ಮಡಿಕೇರಿ : ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ ಸಿಐಟಿಯು ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಹಾಗೂ ಸಹಾಯಕಿಯರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಸುನಂದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ ಉದಾರೀಕರಣ ನೀತಿಗಳ ಮೂಲಕ ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ಖಾಸಗಿ ಮಾಡಲು ಹೊರಟ್ಟಿದ್ದು, ಈ ಬೆಳವಣಿಗೆಯಿಂದ ಮಹಿಳಾ ನೌಕರರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು. ಆಹಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿರುವ ಪ್ರಮುಖ ಜವಬ್ದಾರಿಗಳನ್ನು ಬೇರೆಡೆಗೆ ವರ್ಗಾಯಿಸುವ ಮೂಲಕ ಯೋಜನೆಗಳನ್ನು ಬಲಹೀನಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಸಾವಿರಾರು ಮಹಿಳೆಯರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ ಎಂದರು.
ಪೂರ್ವ ಪ್ರಾಥಮಿಕ ಶಿಕ್ಷಣವ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ವಿವಿಧ ಬೇಡಿಕೆಗಳ ಬಗ್ಗೆ ಹಲವು ಬಾರಿ ಸಂಬಂಧಿಸಿದವರೊಂದಿಗೆ ಚರ್ಚಿಸಿ ಮನವಿ ಪತ್ರ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಸುನಂದ ಟೀಕಿಸಿದರು. ಸಾರ್ವಜನಿಕರ ಸಹಿ ಸಂಗ್ರಹ ಅಭಿಯಾನದ ಮೂಲಕ ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಜಾಥಾ ನಡೆಸಲಾಗುತ್ತಿದೆ. ಡಿ.10 ರಂದು ಅಂಗನವಾಡಿ ಸಿಬ್ಬಂದಿಗಳು ಬೆಂಗಳೂರಿಗೆ ಪಾದಯಾತ್ರೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ಪಾಲನೆಯೊಂದಿಗೆ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ತರಬೇಕು, ಈಗಿರುವ ನಿವೃತ್ತಿ ಸೌಲಭ್ಯವನ್ನು ಬದಲಾಯಿಸಿ ಎಲ್‌ಐಸಿ ಆಧಾರಿತ ಪೆನ್‌ಷನ್ ನೀಡಬೇಕು, ಸೇವಾ ಜೇಷ್ಠತೆಯ ಆಧಾರದಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು, ಮೇಲ್ವೀಚಾರಕಿಯಾಗಿ ಮುಂಬಡ್ತಿ ಹೊಂದುವ ಹುದ್ದೆಗಳನ್ನು ಸಂಪೂರ್ಣ ಅಂಗನವಾಡಿ ನೌಕರರಿಗೆ ನೀಡಬೇಕು, ಮೇಲ್ವಿಚಾರಕಿಯರ ಹುದ್ದೆಗಳಿಗೆ ೨೦೧೫ರ ಭಾರತ ಸರ್ಕಾರದ ಸುತ್ತೋಲೆ ಪ್ರಕಾರ ಈಗಾಗಲೇ ಇರುವಂತೆ ಶೇ.೫೦ ಹುದ್ದೆಗಳಿಗೆ ಮುಂಬಡ್ತಿ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಬೇಕು, ವರ್ಷ ಸೇವೆ ಮತ್ತು ಪದವೀಧರ ಅಂಗನವಾಡಿ ನೌಕರರಿಗೆ 10 ವರ್ಷ ಸೇವೆ ಮತ್ತು ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸಂಪೂರ್ಣ ನೀಡಬೇಕು,
ಅಂಗನವಾಡಿ ಸಹಾಯಕಿ ಕಾರ್ಯಕರ್ತೆಯಾಗಿ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು, ಅನುಕಂಪದ ಆಧಾರದಲ್ಲಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹೆಣ್ಣು ಮಕ್ಕಳಿಗೆ ಮಾತ್ರವಲ್ಲದ ಕುಟುಂಬದವರಿಗೆ ಎಂದು ತಿದ್ದುಪಡಿಯಾಗಬೇಕು, ಖಾಲಿಯಿರುವ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆಗಳನ್ನು ತುಂಬಬೇಕು, ಹಲವು ಯೋಜನೆಗಳಿಗೆ ಡಿಡಿ, ಪಿಓ, ಸಿಡಿಪಿಓ, ಮೇಲ್ವಿಚಾರಕಿಯರನ್ನು ಖಾಯಂ ಆಗಿ ನೇಮಕ ಮಾಡಬೇಕು, ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾ ನಿಯಾಮಾವಳಿ ರಚಿಸಬೇಕು, ಕೇಂದ್ರ ಸರ್ಕಾರ ಕಡಿತ ಮಾಡಿರುವ ಅನುದಾನ ವಾಪಸ್ಸು ಆಗಬೇಕು, ಐದು ವರ್ಷಗಳನ್ನು ಪೂರೈಸಿದ ಮೇಲ್ವಿಚಾರಕಿಯನ್ನು ಕಡ್ಡಾಯ ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಿಐಟಿಯು ಅಧ್ಯಕ್ಷ ಮಹದೇವ, ಹಾಸನ ಮುಖಂಡ ಅರಂವಿದ್, ಸಿಐಟಿಯು ಜಿಲ್ಲಾ ಪ್ರಮುಖ ಪಿ.ಆರ್.ಭರತ್, ಅಂಗನವಾಡಿ ನೌಕರರ ಸಂಘದ ರಾಜ್ಯ ಸಮಿತಿಯ ಉಪಾಧ್ಯಕ್ಷೆ ಇಂದ್ರಮ್ಮ, ಸದಸ್ಯೆ ಎಸ್.ಎ.ರಾಣಿ, ಜಿಲ್ಲಾಧ್ಯಕ್ಷೆ ಸುಮಿತಾ, ಉಪಾಧ್ಯಕ್ಷರಾದ ಸಾವಿತ್ರಿ, ಜಮುನಾ, ವಿರಾಜಪೇಟೆ ತಾಲೂಕು ಅಧ್ಯಕ್ಷೆ ಸುಮಿತ್ರ, ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಭಾಗೀರತಿ ಮತ್ತಿತರರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ಸಂದರ್ಭ ಹಾಜರಿದ್ದರು.
Click this button or press Ctrl+G to toggle between Kannada and English