ಮಂಗಳೂರು: ಪಣಂಬೂರಿನ ನವಮಂಗಳೂರು ಬಂದರಿನ ಮೂಲಕ ದುಬೈಗೆ ಅಕ್ರಮವಾಗಿ ರಫ್ತು ಮಾಡಲೆತ್ನಿಸಿದ ಸುಮಾರು 3ಕೋಟಿ ರೂಪಾಯಿ ಮೌಲ್ಯದ ಕೆಂಪು ಶ್ರೀಗಂಧದ ದಿಮ್ಮಿಗಳನ್ನು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ. ಬಂಧಿತರು ಕೇರಳದವರಾಗಿದ್ದು, ಆರೋಪಿಗಳನ್ನು ಮುಸ್ತಫಾ ಅಬ್ದುಲ್ ರೆಹಮಾನ್, ಎಂ.ಕೆ.ಸಲೀಹ್, ಅಬ್ದಲ್ ಕಲಾಂ, ಎಡ್ವರ್ಡ್ ಜಾರ್ಜ್ಎಂದು ಗುರುತಿಸಲಾಗಿದೆ.
ಕೊಚ್ಚಿನ್ನ ಎಕ್ಸ್ಪೋರ್ಟ್ ಸಂಸ್ಥೆಯ ಮೂಲಕ ದುಬೈಯ ಜೆಬೆಲ್ ಆಲಿ ಎಂಬ ಸಂಸ್ಥೆಗೆ ಫ್ಲೈವುಡ್ ಕಳುಹಿಸಲಾಗುತ್ತಿದೆ ಎಂಬುದಾಗಿ ದಾಖಲೆ ನಿರ್ಮಿಸಿ ಕಂಟೈನರ್ ನಲ್ಲಿ ಫ್ಲೈವುಡ್ ನೆಪದಲ್ಲಿ ಕೆಂಪು ಶ್ರೀ ಗಂಧದ ದಿಮ್ಮಿಗಳನ್ನು ದುಬೈಗೆ ರಫ್ತು ಮಾಡಲು ಯತ್ನಿಸಿದ್ದರು. ಆದರೆ ಖಚಿತ ಮಾಹಿತಿ ಮೇರೆಗೆ ಕಂಟೈನರ್ ನ ತಪಾಸಣೆ ನಡೆಸಿದಾಗ 5,810 ಕೆ.ಜಿ ತೂಕದ 240 ರಕ್ತ ಚಂದನದ ಮರದ ತುಂಡುಗಳು ಪತ್ತೆಯಾದವು. ಇವುಗಳ ಮೌಲ್ಯ 58.10 ಲಕ್ಷ ರೂಪಾಯಿ ಆಗಿದೆ.
ಆರೋಪಿ ಮುಸ್ತಫಾ ಅಬ್ದುಲ್ ರೆಹಮಾನ್ ಎಂಬಾತನನ್ನು ಅಧಿಕಾರಿಗಳು ವಿಚಾರಣೆ ನಡೆಸಿದಾಗ ಬೋಳೂರು ಮತ್ತು ಕಣ್ಣೂರಿನ ಗೋಡೌನ್ ನಲ್ಲಿ ರಕ್ತ ಚಂದನವನ್ನು ಶೇಖರಿಸಿಟ್ಟ ಬಗ್ಗೆ ಮಾಹಿತಿ ಪಡೆದು ಅವುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.ರಕ್ತ ಚಂದನವು ಅಳಿವಿನ ಅಂಚಿನಲ್ಲಿರುವ ಮರ ಆಗಿದ್ದು ಇದನ್ನು ರಫ್ತು ಮಾಡುವುದಕ್ಕೆ ಸಂಪೂರ್ಣ ನಿಷೇದವಿದೆ.
ಇದನ್ನು ಪ್ರಮುಖವಾಗಿ ಆಯುರ್ವೇದ ಔಷದ ತಯಾರಿಕೆಯಲ್ಲಿ, ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರ ಬೆಲೆ ಕೆಜಿಗೆ 100 ರೂಪಾಯಿ ಇದ್ದು ಕಾಳಸಂತೆಯಲ್ಲಿ ಕೆಜಿಗೆ 5,000 ರೂಪಾಯಿ ವರೆಗೂ ಬೆಲೆ ಇದೆ ಎನ್ನಲಾಗಿದೆ. ವಿದೇಶಕ್ಕೆ ರಕ್ತಚಂದನ ತಲುಪುವಾಗ ಅದರ ಬೆಲೆ 15ರಿಂದ 20 ಸಾವಿರವಾಗಬಹುದು ಎಂದು ಅಂದಾಜಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.
Click this button or press Ctrl+G to toggle between Kannada and English