ಮಂಗಳೂರು : ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ‘ಕ್ಯಾರ್’ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಗೋಚರಿಸಿದ್ದು, ಮುಂದಿನ 48 ಗಂಟೆ ಕಾಲ ಭಾರಿ ಮಳೆ ಕರಾವಳಿಯನ್ನು ಅಪ್ಪಳಿಸುವ ಮುನ್ಸೂಚನೆ ದೊರೆತಿದೆ.
ಗುರುವಾರ 15.4 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 70.4 ಡಿಗ್ರಿ ಪೂರ್ವ ರೇಖಾಂಶದಲ್ಲಿ ವಾಯುಭಾರ ಕುಸಿತ ಪ್ರದೇಶವಿದ್ದು ಮಹಾರಾಷ್ಟ್ರದ ರತ್ನಗಿರಿಯಿಂದ 360 ಕಿ.ಮೀ. ಪಶ್ಚಿಮ-ನೈಋತ್ಯ ಮತ್ತು 490 ಕಿ.ಮೀ. ನೈಋತ್ಯ ಹಾಗೂ ಓಮನ್‌ನ ಸಲಾಹ್‌ನಿಂದ 1750 ಕಿ.ಮೀ. ಪೂರ್ವ-ಆಗ್ನೇಯ ದಿಕ್ಕಿನಲ್ಲಿ ಕೇಂದ್ರೀಕೃತವಾಗಿದೆ.
ಚಂಡಮಾರುತ ಅ.25ರಂದು ಸಾಯಂಕಾಲದ ವರೆಗೆ ಪೂರ್ವ-ಈಶಾನ್ಯದತ್ತ ಚಲಿಸಲಿದ್ದು, ಬಳಿಕ ಹಿಂದಕ್ಕೆ ಪಶ್ಚಿಮದತ್ತ ತಿರುಗಿ ಕ್ರಮೇಣ ತೀವ್ರತೆ ಪಡೆದು 72 ಗಂಟೆಯೊಳಗೆ ಓಮನ್ ಮತ್ತು ಯೆಮನ್ ತೀರಕ್ಕೆ ಸಾಗಿ ಬಲ ಕಳೆದುಕೊಳ್ಳಲಿದೆ.
ರೆಡ್ ಅಲರ್ಟ್ ಮುನ್ಸೂಚನೆ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ದ.ಕ, ಉಡುಪಿ ಜಿಲ್ಲೆಗಳಲ್ಲಿ ಬುಧವಾರ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರ ರೆಡ್ ಅಲರ್ಟ್ ಘೋಷಿಸಿದೆ. ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಚಂಡಮಾರುತ ತೀವ್ರತೆ ಪಡೆಯುತ್ತಿದ್ದಂತೆ ಮಳೆ ಇನ್ನಷ್ಟು ಬಿರುಸಾಗುವ ಸಾಧ್ಯತೆ ಇದೆ. ಗುರುವಾರ ಬೆಳಗ್ಗೆ ಸ್ವಲ್ಪ ಬಿಡುವು ನೀಡಿತ್ತಾದರೂ, ಬಳಿಕ ಮತ್ತೆ ಬಿರುಸು ಪಡೆದು, ದಿನವಿಡೀ ಸುರಿದಿದೆ. ಶನಿವಾರದವರೆಗೆ ಮಳೆಯಾಗುವ ಮಳೆಯ ಮುನ್ನೆಚ್ಚರಿಕೆ ಇದ್ದು, ಭಾನುವಾರದಿಂದ ಕಡಿಮೆಯಾಗಲಿದೆ. ಮಳೆ ಕಡಿಮೆಯಾಗಿ ನೀರಿನ ಮಟ್ಟ ನೀರಿನ ಮಟ್ಟ ಇಳಿದಿದ್ದ ನದಿಗಳಲ್ಲಿ ಮತ್ತೆ ಮಟ್ಟ ಹೆಚ್ಚಾಗಿದೆ.
ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ಕೇಂದ್ರ ಸ್ಥಾನದಲ್ಲಿರುವಂತೆ ಹಾಗೂ ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ಅಧಿಕಾರಿಗಳು ಜಾಗೃತರಾಗಿದ್ದು, ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸುವಂತೆ ದ.ಕ. ಡಿಸಿ ಸೂಚನೆ ನೀಡಿದ್ದಾರೆ. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂ ಸಂಖ್ಯೆ 1077ನ್ನು ಸಂಪರ್ಕಿಸಬಹುದು.
ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲೂ ಬಿರುಸಿನ ಮಳೆಯಾಗುತ್ತಿದ್ದು, ಕೇರಳದ ನಾನಾ ಜಿಲ್ಲೆಗಳಿಗೆ ಎಚ್ಚರಿಕೆ ಸಂದೇಶ ನೀಡಿದೆ. ಕಾಸರಗೋಡು, ಕಣ್ಣೂರು, ವಯನಾಡು, ಕೋಳಿಕ್ಕೋಡ್, ಮಲಪ್ಪುರಂ, ತೃಶ್ಯೂರ್, ಎರ್ನಾಕುಳಂ, ಕೊಟ್ಟಾಯಂ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ತಾಸು ಗಾಳಿಮಳೆ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಭಾರಿ ಗಾಳಿ-ಮಳೆ ಸಾಧ್ಯತೆ ಕರ್ನಾಟಕ ಕರಾವಳಿಗೆ ಚಂಡಮಾರುತ ಭೀತಿ ಕಡಿಮೆಯಾದರೂ, ಎರಡು ದಿನ ಗಾಳಿ ಮಳೆಯಾಗಲಿದೆ. 115.5 ಮಿ.ಮೀ.ನಿಂದ 204.4 ಮಿ.ಮೀ. ಮಳೆ ಸುರಿಯುವ ಸಾಧ್ಯತೆ ಇದೆ. 40-50 ಕಿ.ಮೀ.ನಿಂದ ಆರಂಭಗೊಂಡು 60 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಜತೆಗೆ ಸಮುದ್ರದಲ್ಲಿ ಅಲೆಗಳ ಅಬ್ಬರವೂ ಹೆಚ್ಚಾಗಲಿದ್ದು, ಮಂಗಳೂರಿನಿಂದ ಕಾರವಾರದ ವರೆಗೆ 3ರಿಂದ 3.3 ಮೀ. ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಮೀನುಗಾರರಿಗೆ ಎಚ್ಚರಿಕೆ, ಬೋಟುಗಳು ಸುರಕ್ಷಿತ ಸ್ಥಳಕ್ಕೆ: ಅಕ್ಟೋಬರ್ 26ರ ವರೆಗೆ ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗಿರುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ. ಸಂಭಾವ್ಯ ಅನಾಹುತವನ್ನು ತಡೆಯುವ ಸಲುವಾಗಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರುವಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಈಗಾಗಲೇ ಶೇ.75ರಷ್ಟು ಬೋಟ್‌ಗಳು ಬಂದರ್‌ನಲ್ಲಿ ಲಂಗರು ಹಾಕಿವೆ ಎಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ. ಕಡಲು ವಿಸ್ತಾರವಾಗುತ್ತಿರುವ ಹಿನ್ನೆಲೆಯಲ್ಲಿ ಬೋಟುಗಳು ಅಪಾಯಕ್ಕೆ ಸಿಲುಕಿವೆ. ಕಡಲತೀರದಲ್ಲಿ ಇರಿಸಿರುವ ಬೋಟುಗಳನ್ನು ಬಹುತೇಕ ಮೀನುಗಾರರು ತೆರವುಗೊಳಿಸಿ ಸುರಕ್ಷಿತ ಎತ್ತರ ಪ್ರದೇಶಕ್ಕೆ ಸ್ಥಳಾಂತರಗೊಳಿಸಿದ್ದಾರೆ. ಗಂಗೊಳ್ಳಿಯ ಖಾರ್ವಿಕೇರಿ ಮತ್ತು ಲೈಟ್‌ಹೌಸ್ ಪ್ರದೇಶದಲ್ಲಿ ತೀರದಲ್ಲಿ ನಿಲ್ಲಿಸಿದ್ದ ದೋಣಿಗಳು ಅಲೆಗಳ ಹೊಡೆತಕ್ಕೆ ಸಿಲುಕಿದ್ದು, ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ಯಲಾಯಿತು. ಆಳಸಮುದ್ರ ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡಿದ್ದು, ಸಮುದ್ರಕ್ಕೆ ತೆರಳಿದವರು ಹೆಚ್ಚಿನವರು ವಾಪಸ್ಸಾಗಿದ್ದಾರೆ.
ಪೋರ್ಟ್‌ನಲ್ಲಿ ಮುನ್ನೆಚ್ಚರಿಕೆ ಸಂಕೇತ: ಮಂಗಳೂರು ಸಹಿತ ಕರ್ನಾಟಕದ ಎಲ್ಲ ಬಂದರುಗಳಲ್ಲಿ ಚಂಡಮಾರುತ ಮುನ್ನೆಚ್ಚರಿಕೆ ಸಂಕೇತ 3ನ್ನು ಪ್ರದರ್ಶಿಸುವಂತೆ ತಿರುವನಂತಪುರ ಹವಾಮಾನ ಇಲಾಖೆ ಸೂಚನೆ ನೀಡಿದೆ. ಅದರಂತೆ ನವಮಂಗಳೂರು ಬಂದರಿನಲ್ಲಿಯೂ ಸಂಕೇತ ಪ್ರದರ್ಶಿಸಲಾಗಿದೆ.
ಕಡಲ್ಕೊರೆತ ತೀವ್ರ, ಜನರ ಸ್ಥಳಾಂತರ: ಚಂಡಮಾರುತ ಪರಿಣಾಮ ಈಗಾಗಲೇ ಉಳ್ಳಾಲ, ಸೋಮೇಶ್ವರ, ಪಣಂಬೂರು, ಸಸಿಹಿತ್ಲು, ತಣ್ಣೀರುಬಾವಿ, ಹೆಜಮಾಡಿ, ಪಡುಬಿದ್ರಿ, ಕಾಪು, ಗಂಗೊಳ್ಳಿ, ತ್ರಾಸಿ, ಮರವಂತೆ ಮತ್ತಿತರ ಕಡೆ ಕಡಲಬ್ಬರ ಜೋರಾಗಿದೆ. ಬೃಹತ್ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿರುವುದರಿಂದ ಹಲವು ಮನೆಗಳು ಅಪಾಯಕ್ಕೆ ಸಿಲುಕಿವೆ. ಉಳ್ಳಾಲದಲ್ಲಿ ಸಮುದ್ರದ ಬದಿಯ ಮನೆಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಉಳ್ಳಾಲದ ಕೈಕೋ, ಮುಕಚ್ಚೇರಿ, ಕಿಲಿರಿಯಾ ನಗರ ಪ್ರದೇಶದಲ್ಲಿ ಕಡಲಬ್ಬರ ತಡೆಗೆ ತಾತ್ಕಾಲಿಕವಾಗಿ ಹಾಕಲಾಗಿದ್ದ ಕಲ್ಲುಗಳು ಸಮುದ್ರದ ಒಡಲು ಸೇರುತ್ತಿವೆ. ಸೋಮೇಶ್ವರ ಭಾಗದ ಉಚ್ಚಿಲದಲ್ಲೂ ಕಡಲ್ಕೊರೆತ ಜೋರಾಗಿದೆ. ಉಚ್ಚಿಲದ ಬಟ್ಟಂಪ್ಪಾಡಿ ಸಮೀಪ ನಾಲ್ಕು ತೆಂಗಿನ ಮರಗಳು ಧರಾಶಾಯಿಯಾಗಿವೆ. ಸೋಮೇಶ್ವರ ದೇವಸ್ಥಾನ ಬಳಿ ಮೋಹನ್, ಪೆರಿಬೈಲ್‌ನಲ್ಲಿ ಝೊಹರಾ ಅಬ್ದುಲ್ಲ ಎಂಬುವರ ಮನೆಗಳಿಗೆ ದೈತ್ಯ ಅಲೆಗಳು ಅಪ್ಪಳಿಸುತ್ತಿವೆ. ಮರವಂತೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ರಕ್ಕಸ ಅಲೆಗಳು ಅಪ್ಪಳಿಸುತ್ತಿವೆ.
ಉಡುಪಿಯಲ್ಲಿ ಅತ್ಯಧಿಕ ಮಳೆ: ಗುರುವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಬಂಟ್ವಾಳ 81.8, ಬೆಳ್ತಂಗಡಿ 56.5, ಮಂಗಳೂರು 63.6, ಪುತ್ತೂರು 63.4, ಸುಳ್ಯ 30.4 ಸಹಿತ ದ.ಕ. ಜಿಲ್ಲೆಯಲ್ಲಿ ಸರಾಸರಿ 59.1 ಮಿ.ಮೀ. ಮಳೆ ದಾಖಲಾಗಿದೆ. ಉಡುಪಿ 97.1, ಕುಂದಾಪುರ 86.4, ಕಾರ್ಕಳ 59.7 ಸಹಿತ ಉಡುಪಿ ಜಿಲ್ಲೆಯಲ್ಲಿ 81.20 ಮಿ.ಮೀ. ಸರಾಸರಿ ಮಳೆ ದಾಖಲಾಗಿದೆ.
ಉಳ್ಳಾಲದಲ್ಲಿ ಭಾರಿ ಗಾಳೆ ಮಳೆಯಿಂದಾಗಿ ಇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜಿಕಲ್ಲು ದರ್ಬಾಲ ಕಂಪೌಂಡ್ ಬಳಿ ಮದ್ರಸವೊಂದರ ಶೌಚಗೃಹ ಕಟ್ಟಡ ಬುಧವಾರ ತಡರಾತ್ರಿ ಸಂಪೂರ್ಣ ಕುಸಿದು ಬಿದ್ದಿದೆ. ಸಮೀಪದಲ್ಲಿರುವ ಅಹ್ಮದ್ ಬಾವ ಎಂಬುವರ ಮನೆಗೆ ಕುಸಿದು ಬಿದ್ದಿರುವುದರಿಂದ ಮನೆಯ ಕಿಟಕಿ ಹಾಗೂ ಗೋಡೆಗೆ ಹಾನಿಯಾಗಿದೆ.
ಪುತ್ತೂರು-ಒಳತ್ತಡ್ಕ-ಪಾಣಾಜೆ ರಸ್ತೆಯಲ್ಲಿನ ಚೆಲ್ಯಡ್ಕ ಮುಳುಗು ಸೇತುವೆ ಜಲಾವೃತಗೊಂಡಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಬಸ್‌ಗಳು ಮಾಣಿ-ಮೈಸೂರು ಹೆದ್ದಾರಿಯಾಗಿ ಸಂಟ್ಯಾರು-ಕೈಕಾರ ಮೂಲಕವಾಗಿ ಸಂಚರಿಸುತ್ತಿವೆ.
ಮಂಗಳೂರು ನಗರದ ಮಣ್ಣಗುಡ್ಡ ಬಳಿ ಕ್ರಿಸ್‌ಮನ್ ಟ್ರೀ ಬುಧವಾರ ರಾತ್ರಿ ಮನೆಯ ಮೇಲೆ ಬಿದ್ದು ಭಾಗಶಃ ಹಾನಿಯಾಗಿದೆ.
ಬುಧವಾರ ರಾತ್ರಿ ಸುರಿದ ಮಳೆಗೆ ಹೆಬ್ರಿ ತಾಲೂಕಿನ ವರಂಗ ಗ್ರಾಮದ ವನಜ ಪೂಜಾರ್ತಿ ಅವರ ಮನೆಯ ಗೋಡೆ ಕುಸಿದು 20 ಸಾವಿರ ರೂ. ನಷ್ಟ ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ನೆರಿಯ ಬಲಿಪಾಯ ಎಂಬಲ್ಲಿ ಸಕೀನ ಎಂಬುವರ ಅಂಗಡಿಯ ಶೀಟು ಗಾಳಿಗೆ ಹಾರಿ ಹೋಗಿದ್ದು, ಅಂಗಡಿಗೆ ಹಾನಿಯಾಗಿದೆ.
ವಿಟ್ಲ ಕೇಪು ಗ್ರಾಮದ ಅಮೈ ವೆಂಕಟ್ರಮಣ ಭಟ್ ಅವರ ಮನೆಯ ಪಕ್ಕದ ಆವರಣಗೋಡೆ ಸಾರ್ವಜನಿಕ ಕಾಲುದಾರಿಗೆ ಕುಸಿದು ಬಿದ್ದಿದ್ದು, 1 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
Click this button or press Ctrl+G to toggle between Kannada and English