ದಲಿತ ಸಂಘಟನೆಗಳಿಂದ ಮಡಿಕೇರಿಯಲ್ಲಿ ಬೃಹತ್ ಮಾನವ ಸರಪಳಿ

12:21 PM, Tuesday, November 26th, 2019
Share
1 Star2 Stars3 Stars4 Stars5 Stars
(No Ratings Yet)
Loading...

dss ಮಡಿಕೇರಿ : ಸಮಾನತೆಯ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿರುವ ಸಂವಿಧಾನದ ಆಶಯಗಳನ್ನು ಹಾಳುಗೆಡಹಲು ನಿರಂತರ ಷಡ್ಯಂತ್ರಗಳು ನಡೆಯುತ್ತಿದೆ ಎಂದು ಆರೋಪಿಸಿ ಸಂವಿಧಾನ ರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು.

ನಗರದ ಜ.ತಿಮ್ಮಯ್ಯ ವೃತ್ತದಲ್ಲಿ ’ಮಾನವ ಸರಪಳಿ’ ನಿರ್ಮಿಸಿ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು. ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ದಲಿತ ಸಂಘಟನೆಗಳ ಕಾರ್ಯಕರ್ತರು ಘೋಷಣೆಗಳ ಸಹಿತ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಂವಿಧಾನ ರಕ್ಷಣಾ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಮೋಹನ್‌ಮೌರ್ಯ ಮಾತನಾಡಿ, ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೇ ಸಂವಿಧಾನವನ್ನು ರಚನೆ ಮಾಡಿಲ್ಲ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಅಂಬೇಡ್ಕರ್ ರಚಿಸಿರುವ ಸಂವಿಧಾನ ಸರ್ವ ನಾಗರಿಕರಿಗೆ, ಸರ್ವ ಧರ್ಮೀಯರಿಗೆ ಹಾಗೂ ಭಾರತ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆಯನ್ನು ಒದಗಿಸಲು ಎಲ್ಲಾ ರೀತಿಯ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ಆಳುವ ಸರ್ಕಾರಗಳು ಸಂವಿಧಾನವನ್ನು ಸರಿಯಾಗಿ ಜಾರಿ ಮಾಡದ ಪರಿಣಾಮ ಇಂದು ಸಂವಿಧಾನವನ್ನು ದೂಷಣೆ ಮಾಡುವ ಕೆಲಸಕ್ಕೆ ಕೆಲವು ಕಿಡಿಗೇಡಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಈ ದೇಶದ ಸಂವಿಧಾನ ಸರಿಯಿಲ್ಲ, ಅಂಬೇಡ್ಕರ್ ಸಂವಿಧಾನವನ್ನು ಬರೆದಿಲ್ಲ, ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂಬ ಹೇಳಿಕೆಗಳನ್ನು ಎಲ್ಲಾ ದಲಿತಪರ ಸಂಘಟನೆಗಳು ಖಂಡಿಸುತ್ತವೆ ಎಂದರು.

ಸಚಿವರ ರಾಜೀನಾಮೆಗೆ ಆಗ್ರಹ
ಸೋಮವಾರಪೇಟೆ ತಾಲ್ಲೂಕು ಸಂಚಾಲಕ ಡಿ.ಎಸ್.ನಿರ್ವಾಹಣಪ್ಪ ಮಾತನಾಡಿ, ಡಾ.ಅಂಬೇಡ್ಕರ್ ವಿರುದ್ಧವಾದ ಶಿಕ್ಷಣ ಇಲಾಖೆಯ ಹೇಳಿಕೆ ಹಿನ್ನೆಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂವಿಧಾನ ರಕ್ಷಣಾ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಂ.ನಂದಕುಮಾರ್, ಮಡಿಕೇರಿ ತಾಲ್ಲೂಕು ಸಂಚಾಲಕರಾದ ಹೆಚ್.ಎಲ್.ದಿವಾಕರ್, ದೀಪಕ್, ಪಾವನಿ, ರಮೇಶ್ ಚಕ್ರವರ್ತಿ, ಎ.ಕೆ.ಹರೀಶ್, ಸುಬ್ಬಯ್ಯ, ರವಿ, ರಘು, ಬೈರಬೋಜ, ಸೋಮವಾರಪೇಟೆ ತಾಲ್ಲೂಕು ಸಂಚಾಲಕರಾದ ಜೋಯಪ್ಪ ಹಾನಗಲ್, ಹನುಮಂತಯ್ಯ, ಹೊನ್ನಪ್ಪ, ಟಿ.ಎ.ಸುರೇಶ್, ಹೆಚ್.ಎಂ. ಸೋಮಪ್ಪ, ಕೆ.ಬಿ.ಮಂಜುನಾಥ್, ರಾಜು, ಸುಕುಮಾರ್, ಸಣ್ಣಪ್ಪ, ಜಗದೀಶ್, ವೆಂಕಟೇಶ್, ರಾಜು ಶನಿವಾರಸಂತೆ, ಗಣೇಶ್ ಕೂಡಿಗೆ, ಜೆ.ಎಲ್ ಜನಾರ್ಧನ್, ಶಿವಲಿಂಗ, ಪಾಲಾಕ್ಷ, ಮಂಜುನಾಥ್, ರವೀಂದ್ರನಾಥ್, ಎಂ.ಬಿ. ಲತ, ಮಾಲಂಬಿ, ಕೆ.ಜೆ. ಸಾವಿತ್ರಮ್ಮ, ಹೆಚ್.ವಿ. ಜಯಮ್ಮ , ವೀಣಾ, ವಿರಾಜಪೇಟೆ ತಾಲೂಕು ಸಂಚಾಲಕರಾದ ವೀರಭದ್ರ ಮಾಸ್ಟರ್, ಕೃಷ್ಣಪ್ಪ, ಪರಶುರಾಮ್, ದಿನು ಬೋಜಪ್ಪ, ಅರ್ಜುನ್ ಅಮ್ಮತ್ತಿ ಹಾಗೂ ಮತ್ತಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English