ಮಡಿಕೇರಿ : ಬಿಜೆಪಿಯಲ್ಲಿ ಕೆಲಸ ಮಾಡುವ ನಾಯಕರ ಕೊರತೆಯಿದ್ದು, ಅದಕ್ಕಾಗಿ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ವೀಕ್ಷಕ ವೆಂಕಪ್ಪ ಗೌಡ ಅವರು ಲೇವಡಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ನಗರದಲ್ಲಿ ನಡೆದ ಜಿ.ಪಂ.ಸಂಕೀರ್ಣ ಉದ್ಘಾಟನೆ ಸಮಾರಂಭದಲ್ಲಿ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರನ್ನು ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದಾರೆ. ಇದನ್ನು ಗಮನಿಸಿದರೆ ಬಿಜೆಪಿಯಲ್ಲಿ ಕೆಲಸ ಮಾಡುವ ನಾಯಕರ ಕೊರತೆ ಇರುವುದು ಎದ್ದು ಕಾಣುತ್ತಿದೆ ಎಂದು ಟೀಕಿಸಿದರು.
ಕೊಡಗು ಸೇರಿದಂತೆ ರಾಜ್ಯದ ವಿವಿಧೆಡೆ ಉಂಟಾಗಿರುವ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ಒದಗಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ವಿಫಲವಾಗಿವೆ. ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಸಚಿವರುಗಳು ಪ್ರವಾಸ ಹೋದಲ್ಲೆಲ್ಲಾ ಸಂತ್ರಸ್ತರು ಘೇರಾವ್ ಹಾಕುತ್ತಿದ್ದಾರೆ. ಇದು ಬಿಜೆಪಿಯಲ್ಲಿ ಕೆಲಸ ಮಾಡದ ನಾಯಕರು ಇರುವುದಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.
ಕೊಡಗು ಜಿಲ್ಲೆಯಲ್ಲೂ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಸಮ್ಮಿಶ್ರ ಸರಕಾರದಿಂದ ಮನೆ ಹಾಗೂ ಪರಿಹಾರ ಒದಗಿಸುವಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಮುಂಚೂಣಿಯಲ್ಲಿದ್ದಾರೆ. ಇದೇ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ವೀಣಾ ಅಚ್ಚಯ್ಯ ಅವರನ್ನು ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದಾರೆ ಎಂದು ವೆಂಕಪ್ಪ ಗೌಡ ವಿಶ್ಲೇಷಿಸಿದರು.
ರಾಜ್ಯದಲ್ಲಿ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಮೂಲಕ ಅಧಿಕಾರಕ್ಕೆ ಏರಿದ್ದು, ಮುಂದಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ. ಮಾತ್ರವಲ್ಲದೆ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸದಾಗಿ ಚುನಾವಣೆ ನಡೆಸಿದರೆ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ. ಇದಕ್ಕೆ ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಲ್ಲಿ ಬಿಜೆಪಿಯ ಮತಗಳು ವಿಭಜನೆಯಾಗಿರುವುದೇ ಸಾಕ್ಷಿ ಎಂದು ವೆಂಕಪ್ಪಗೌಡ ಹೇಳಿದರು.
ಚುನಾವಣೆ ಗೆಲ್ಲುವುದಕ್ಕಾಗಿ ಬಿಜೆಪಿ ಕೆಲಸ ಮಾಡಬೇಕಾಗಿಲ್ಲ. ಅದು ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡೇ ಚುನಾವಣೆಗಳನ್ನು ಗೆಲ್ಲುತ್ತದೆ. ಇತ್ತೀಚೆಗೆ ನಡೆದ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಬಿಜೆಪಿ ಇದೇ ತಂತ್ರವನ್ನು ಅನುಸರಿಸಿದೆ. ಚುನಾವಣೆ ಘೋಷಣೆಯಾದಲ್ಲಿಂದ ಮತದಾನ ನಡೆಯುವ ದಿನದವರೆಗೂ ಬಿಜೆಪಿ ನಾಯಕರು ದೇಶದೊಳಗೆ ಉಗ್ರರು ನುಸುಳಿರುವುದಾಗಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದರು. ಆದರೆ ಚುನಾವಣೆ ಮುಗಿದ ಬಳಿಕ ಆ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಉಗ್ರರು ನುಸುಳಿದ್ದರೆ ಒಬ್ಬರನ್ನಾದರೂ ಬಂಧಿಸಬೇಕಾಗಿತ್ತು. ಆದರೆ ಯಾರನ್ನೂ ಬಂಧಿಸಿಲ್ಲ, ಇದು ಬಿಜೆಪಿಯ ಚುನಾವಣಾ ತಂತ್ರ ಎಂದು ಟೀಕಿಸಿದರು.
ಬಿಜೆಪಿ ಆಡಳಿತದಲ್ಲಿ ದೇಶದ ಆರ್ಥಿಕ ಸ್ಥಿತಿ ಕುಸಿದಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಆರ್ಥಿಕ ಸ್ಥಿತಿಯಲ್ಲಿ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು. ಆದರೆ ಇಂದು ಅದು ಎಲ್ಲಿಗೆ ತಲುಪಿದೆ ಎಂಬುದು ಎಲ್ಲರಿಗೂ ತಿಳಿದಿದೆ. ದೇಶದಲ್ಲಿರುವ ಬಹುತೇಕ ಕಂಪೆನಿಗಳು ಮುಚ್ಚುತ್ತಿವೆ. ಯುವಜನರಿಗೆ ಉದ್ಯೋಗ ದೊರಕುತ್ತಿಲ್ಲ ಎಂದು ತಿಳಿಸಿದ ಅವರು, ಇದನ್ನು ಪ್ರಶ್ನಿಸುವವರ ವಿರುದ್ಧ ಕೇಂದ್ರ ಸರಕಾರ ಇಡಿ. ಸಿಬಿಐ ಸೇರಿದಂತೆ ವಿವಿಧ ಇಲಾಖೆಗಳನ್ನು ಬಳಸಿಕೊಂಡು ದಬ್ಬಾಳಿಕೆ ನಡೆಸುತ್ತಿದೆ ಎಂದು ವೆಂಕಪ್ಪಗೌಡ ಆರೋಪಿಸಿದರು.
ಬೇನಾಮಿ ಆಸ್ತಿ ಕೇವಲ ಕಾಂಗ್ರೆಸ್ಸಿಗರಲ್ಲಿ ಮಾತ್ರವೇ ಇರುವುದೇ ಎಂದು ಪ್ರಶ್ನಿಸಿದ ವೆಂಕಪ್ಪಗೌಡ ಅವರು, ಕೊಡಗಿನವರೂ ಸೇರಿದಂತೆ ದೇಶದಲ್ಲಿರುವ ಬಿಜೆಪಿ ನಾಯಕರಲ್ಲಿ ಹಣವಿಲ್ಲವೇ ? ಅಲ್ಲೆಲ್ಲಾ ಯಾಕೆ ಇಡಿ ದಾಳಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಬಿಜೆಪಿ ತನ್ನನ್ನು ಪ್ರಶ್ನಿಸುವವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ಸಿಗರು ಗಾಂಧಿ ಟೋಪಿ ಧರಿಸುವುದನ್ನು ಟೀಕಿಸುತ್ತಿದ್ದ ಬಿಜೆಪಿ ಇದೀಗ ಗಾಂಧಿ ಜಯಂತಿ ಆಚರಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದೆ. ಒಂದೆಡೆ ಅಶಾಂತಿಯನ್ನು ಒಪ್ಪಿಕೊಳ್ಳುವ ಬಿಜೆಪಿ ಮತ್ತೊಂದೆಡೆ ಶಾಂತಿಯನ್ನು ಅಪ್ಪಿಕೊಳ್ಳುವ ನಾಟಕವಾಡುತ್ತಿದೆ. ಗೋಡ್ಸೆಯನ್ನು ವೈಭವೀಕರಿಸುವ ಬಿಜೆಪಿಗೆ ಗಾಂಧಿ ಜಯಂತಿಯನ್ನು ಆಚರಿಸುವ ನೈತಿಕತೆಯಾದರೂ ಎಲ್ಲಿದೆ ಎಂದು ಪ್ರಶ್ನಿಸಿದರು.
ಸಾವರ್ಕರ್ ಅವರಿಗೆ ಭಾರತರತ್ನ ನೀಡುವುದರ ಔಚಿತ್ಯವನ್ನು ಪ್ರಶ್ನಿಸಿದ ಸಿದ್ದರಾಮಯ್ಯ ಅವರಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಬಿಜೆಪಿ ಮುಂದುವರಿದಿದೆ. ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಅವರು ಹೇಳಿರುವುದೆಲ್ಲಾ ಸತ್ಯ. ಇದನ್ನು ಕೆಪಿಸಿಸಿ ಕೂಡಾ ಸಮರ್ಥಿಸುತ್ತದೆ. ಗಾಂಧಿ ಹತ್ಯೆಯ ಸಂಚಿನಲ್ಲಿ ಸಾವರ್ಕರ್ ಕೂಡಾ ಭಾಗಿಯಾಗಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದರೆ ಹತ್ಯೆಯಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲದಿರುವುದರಿಂದ ಅವರನ್ನು ಆರೋಪ ಪಟ್ಟಿಯಿಂದ ಕೈಬಿಡಲಾಯಿತು ಎಂದು ವೆಂಕಪ್ಪ ಗೌಡ ಸಮರ್ಥಿಸಿಕೊಂಡರು.
ಈಗಾಗಲೇ ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳ ವಿವಿಧ ಬ್ಲಾಕ್‌ಗಳ ಸಭೆಗಳನ್ನು ನಡೆಸಲಾಗಿದ್ದು, ಅದರಂತೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಅಗತ್ಯವಿರುವ ಕಡೆಗಳಲ್ಲಿ ಬ್ಲಾಕ್, ವಲಯ ಹಾಗೂ ಬೂತ್ ಮಟ್ಟದ ಅಧ್ಯಕ್ಷರ ಬದಲಾವಣೆಗಳನ್ನೂ ಮಾಡಲಾಗುತ್ತದೆ. ಕಾರ್ಯಕರ್ತರಿಂದ ಸಂಗ್ರಹಿಸಲಾದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಪಕ್ಷದ ರಾಜ್ಯಾಧ್ಯಕ್ಷರಿಗೆ ದೀಪಾವಳಿ ಬಳಿಕ ನೀಡಲಾಗುತ್ತದೆ. ಅದರ ಅನ್ವಯ ಮುಂದಿನ ನಿರ್ಧಾರವನ್ನು ರಾಜ್ಯಾಧ್ಯಕ್ಷರು ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯುವುದು ನಿಶ್ವಿತ ಎಂದು ವೆಂಕಪ್ಪಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿಯ ಮತ್ತೋರ್ವ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವೀಕ್ಷಕ ಟಿ.ಎಂ.ಶಾಹಿದ್ ಅವರು ಮಾತನಾಡಿ, ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯಿಂದ ಹಿಡಿದು ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ಪಕ್ಷದ ಪುನರ್‌ಸಂಘಟನೆ ಮಾಡಲಾಗುತ್ತಿದೆ. ಅದರಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಬ್ಲಾಕ್ ಅಧ್ಯಕ್ಷರುಗಳ ಬದಲಾವಣೆಗೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರು ಕೊಡಗಿನವರೇ ಆಗಿರುವುದರಿಂದ ಕೊಡಗು ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಆಮೂಲಾಗ್ರವಾಗಿ ಬದಲಾಯಿಸುವುದರೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳನ್ನೂ ಗೆಲ್ಲುವ ಗುರಿ ಹೊಂದಲಾಗಿದೆ ಎಂದರು.
ದೇಶದ ಅಭಿವೃದ್ಧಿಗೆ ಬಿಜೆಪಿಯ ಕೊಡುಗೆ ಕೇವಲ ಶೇ.೫ರಷ್ಟಾಗಿದ್ದರೆ, ಕಾಂಗ್ರೆಸ್‌ನ ಕೊಡುಗೆ ಅಪಾರ. ಆದುದರಿಂದ ಮತದಾರರು ಇದೀಗ ಕಾಂಗ್ರೆಸ್‌ನ ಅಭಿವೃದ್ಧಿಪರವಾದ ಚಿಂತನೆಯನ್ನು ಬೆಂಬಲಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ನಡೆದ ಗದ್ದಲ, ಗೊಂದಲಕ್ಕೆ ವಿರೋಧಿ ಪಕ್ಷದ ಷಡ್ಯಂತ್ರವೇ ಕಾರಣವೆಂದು ಆರೋಪಿಸಿದರು.
ಅಧ್ಯಕ್ಷ ವಿ.ಪಿ.ಶಶಿಧರ್ ಅವರೊಂದಿಗೆ ಕೆಲವರು ವೈಯುಕ್ತಿಕ ದ್ವೇಷದಿಂದ ಕಲಹ ನಡೆಸಿದ್ದಾರೆ. ಅಲ್ಲದೆ ವಿರೋಧಿ ಪಕ್ಷದ ಒಂದು ಗುಂಪು ಸಭೆಗೆ ಹಾಜರಾಗಿ ಗೊಂದಲ ಸೃಷ್ಟಿಯಾಗುವಂತೆ ನೋಡಿಕೊಂಡಿತು ಎಂದರು.
ಶಶಿಧರ್ ಅವರ ಬಳಿ ಕೆಪಿಸಿಸಿ ವೀಕ್ಷಕ ವೆಂಕಪ್ಪ ಗೌಡ ಅವರು ಚರ್ಚಿಸಿದ್ದು, ಗೊಂದಲಕ್ಕೆ ತೆರೆ ಎಳೆಯಲಾಗಿದೆ ಎಂದು ಮಂಜುನಾಥ್ ಕುಮಾರ್ ಸ್ಪಷ್ಟಪಡಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ಅವರು ಜೋಕರ್ ಇದ್ದಂತೆ ಎಂದು ಆರೋಪಿಸಿದ ಅವರು ಈಶ್ವರಪ್ಪ ಅವರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲವೆಂದರು.
ಜಿಲ್ಲಾ ಕಾಂಗ್ರೆಸ್ ಖಜಾಂಚಿ ಎಂ.ಪಿ.ಮನುಮೇದಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್ ಹಾಗೂ ಮಡಿಕೇರಿ ಬ್ಲಾಕ್ ಅಧ್ಯಕ್ಷ ಅಪ್ರು ರವೀಂದ್ರ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English