರೂಪಾಯಿ ಸಂಬಳ ಬರುವ ಕೆಲಸ ಅದಾಗಿತ್ತು. ಕಂಪನಿ ಕಾಲ್ ಲೆಟರ್ನ್ನೂ ಕೊಟ್ಟಿತ್ತು.
ಇಷ್ಟೆಲ್ಲ ಆದ ಮೇಲೆ ಈಗ ಆ ಯುವಕ ತಾನು ಓದುತ್ತಿದ್ದ ಇಂಜಿನಿಯರಿಂಗ್ ಕಾಲೇಜಿನ ಏಳನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಮೃತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದೆ. ಹರ್ಷ ಮೃತ ವಿದ್ಯಾರ್ಥಿ. ಈತನನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿತ್ತು. ಅಷ್ಟೇ ಅಲ್ಲದೆ ಅವನಿಗೆ ಬಂದ ಕೆಲಸದ ಆಯ್ಕೆ ಲೆಟರ್ನ್ನು ಅವರ ಎದುರೇ ಹರಿದು ಹಾಕಿತ್ತು. ಇದರಿಂದ ಮನನೊಂದ ಹರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾಲೇಜಿನ ಊಟದ ವ್ಯವಸ್ಥೆ ಸರಿಯಿಲ್ಲ ಎಂದು ವಿದ್ಯಾರ್ಥಿಗಳು ಕಳೆದ ತಿಂಗಳು ಪ್ರತಿಭಟನೆ ನಡೆಸಿದ್ದರು. ಅದರಲ್ಲಿ ಹರ್ಷನೂ ಇದ್ದ. ಪ್ರತಿಭಟನೆ ವೇಳೆ ಬಸ್ಸಿಗೆ ಕಲ್ಲು ತೂರಿದ್ದ ಆರೋಪ ಹರ್ಷನ ಮೇಲೆ ಇತ್ತು. ಇದೇ ಕಾರಣಕ್ಕೆ ಒಟ್ಟು 20 ಜನ ವಿದ್ಯಾರ್ಥಿಗಳೊಂದಿಗೆ ಹರ್ಷನನ್ನೂ ಅಮಾನತು ಮಾಡಲಾಗಿತ್ತು. ಇಂದು ಹರ್ಷನ ಪಾಲಕರನ್ನು ಕರೆಯಿಸುವುದಾಗಿ ಕೂಡ ಪ್ರಿನ್ಸಿಪಾಲ್ ಹೇಳಿದ್ದರು.
ಹರ್ಷ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಕಾಲೇಜಿನ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English