ಮಂಗಳೂರು : ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆರು ಯಕ್ಷಗಾನ ಬಯಲಾಟ ಮೇಳಗಳ ಈ ಸಾಲಿನ ತಿರುಗಾಟ ನ.22ರಂದು ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಅವರ ಸಂಚಾಲಕತ್ವದಲ್ಲೇ ಆರಂಭಗೊಡಿದೆ.
ಈ ಮಧ್ಯೆ ಕಟೀಲು ಮೇಳಗಳ ಏಲಂ ವಿವಾದ ಕುರಿತು ಗುರುವಾರ ಹೈಕೋರ್ಟ್‌ನ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿ ಡಿ.9ಕ್ಕೆ ಮುಂದೂಡಿದೆ.
ಡಿಸೆಂಬರ್ 9 ರ ವರೆಗೆ ಯಕ್ಷಗಾನ ಮೇಳದ ಉಸ್ತುವಾರಿಯನ್ನು ಜಿಲ್ಲಾಧಿಕಾರಿ ನೋಡಿಕೊಳ್ಳುವಂತೆ ಸೂಚನೆ ನೀಡಿದೆ. ಅಲ್ಲದೆ ಮೇಳದ ನಿರ್ವಹಣೆಯನ್ನು ಆಡಳಿತ ಮಂಡಳಿ ವಹಿಸಿಕೊಳ್ಳಬೇಕು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕಟೀಲು ಮೇಳಗಳ ತಿರುಗಾಟ ಸದ್ಯದ ಮಟ್ಟಿಗೆ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಅವರ ಸಂಚಾಲಕತ್ವದಲ್ಲೇ ಮುಂದುವರಿಯಲಿದೆ.
ಹೈಕೋರ್ಟ್‌ನ ಏಕಸದಸ್ಯ ಪೀಠದಲ್ಲಿ ನಡೆಯುತ್ತಿರುವ ವಿಚಾರಣೆ ಮಧ್ಯಂತರ ಆದೇಶ ಬಳಿಕ ಡಿ.9ಕ್ಕೆ ಮುಂದೂಡಲಾಗಿದೆ. ಅಲ್ಲಿವರೆಗೆ ಕಟೀಲು ಮೇಳಗಳ ತಿರುಗಾಟ ಹಾಗೂ ಕಲಾವಿದರ ವೇತನದ ವಿಚಾರದ ಎಲ್ಲ ಲೆಕ್ಕಪತ್ರವನ್ನು ಪ್ರತಿ 15 ದಿನಕ್ಕೊಮ್ಮೆ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದೆ.
ಗುರುವಾರ ನಡೆದ ವಿಚಾರಣೆಯಲ್ಲಿ ಕಲಾವಿದರ ಸಂಬಳ ವಿಚಾರ ಪ್ರಸ್ತಾಪಗೊಂಡಿದೆ. ಕಲಾವಿದರಾಗಿದ್ದ ಗೇರುಕಟ್ಟೆಗಂಗಯ್ಯ ಶೆಟ್ಟಿಅವರಿಗೆ ಸೂಕ್ತ ವೇತನ ನೀಡಿಲ್ಲ ಎಂಬ ದೂರಿನ ಕುರಿತೂ ಏಕಸದಸ್ಯ ಪೀಠ ಛಿಮಾರಿ ಹಾಕಿದೆ. ಕಲಾವಿದರಿಗೆ ಎಲ್ಲ ವ್ಯವಸ್ಥೆ ಮಾಡಿಕೊಡಬೇಕು. ಕಲಾವಿದರನ್ನು ಕಾರ್ಮಿಕ ಕಾಯ್ದೆಯ ಅಡಿಯಲ್ಲಿ ತರಬೇಕು. ಅವರಿಗೆ ಕ್ಷೇಮನಿಧಿ ಸೌಲಭ್ಯವನ್ನು ಕಲ್ಪಿಸಬೇಕು ಎಂಬ ಮಾತನ್ನು ಏಕಸದಸ್ಯ ಪೀಠ ಹೇಳಿದೆ.
ನ್ಯಾಯಾಲಯದ ತಡೆಯಾಜ್ಞೆ ಇರುವಾಗ ಏಲಂ ಕುರಿತು ಆದೇಶ ನೀಡಿರುವ ಆಯುಕ್ತರ ಕ್ರಮವನ್ನು ನ್ಯಾಯಾಲಯ ಪ್ರಶ್ನಿಸಿದೆ. ಮಾತ್ರವಲ್ಲ ಹಾಗಾದರೆ ಇದುವರೆಗೆ ಯಾಕೆ ಸುಮ್ಮನಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದೆ. ನಾನು ರಜೆಯಲ್ಲಿ ಇರುವಾಗ ಇದ್ದ ಆಯುಕ್ತರು ಈ ಆದೇಶ ಹೊರಡಿಸಿದ್ದರು ಎಂದು ಈಗಿನ ಆಯುಕ್ತರು ನ್ಯಾಯಾಲಯಕ್ಕೆ ಅಫಿದವಿತ್ ಸಲ್ಲಿಸಿದರು.
ಮೇಳಗಳ ಆಡಳಿತ ಹಾಗೂ ಸಂಚಾಲಕತ್ವದ ಕುರಿತು ಯಾವುದೇ ವ್ಯತ್ಯಾಸವನ್ನು ಮಾಡುವ ಕುರಿತು ಒಪ್ಪಿಗೆ ಸೂಚಿಸದೆ ಇದ್ದ ವ್ಯವಸ್ಥೆಯಂತೆಯೇ ಮುಂದುವರಿಯಬೇಕು. ಜೊತೆಗ ಪ್ರತಿ 15 ದಿನಗಳಿಗೊಮ್ಮೆ ಮೇಳದ ಲೆಕ್ಕಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕೆಂದೂ, ಮೇಳದ ವ್ಯವಸ್ಥೆಯ ಉಸ್ತುವಾರಿಯನ್ನು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿ ಆದೇಶ ಹೊರಡಿಸಿದೆ .
ಜಿಲ್ಲಾಧಿಕಾರಿಗಳು ಯಾವುದಾದರೂ ದೂರುಗಳಿದ್ದರೆ ವಿವರಣೆ ಕೇಳಬಹುದು. ಅಗತ್ಯಬಿದ್ದಲ್ಲಿ ನಿರ್ದೇಶನ ನೀಡಬಹುದು ಯಾ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬಹುದು. ಆಡಳಿತ ನೋಡಿಕೊಳ್ಳಬೇಕೆಂಬ ಅರ್ಥವೇ ಆ ಶಬ್ದಕ್ಕಿಲ್ಲ. ಲೆಕ್ಕಪತ್ರವನ್ನು ನೀಡಲು ದೇವಳಕ್ಕಾಗಲೀ ಅಥವಾ ಮೇಳದ ಸಂಚಾಲಕರಿಗಾಗಲೀ ಯಾವುದೇ ಸಮಸ್ಯೆಇರುವುದಿಲ್ಲ.
ದೂರುದಾರ ಮಾಧವ ಬಂಗೇರರಿಗಾಗಲಿ, ಮೇಳಗಳ ಸಂಚಾಲಕರೆಂದು ಹೇಳಿಕೊಂಡ ಐವರು ಹೊಸ ಅರ್ಜಿದಾರರಾಗಲೀ ತಮ್ಮನ್ನು ಪ್ರತಿವಾದಿಗಳೆಂದು ಪರಿಗಣಿಸಬೇಕೆಂಬ ಯಾವುದೇ ವಿನಂತಿಯನ್ನು ನ್ಯಾಯಾಲಯ ಪರಿಗಣಿಸಿಲ್ಲ.
ರಾತ್ರಿ ಕಟೀಲು ಕ್ಷೇತ್ರದ ಎದುರು ಪ್ರಥಮ ಸೇವೆಯಾಟ ನಡೆಯಲಿದ್ದು, ಮರುದಿನ ಬೆಳಗ್ಗೆ ಮೇಳಗಳ ತಿರುಗಾಟ ಹೊರಡುವ ವೇಳೆಗೆ ಯಾವ ಕಲಾವಿದರು ಯಾವ ಮೇಳಕ್ಕೆ ಎಂಬುದು ಸ್ಪಷ್ಟವಾಗಲಿದೆ. ಲಭ್ಯ ಮಾಹಿತಿ ಪ್ರಕಾರ, ಈ ಬಾರಿಯೂ ಆರು ಮೇಳಗಳ ನಡುವೆ ಪರಸ್ಪರ ಕಲಾವಿದರ ವರ್ಗಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಎರಡು ವರ್ಷಗಳ ಹಿಂದೆ ಕಲಾವಿದರ ವರ್ಗಾವಣೆ ಆರಂಭಗೊಂಡಲ್ಲಿಂದ ಇದನ್ನು ವಿರೋಧಿಸಿ ಕಟೀಲು ಮೇಳದಲ್ಲಿ ಕಲಾವಿದರ ಬಂಡಾಯ ನಡೆದಿತ್ತು. ಬಳಿಕ ಅದು ಕೋರ್ಟ್ ಮೆಟ್ಟಿಲೇರಿ, ಮೇಳವನ್ನು ಏಲಂ ಮಾಡಬೇಕು ಎಂಬ ಬೇಡಿಕೆಗೆ ಕಾರಣವಾಗಿತ್ತು. ಕಳೆದ ವರ್ಷವೂ ಕಲಾವಿದರ ವರ್ಗಾವಣೆ ನಡೆದಿದ್ದು, ಆದರೆ ಯಾವುದೇ ಕಲಾವಿದರಿಂದ ವಿರೋಧ ವ್ಯಕ್ತವಾಗಿರಲಿಲ್ಲ.
Click this button or press Ctrl+G to toggle between Kannada and English