ಮಂಗಳೂರು : ಮಂಗಳೂರು ಮಹಾನಗರಪಾಲಿಕೆಗೆ ನಡೆಯುವ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ದೈನಂದಿನ ಖರ್ಚುವೆಚ್ಚದ ವಿವರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಇಲ್ಲದಿದ್ದರೆ ಅಂತಹವರನ್ನು ಅನರ್ಹಗೊಳಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಡಾ. ಬಿ. ಬಸವರಾಜು ಎಚ್ಚರಿಕೆ ನೀಡಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳೂರು ಮಹಾನಗರಪಾಲಿಕೆ ಚುನಾವಣೆಯ ಸಿದ್ದತೆಗಳ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು. ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಿದಾಕ್ಷಣದಿಂದ ತಮ್ಮ ಚುನಾವಣಾ ಖರ್ಚುವೆಚ್ಚಗಳ ನಿಖರವಾದ ದೈನಂದಿನ ಮಾಹಿತಿಗಳನ್ನು ಎರಡು ದಿನಗಳಿಗೊಮ್ಮೆ ಸಲ್ಲಿಸಬೇಕು. ಚುನಾವಣಾಧಿಕಾರಿಗಳು ಈ ಸಂಬಂಧ ಸೂಕ್ಷ್ಮವಾಗಿ ಪರಿಶೀಲಿಸಬೇಕು. ಒಂದು ವೇಳೆ ಖರ್ಚುವೆಚ್ಚಗಳ ವಿವರ ನೀಡದಿದ್ದರೆ, ಜಯಗಳಿಸಿದ ಅಭ್ಯರ್ಥಿಗಳ ಸದಸ್ಯತ್ವವೇ ರದ್ದುಗೊಳ್ಳಲಿದೆ. ಅಲ್ಲದೇ, ಇತರೆ ಅಭ್ಯರ್ಥಿಗಳು ಭವಿಷ್ಯದಲ್ಲಿ ಚುನಾವಣೆಗೆ ನಿಲ್ಲಲು ತೊಡಕಾಗಲಿದೆ ಎಂದು ಅವರು ಹೇಳಿದರು.
ಮಹಾನಗರಪಾಲಿಕೆ ಚುನಾವಣೆಯನ್ನು ಯಾವುದೇ ರೀತಿಯ ಗೊಂದಲಗಳು ಏರ್ಪಡದಂತೆ ನಡೆಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು. ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಕೊರತೆಯಾಗಬಾರದು. ಸೂಕ್ಷö್ಮ, ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಸಣ್ಣ ಪುಟ್ಟ ಘಟನೆಗಳನ್ನು ತಕ್ಷಣವೇ ನಿಭಾಯಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಚಟುವಟಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ನಿಯಂತ್ರಿಸುವAತೆ ಚುನಾವಣಾ ಆಯುಕ್ತರು ಪೊಲೀಸ್ ಆಯುಕ್ತರಿಗೆ ಸೂಚಿಸಿದರು.
ಜಿಲ್ಲಾ ಚುನಾವಣಾಧಿಕಾರಿ ಸಿಂಧೂ ಬಿ. ರೂಪೇಶ್ ಮಾತನಾಡಿ, ಮಹಾನಗರಪಾಲಿಕೆ ಚುನಾವಣೆಯಲ್ಲಿ 448 ಮತಗಟ್ಟೆಗಳು ಇದ್ದು, 3.87 ಲಕ್ಷ ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಮಂಗಳೂರಿನ ರೊಸಾರಿಯೋ ಶಿಕ್ಷಣ ಸಂಸ್ಥೆಯಲ್ಲಿ ಮತಯಂತ್ರಗಳ ವಿತರಣೆ ಹಾಗೂ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಅವರು ಕಾನೂನು ಸುವ್ಯವಸ್ಥೆಗಳ ಬಗ್ಗೆ ರಾಜ್ಯ ಚುನಾವಣಾ ಆಯುಕ್ತರಿಗೆ ಮಹಿತಿ ನೀಡಿದರು. ಡಿಸಿಪಿ ಅರುಣಾಂಶು ಗಿರಿ, ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ. ೫೦೦ಕ್ಕೂ ಅಧಿಕ ಬಂದೂಕುಗಳನ್ನು ಆಯಾ ಪೊಲೀಸ್ ಠಾಣೆಯಲ್ಲಿ ಠೇವಣಿಯಿಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ, ಚುನಾವಣಾ ನೀತಿ ಸಂಹಿತೆ ನೋಡಲ್ ಅಧಿಕಾರಿ ರಾಹುಲ್, ನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್, ಡಿಸಿಪಿ ಲಕ್ಷ್ಮೀ ಪ್ರಸಾದ್ ಮತ್ತಿತರರು ಇದ್ದರು.
ಪಾಲಿಕೆ ಚುನಾವಣೆ : ಎಡಗೈ ಉಂಗುರದ ಬೆರಳಿಗೆ ಅಳಿಸಲಾಗದ ಶಾಯಿ
ಮಂಗಳೂರು : ಮಂಗಳೂರು ಮಹಾನಗರಪಾಲಿಕೆಗೆ ನವೆಂಬರ್ 12 ರಂದು ನಡೆಯುವ ಚುನಾವಣೆಯಲ್ಲಿ ಮತದಾರರ ಎಡಗೈ ಉಂಗುರದ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕುವಂತೆ ರಾಜ್ಯ ಚುನಾವಣಾ ಆಯೋಗವು ನಿರ್ದೇಶನ ನೀಡಿದೆ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.
Click this button or press Ctrl+G to toggle between Kannada and English