ಮೈಸೂರು : ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಿದೆ ಎಂದು ಆರೋಪಿಸಿ ಪಾಲಿಕೆ ಸದಸ್ಯರೊಬ್ಬರು ಪ್ರತಿಭಟನೆ ಮಾಡಿದ್ದಾರೆ. ತನ್ನ ಮುಂದೆ ಖಾಲಿ ಕೊಡವನ್ನಿಟ್ಟುಕೊಂಡು ಪಾಲಿಕೆಯ ಸದಸ್ಯರೋರ್ವರು ಕುಡಿಯುವ ನೀರನ್ನು ಸರಿಯಾಗಿ ನೀಡುವಂತೆ ಒತ್ತಾಯಿಸಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ ಘಟನೆ ಇಂದು ಪಾಲಿಕೆಯ ಸಭೆಯಲ್ಲಿ ನಡೆದಿದೆ.
ಮಂಗಳವಾರ ಮೈಸೂರು ಮಹಾನಗರಪಾಲಿಕೆಯಲ್ಲಿ ಸಾಮಾನ್ಯ ಸಭೆಯು ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆಯುತ್ತಿತ್ತು.
ರಾಜ್ಯದಲ್ಲಿ ನೆರೆ ಪರಿಸ್ಥಿತಿ ಇದ್ದರೂ ನಗರದಲ್ಲಿ ಕುಡಿಯುವ ನೀರಿಗೆ ಜನರು ಪರದಾಡುವಂತಾಗಿದೆ. ಇದಕ್ಕೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಪಾಲಿಕೆಯ ಸದಸ್ಯರು ಆಕ್ರೋಶ ವ್ಯಕ್ತಪಡಿಸುತಿದ್ದರು. ಆ ಸಂದರ್ಭದಲ್ಲಿ ಸದಸ್ಯ ಮ.ವಿ.ರಾಮ್ ಪ್ರಸಾದ್ ಅವರು ಖಾಲಿ ಕೊಡವನ್ನಿರಿಸಿಕೊಂಡು ನೀರು ನೀಡುವಂತೆ ಒತ್ತಾಯಿಸುವ ಘೋಷಣೆ ಇರುವ ಧಿರಿಸನ್ನು ಧರಿಸಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಪ್ರತಿಭಟನೆ ತೀವ್ರಗೊಂಡದ್ದನ್ನು ಮನಗಂಡು ಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ಮೇಯರ್ ಪುಷ್ಪಲತಾ ಜಗನ್ನಾಥ್ ಭರವಸೆ ನೀಡಿದರು.
Click this button or press Ctrl+G to toggle between Kannada and English