ನಾಪೋಕ್ಲು ಹಿಂದೂ ರುದ್ರಭೂಮಿ ವಿವಾದ : ಪ್ರತಿಭಟನೆಯ ಎಚ್ಚರಿಕೆ

1:10 PM, Wednesday, November 6th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Pratibhatane

ಮಡಿಕೇರಿ : ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮದಲ್ಲಿರುವ ಹಿಂದೂ ರುದ್ರಭೂಮಿಗೆ ಅತಿಕ್ರಮ ಪ್ರವೇಶ ಮಾಡಿ, ಅಲ್ಲಿ ಕಸ ವಿಲೇವಾರಿಗಾಗಿ ಗುಂಡಿ ತೋಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಗ್ರಾಮಸ್ಥರು ಹಾಗೂ ಬಜರಂಗದಳದ ಪದಾಧಿಕಾರಿಗಳು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಜರಂಗದಳದ ನಾಪೋಕ್ಲು ಘಟಕದ ಸಂಚಾಲಕ ಬಿ.ಎಂ.ಪ್ರತೀಪ್ ಹಾಗೂ ಇತರರು, ನಾಪೋಕ್ಲು ಪಂಚಾಯಿತಿಯವರು ಯಾರ ಗಮನಕ್ಕೂ ತಾರದೆ, ಪಂಚಾಯಿತಿಯಲ್ಲಿ ನಿರ್ಣಯವನ್ನೂ ಮಾಡದೆ ಏಕಾಏಕಿ ರುದ್ರಭೂಮಿಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಅಲ್ಲಿ ಹಿರಿಯರು ಬೆಳೆಸಿದ್ದ ಸುಮಾರು 200ಕ್ಕೂ ಅಧಿಕ ವಿವಿಧ ಜಾತಿಯ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿರುವುದಲ್ಲದೆ, ಅಲ್ಲಿ ಕಸ ವಿಲೇವಾರಿಗಾಗಿ ಸುಮಾರು 100 ಅಡಿ ಉದ್ದ, 50 ಅಡಿ ಅಗಲ ಹಾಗೂ 10 ಅಡಿ ಆಳದ ಗುಂಡಿಯನ್ನು ತೋಡಿ, ಆ ಜಾಗದಲ್ಲಿದ್ದ ಸುಮಾರು 16 ಶವಗಳನ್ನು ಹಿಟಾಚಿ ಬಳಸಿ ಬೇರೆಡೆಗೆ ಸಾಗಿಸಿದ್ದಾರೆ ಎಂದು ಆರೋಪಿಸಿದರು.

ಬೇತು ಗ್ರಾಮದ ಸ.ನಂ 37/6 ಹಾಗೂ 37/2ರಲ್ಲಿ ಸುಮಾರು 1.75 ಎಕರೆ ಜಾಗವನ್ನು ಹಿಂದೂ ರುದ್ರಭೂಮಿಗಾಗಿ ಮೀಸಲಿಡಲಾಗಿದ್ದು, ಈ ಜಾಗದಲ್ಲಿ ಸುಮಾರು 25 ವರ್ಷಗಳಿಂದ ಹಿಂದೂ ಸಮಾಜದ ವಿವಿಧ ಜನಾಂಗದವರು ಶವ ಸಂಸ್ಕಾರ ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಈ ರುದ್ರಭೂಮಿ ಕೇವಲ ನಾಪೋಕ್ಲು ಗ್ರಾಮ ಪಂಚಾಯಿತಿಯ ಹಿಂದೂಗಳಿಗೆ ಮಾತ್ರವಲ್ಲದೆ ಸಮೀಪದ ಕಕ್ಕಬ್ಬೆ, ಚೆಯ್ಯಂಡಾಣೆ, ಬಲ್ಲಮಾವಟಿ ಸುತ್ತಮುತ್ತಲ ಬಡ ಹಾಗೂ ಮಧ್ಯಮ ವರ್ಗದ ಜನರೂ ಇದೇ ರುದ್ರಭೂಮಿಯನ್ನು ಬಳಸುತ್ತಿದ್ದಾರೆ. ಇದೀಗ ನಾಪೋಕ್ಲು ಪಟ್ಟಣದ ಜನಸಂಖ್ಯೆಯೂ ಹೆಚ್ಚಳವಾಗಿದ್ದು, ರುದ್ರಭೂಮಿಗೆ ಮತ್ತಷ್ಟ ಜಾಗದ ಅವಶ್ಯಕತೆ ಇದೆ. ಆದರೆ ಇರುವ ಜಾಗದಲ್ಲೇ ಸರಿದೂಗಿಸಿಕೊಂಡು ಹೋಗಲಾಗುತ್ತಿದೆ ಎಂದು ತಿಳಿಸಿದರು.

ರುದ್ರಭೂಮಿಯು ಕಾವೇರಿ ನದಿ ದಂಡೆಯಲ್ಲೇ ಇದ್ದು, ಕಸವಿಲೇವಾರಿಗೆ ಸೂಕ್ತವಾದ ಜಾಗವಲ್ಲದಿದ್ದರೂ, ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಸ್ವ ಇಚ್ಛೆಯಿಂದ ಹಿಂದೂ ರುದ್ರಭೂಮಿಯ ಜಾಗವನ್ನು ಕಸ ವಿಲೇವಾರಿಗಾಗಿ ಸ್ವಾಧೀನಪಡಿಸಕೊಳ್ಳಲು ಪ್ರಯತ್ನಿಸಿದ್ದಾರೆ.

ಇವರೊಂದಿಗೆ ಕಂದಾಯ ಅಧಿಕಾರಿಯೂ ಶಾಮೀಲಾಗುವ ಮೂಲಕ ಹಿಂದೂ ಸಮಾಜಕ್ಕೆ ಅತಿ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ ಅವರುಗಳು, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಹಿಂದೂ ರುದ್ರಭೂಮಿಯಿಂದ ಸ್ಥಳಾಂತರಿಸಿರುವ 16 ಶವಗಳನ್ನು ಹಿಂದಕ್ಕೆ ತಂದೊಪ್ಪಿಸುವುದರೊಂದಿಗೆ ರುದ್ರಭೂಮಿಯನ್ನು ಹಿಂದೂಗಳ ಬಳಕೆಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಶನಿವಾರದ ಒಳಗಾಗಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದರೊಂದಿಗೆ ಕೃತ್ಯಕ್ಕೆ ಬಳಸಿರುವ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳದಿದ್ದರೆ ಸೋಮವಾರ ನಾಪೋಕ್ಲುವಿನಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರುಗಳು ಇದೇ ಸಂದರ್ಭ ತಿಳಿಸಿದರು.

ಹಿಂದೂ ರುದ್ರಭೂಮಿಯಲ್ಲಿದ್ದ 200ಕ್ಕೂ ಅಧಿಕ ವಿವಿಧ ಜಾತಿಯ ಮರಗಳನ್ನು ಕಡಿದು ಸಾಗಿಸಿರುವವರ ವಿರುದ್ಧ ಇದುವರೆಗೆ ಯಾವುದೇ ಕ್ರಮ ಜರುಗಿಸದಿರುವುದನ್ನು ಗಮನಿಸಿದರೆ ಈ ಪ್ರಕರಣದಲ್ಲಿ ಅರಣ್ಯ ಇಲಾಖೆಯವರೂ ಶಾಮೀಲಾಗಿರುವ ಶಂಕೆ ಇದೆ ಎಂದು ಅವರುಗಳು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಜರಂಗದಳದ ಉಪಾಧ್ಯಕ್ಷ ಬಿ.ಸಿ.ರಾಧಾಕೃಷ್ಣ ರೈ, ಗ್ರಾಮಸ್ಥರಾದ ಪ್ರದೀಪ್, ವಿನಯ್ ಹಾಗೂ ರಾಜೇಂದ್ರ ಉಪಸ್ಥಿತರಿದ್ದರು.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English