ಮಡಿಕೇರಿ : ಕೇಂದ್ರ ಸರ್ಕಾರದ ರಫೆಲ್ ಒಪ್ಪಂದ ಕುರಿತು ಸುಳ್ಳು ಮಾಹಿತಿ ಹಬ್ಬಿಸುತ್ತಿರುವ ರಾಷ್ಟ್ರೀಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ರಫೆಲ್ ಖರೀದಿ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ಯಾವುದೇ ಅಕ್ರಮ ನಡೆದಿಲ್ಲ. ಆದರೆ ರಫೆಲ್ ಕುರಿತು ರಾಹುಲ್ ಗಾಂಧಿ ಅವರು ನೀಡುತ್ತಿರುವ ಹೇಳಿಕೆ ಆಧಾರ ರಹಿತವಾಗಿದೆ. ಇದನ್ನೆ ನಂಬಿರುವ ಕಾಂಗ್ರೆಸ್ ಮುಖಂಡರು ಕೂಡ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ದೇಶದ ಭದ್ರತೆ ದೃಷ್ಠಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು ೩೬ ಯುದ್ಧ ವಿಮಾನಗಳನ್ನು ಒಪ್ಪಂದ ಮಾಡಿಕೊಂಡಿದ್ದರು, ಆದರೆ ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯದ ರಾಹುಲ್ ಗಾಂಧಿ ಅವರು ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು. ದೇಶದ ಭದ್ರತೆಯ ಬಗ್ಗೆ ಕಾಳಜಿ ಇಲ್ಲದ ಕಾಂಗ್ರೆಸ್ಸಿಗರು ಆಂತರಿಕ ವಿಚಾರಗಳನ್ನು ಬೀದಿಗೆ ತರುತ್ತಿದ್ದಾರೆ ಸುನೀಲ್ ಸುಬ್ರಮಣಿ ಟೀಕಿಸಿದರು. ದೇಶ ಸುಭದ್ರವಾಗಿರಲು ಪ್ರತಿಯೊಬ್ಬರು ಪಕ್ಷಭೇದ ಮರೆತು ಒಂದಾಗಬೇಕು ಎಂದರು.
ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ, ಮಹಿಳಾ ಘಟಕದ ನಾಗರಾಧ್ಯಕ್ಷೆ ಅನಿತಾ ಪೂವಯ್ಯ, ನಗರಸಭಾ ಮಾಜಿ ಸದಸ್ಯರುಗಳಾದ ಉಣ್ಣಿಕೃಷ್ಟನ್, ಕೆ.ಎಸ್.ರಮೇಶ್, ಟಿ.ಎಸ್.ಪ್ರಕಾಶ್, ಪ್ರಮುಖರಾದ ಸತೀಶ್, ಜಗದೀಶ್, ಪೂಣಚ್ಚ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English