ಮೈಸೂರು : ಭಾನುವಾರ ರಾತ್ರಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರ ಕತ್ತಿನ ಭಾಗಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಆರೋಪಿಯನ್ನ ಬಂಧಿಸಲಾಗಿದೆ.
ಬನ್ನಿಮಂಟಪದ ಪಂಜಿನ ಕವಾಯತು ಮೈದಾನದ ಹಿಂಭಾಗವಿರುವ ಕಲ್ಯಾಣ ಮಂಟಪವೊಂದರಲ್ಲಿ ಶಾಸಕ ತನ್ವೀರ್ ಸೇಠ್ ಊಟ ಮಾಡಿ ನಂತರ ಸಮಾರಂಭದ ಹಾಲ್ಗೆ ಬಂದು ಸ್ನೇಹಿತರೊಂದಿಗೆ ಸಂಗೀತ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಇದೇ ವೇಳೆ ಕೆಂಪು ಬಣ್ಣದ ಜಾಕೆಟ್ ಧರಿಸಿದ್ದ ಯುವಕನೋರ್ವ ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ನಿಧಾನವಾಗಿ ಬಂದು ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಶಾಸಕರ ಮೇಲೆ ಮಚ್ಚಿನಿಂದ ಏಕಾಏಕಿ ಹಲ್ಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದ. ಆದರೆ ಕಾರ್ಯಕ್ರಮದಲ್ಲಿದ್ದವರು ಆತನನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಗೌಸಿಯಾ ನಗರದ ಫರ್ಹಾನ್ ಹಲ್ಲೆ ಮಾಡಿದ ಆರೋಪಿ. ಬಂಧಿತನಿಂದ ಹಲ್ಲೆಗೆ ಬಳಸಿದ್ದ ಮಚ್ಚನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲ್ಲೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ, ವಿಚಾರಣೆ ಮಾಡಲಾಗುತ್ತಿದೆ.
ಸದ್ಯ ತನ್ವೀರ್ ಸೇಠ್ ಅವರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ವಿಷಯ ತಿಳಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಸ್ಪತ್ರೆ ಮುಂದೆ ಜಮಾಯಿಸಿದ್ದು, ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಡಿಸಿಪಿ ಎಂ. ಮುತ್ತುರಾಜು, ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಆಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Click this button or press Ctrl+G to toggle between Kannada and English