ಟೀ ಕುಡಿದ ಹಣ ಕೇಳಿದಕ್ಕೆ ಹೋಟೆಲನ್ನೇ ಪುಡಿ ಮಾಡಿದ ಗಿರಾಕಿ !

2:46 PM, Thursday, October 31st, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Hotel ಮೈಸೂರು : ಟೀ ಕುಡಿದಿದ್ದಕ್ಕೆ ಹಣ ಕೇಳಿದ ಅಂಗಡಿಯವರ ಮೇಲೆರಗಿ ವ್ಯಕ್ತಿಯೋರ್ವ ಹಲ್ಲೆ ಮಾಡಿದ್ದಲ್ಲದೆ ಬಿಸ್ಕೆಟ್ ಕಂಟೇನರ್, ಗಾಜಿನ ಬಾಟಲಿಗಳು, ಟೇಬಲ್ ಕಿತ್ತು ಬಿಸಾಡಿ ರಂಪಾಟ ಮಾಡಿದ ಘಟನೆ ಮೈಸೂರಿನ ಎಂಜಿ ರಸ್ತೆಯಲ್ಲಿ ನಿನ್ನೆ ನಡೆದಿದ್ದು, ಆತನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಇದೀಗ ಪೊಲೀಸರ ಅತಿಥಿಯಾಗಿರುವ ವ್ಯಕ್ತಿಯನ್ನು ಮೈಸೂರಿನ ಕಾಕರವಾಡಿ ನಿವಾಸಿ ಕಲೀಂ(35) ಎಂದು ಗುರುತಿಸಲಾಗಿದ್ದು, ಟೀ ಅಂಗಡಿ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿ ಹೈಡ್ರಾಮ ನಡೆಸಿದ ವ್ಯಕ್ತಿಯಾಗಿದ್ದು, ಬಳಿಕ ಸಾರ್ವಜನಿಕ ರಿಂದ ಧರ್ಮದೇಟು ತಿಂದಿದ್ದಾನೆ. ನಿನ್ನೆ ಬೆಳಿಗ್ಗೆ 7.30 ರ ಸುಮಾರಿಗೆ ಎಂಜಿ ರಸ್ತೆಯ ಡಬಲ್ ಟ್ಯಾಂಕ್ ಬಳಿ ಇರುವ ಬಿಬಿ(ಬಾಬಾ ಬುಡನ್‍ಗಿರಿ) ಟೀ ಸ್ಟಾಲ್‍ಗೆ ಬಂದ ಕಲೀಂ, ಟೀ ಕುಡಿದು, ಸಿಗರೇಟ್ ಸೇದಿ ಹಣ ಕೊಡದೆ ಹೋಗಿದ್ದ. ಮತ್ತೆ 10 ಗಂಟೆಗೆ ಬಂದ ಆತ, ಟೀ ಕೇಳಿದ್ದು, ಬೆಳಿಗ್ಗೆ ಹಣ ಕೊಡದೆ ಹೋಗಿ ಮತ್ತೆ ಈಗ ಕೇಳಿದರೆ ಹೇಗೆ ಎಂದು ಅಂಗಡಿಯವರು ಟೀ ಕೊಡಲು ನಿರಾಕರಿಸಿದ್ದರು. ಅದರಿಂದ ಕೋಪಗೊಂಡ ಕಲೀಂ, ಅಂಗಡಿ ಹುಡುಗರ ಮೇಲೆರಗಿ ಹಲ್ಲೆ ನಡೆಸಿದ್ದಲ್ಲದೆ, ಬಿಸ್ಕೆಟ್, ಕೇಕ್ ಗಳನ್ನು ತುಂಬಿದ್ದ ಗಾಜಿನ ಬಾಟಲಿಗಳನ್ನು ತೆಗೆದು ಫುಟ್‍ಪಾತ್‍ಗೆಸೆದು ಟೇಬಲ್, ಕಂಟೇನರ್ ಗಳನ್ನು ಕಾಲಿನಿಂದ ಒದ್ದು ಬೀಳಿಸಿದ್ದಲ್ಲದೆ, ಸಾಫ್ಟ್ ಡ್ರಿಂಕ್ಸ್ ಬಾಟಲಿ ಇದ್ದ ರೇಕ್‍ಗಳನ್ನು ಎತ್ತಿಹಾಕಿ ಧ್ವಂಸ ಮಾಡಿದ್ದ.

ಆತ ಪೆಪ್ಸಿ ಬಾಟಲಿ ಒಡೆದು ಕೈಯಲ್ಲಿ ಹಿಡಿದು ಕೊಂಡಿದ್ದರಿಂದ ಹೆದರಿದ ಅಂಗಡಿ ಹುಡುಗರು ಹತ್ತಿರ ಹೋಗಲಿಲ್ಲ. ಸುಮಾರು 10 ನಿಮಿಷಗಳ ಕಾಲ ಅಂಗಡಿ ಯಲ್ಲಿದ್ದ ಎಲ್ಲಾ ವಸ್ತುಗಳನ್ನೂ ಬೀದಿಗೆಸೆದು ಧ್ವಂಸ ಗೊಳಿಸಿ ತನ್ನ ಸ್ನೇಹಿತನ ಸ್ಕೂಟರ್ ಹತ್ತಿ ಪರಾರಿಯಾಗಲೆತ್ನಿಸಿದಾಗ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಕಡೆಗೆ ಪೊಲೀಸರಿಗೊಪ್ಪಿಸಿದ್ದಾರೆ ಎನ್ನಲಾಗಿದೆ.

Hotel ಆತ ನಡೆಸಿದ ದಾಂಧಲೆ, ರಂಪಾಟದ ದೃಶ್ಯಗಳು ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಕಳೆದ ನಾಲ್ಕೈದು ದಿನಗಳಿಂದಲೂ ಆ ವ್ಯಕ್ತಿ ಇದೇ ರೀತಿ ಹಣ ಕೊಡದೆ ಟೀ ಕುಡಿದು ಹೋಗುತ್ತಿದ್ದ, ನಾವೂ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ ಎಂದದ್ದಾರೆ ಅಂಗಡಿ ಮಾಲೀಕರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಲಕ್ಷ್ಮೀಪುರಂ ಠಾಣೆ ಗರುಡ ಪೊಲೀಸರು, ಕಲೀಂನನ್ನು ವಶಕ್ಕೆ ಪಡೆದು ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿದ ನಂತರ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಘಟನೆ ನಡೆದ ಸ್ಥಳದ ಮಹಜರು ನಡೆಸಿ ಅಲ್ಲಿನ ಸಿಸಿ ಕ್ಯಾಮರಾ ಫೂಟೇಜ್ ಗಳನ್ನು ಸಂಗ್ರಹಿಸಿದ್ದಾರೆ. ಹಾಡಹಗಲೇ ಜನನಿಬಿಡ ಹಾಗೂ ವಾಹನ ಸಂಚಾರ ದಟ್ಟಣೆ ಇರುವ ಎಂಜಿ ರಸ್ತೆಯಲ್ಲಿ ಸಾರ್ವಜನಿಕರೆದುರೇ ದಾಂಧಲೆ ನಡೆಸಿ ಟೀ ಅಂಗಡಿ ವಸ್ತುಗಳನ್ನು ಧ್ವಂಸ ಗೊಳಿಸಿರುವ ಘಟನೆ ನೆರೆದಿದ್ದವರನ್ನು ಬೆಚ್ಚಿ ಬೀಳಿಸಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಲಕ್ಷ್ಮೀ ಪುರಂ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English