ಮಡಿಕೇರಿ : ಮಡಿಕೇರಿ ಹೊರವಲಯದ ಕೆ.ನಿಡುಗಣೆ ಗ್ರಾಮದಲ್ಲಿ ಮರಕಡಿತಲೆಗೆ ಕಾನೂನು ಬಾಹಿರವಾಗಿ ಪರವಾನಗಿ ನೀಡಿ, ಅಮಾನತಿಗೆ ಒಳಗಾಗಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಅವರು ಮತ್ತೆ ಕೊಡಗಿಗೆ ಬರಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಕಾವೇರಿಸೇನೆ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷ ಕೆ.ಎ.ರವಿಚಂಗಪ್ಪ ಮಡಿಕೇರಿ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮಂಜುನಾಥ್ ಅವರು, ಕೆ. ನಿಡುಗಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು 800 ಕ್ಕೂ ಅಧಿಕ ಬೃಹತ್ ಗಾತ್ರದ ಮರಗಳನ್ನು ಕಡಿಯಲು ಕಾನೂನು ಬಾಹಿರವಾಗಿ ಪರವಾನಗಿ ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿಂದಿನ ರಾಜ್ಯ ಸರ್ಕಾರ ಅವರನ್ನು ಅಮಾನತ್ತಿನಲ್ಲಿಟ್ಟು, ತನಿಖೆಗೆ ಆದೇಶಿಸಿತ್ತು ಎಂದು ಹೇಳಿದರು.
ಪ್ರಸಕ್ತ ಅಮಾನತಿನಲ್ಲಿರುವ ಮಂಜುನಾಥ್ ಅವರು, ತಮ್ಮ ಅಮಾನತು ಆದೇಶವನ್ನು ರದ್ದು ಮಾಡಿಸಿಕೊಂಡು ವೀರಾಜಪೇಟೆ ಉಪ ವಿಭಾಗಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾವಣೆ ಮಾಡಿಸಿಕೊಳ್ಳಲು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅವರ ಈ ಅಮಾನತು ರದ್ಧತಿಗೆ ಕೊಡಗಿನ ಜನಪ್ರತಿನಿಧಿಯೊಬ್ಬರು ಸಹಕಾರ ನೀಡಲು ಮುಂದಾಗಿರುವುದಾಗಿಯೂ ಹೇಳಲಾಗಿದ್ದು, ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ ಅದು ಕೊಡಗಿನ ಜನತೆಯ ದೌರ್ಭಾಗ್ಯವೇ ಸರಿ ಎಂದು ರವಿಚಂಗಪ್ಪ ಆರೋಪಿಸಿದರು.
ಇಂತಹ ಅಧಿಕಾರಿ ಇದೀಗ ಸಂಪದ್ಭರಿತವಾದ ವೀರಾಜಪೆಟೆ ವಿಭಾಗದಲ್ಲಿ ಆಡಳಿತಾರೂಢರ ಸಹಕಾರದೊಂದಿಗೆ ಅಧಿಕಾರ ವಹಿಸಿಕೊಳ್ಳಲು ಮುಂದಾಗಿರುವುದು ಬೆಳಕಿಗೆ ಬಂದಿದೆ. ಈ ಅಧಿಕಾರಿಯ ಅಮಾನತನ್ನು ಯಾವುದೇ ಕಾರಣಕ್ಕು ಹಿಂಪಡೆಯದೆ ವಿಚಾರಣೆ ಪೂರ್ಣಗೊಳಿಸಿ ಸೇವೆಯಿಂದ ವಜಾಗೊಳಿಸಬೇಕು ಎಂದು ರವಿಚಂಗಪ್ಪ ಒತ್ತಾಯಿಸಿದರು.
ಮಂಜುನಾಥ್ ಅವರನ್ನು ವೀರಾಜಪೇಟೆ ಉಪ ವಿಭಾಗ ಇಲ್ಲವೇ ಕೊಡಗಿನ ಯಾವುದೇ ವಿಭಾಗಕ್ಕೆ ಕರ್ತವ್ಯಕ್ಕೆ ನಿಯೋಜಿಸಿದಲ್ಲಿ ಜನರ ಸಹಕಾರದೊಂದಿಗೆ ಆಯ್ದ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲಾಗುವುದು, ಅಲ್ಲದೆ, ಆ ಅಧಿಕಾರಿಯ ಎಲ್ಲಾ ವಿವರಗಳನ್ನು ಒಳಗೊಂಡ ದೂರನ್ನು ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸುವುದರೊಂದಿಗೆ ನ್ಯಾಯಾಲಯದ ಮೊರೆ ಹೋಗವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾವೇರಿಸೇನೆ ಕಾರ್ಯದರ್ಶಿ ಕೋಲತಂಡ ರಘುಮಾಚಯ್ಯ ಹಾಗೂ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಹೊಸಬೀಡು ಶಶಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English