3ನೇ ಸೌತ್‌ ಏಶ್ಯನ್‌ ಗೇಮ್ಸ್‌ನ ಆ್ಯತ್ಲೆಟಿಕ್‌ ಸ್ಪರ್ಧೆಯಲ್ಲಿ ಭಾರತಕ್ಕೆ 10 ಪದಕ

10:52 AM, Wednesday, December 4th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Athletics

ಕಾಠ್ಮಂಡು : ಇಲ್ಲಿ ಸಾಗುತ್ತಿರುವ 13ನೇ ಸೌತ್‌ ಏಶ್ಯನ್‌ ಗೇಮ್ಸ್‌ನ ಆ್ಯತ್ಲೆಟಿಕ್‌ ಸ್ಪರ್ಧೆಯಲ್ಲಿ ಭಾರತೀಯ ಆ್ಯತ್ಲೀಟ್‌ಗಳು ಪ್ರಾಬಲ್ಯ ಸ್ಥಾಪಿಸಿದ್ದಾರೆ. ನಾಲ್ಕು ಚಿನ್ನ ಸಹಿತ 10 ಪದಕ ಗೆದ್ದು ಸಂಭ್ರಮಿಸಿದ್ದಾರೆ.

ಅರ್ಚನಾ ಸುಶೀಂದ್ರನ್‌, ಎಂ. ಜಸ್ನಾ, ಸರ್ವೇಶ್‌ ಅನಿಲ್‌ ಕುಶಾರೆ ಮತ್ತು ಅಜಯ್‌ ಕುಮಾರ್‌ ಸರೋಜ್‌ ಆ್ಯತ್ಲೆಟಿಕ್ಸ್‌ ಸ್ಪರ್ಧೆಯ ಮೊದಲ ದಿನ ಚಿನ್ನ ಗೆದ್ದ ಸಾಧಕರಾಗಿದ್ದಾರೆ.

ವನಿತೆಯರ 100 ಮೀ. ಓಟದಲ್ಲಿ ಅರ್ಚನಾ ಸುಶೀಂದ್ರನ್‌ 11.80 ಸೆ.ನಲ್ಲಿ ಗುರಿ ತಲುಪಿ ಗೇಮ್ಸ್‌ ನ ಅತೀವೇಗದ ಓಟಗಾರ್ತಿ ಎಂದೆನಿಸಿಕೊಂಡಿದ್ದಾರೆ.

ಶ್ರೀಲಂಕಾದ ತನುಜಿ ಅಮಶಾ ಬೆಳ್ಳಿ ಮತ್ತು ಲಕ್ಷಿಕಾ ಸುಗಂದ್‌ ಕಂಚು ಗೆದ್ದಿದ್ದಾರೆ. ವನಿತೆಯರ ಹೈಜಂಪ್‌ನಲ್ಲಿ ಜಸ್ನಾ 1.73 ಮೀ. ಹಾರಿ ಚಿನ್ನ ತಮ್ಮದಾಗಿಸಿಕೊಂಡರೆ ರಬಿನಾ ಯಾದವ್‌ ಕಂಚು ಪಡೆದರು. ಪುರುಷರ ಹೈಜಂಪ್‌ನ ಚಿನ್ನವೂ ಭಾರತದ ಪಾಲಾಯಿತು. ಸರ್ವೇಶ್‌ ಕುಶಾರೆ 2.21 ಮೀ. ಹಾರಿ ಚಿನ್ನ ಪಡೆದರೆ ಚೇತನ್‌ ಬಾಲಸುಬ್ರಹ್ಮಣ್ಯ ಬೆಳ್ಳಿ ಗೆದ್ದರು. ಈ ಮೂಲಕ ಭಾರತ ಚಿನ್ನ, ಬೆಳ್ಳಿ ಗೆಲ್ಲುವಂತಾಯಿತು.

ಪುರುಷರ 1,500 ಮೀ.ನಲ್ಲಿ ಅಜಯ್‌ ಕುಮಾರ್‌ ಸರೋಜ್‌ 3:54.18 ಸೆ.ನಲ್ಲಿ ಗುರಿ ತಲುಪಿ ಚಿನ್ನ ಪಡೆದರೆ ಅಜೀತ್‌ ಕುಮಾರ್‌ ಬೆಳ್ಳಿ ಜಯಿಸಿದರು. ನೇಪಾಲದ ಟಿಂಕ ಕಾರ್ಕಿ ಕಂಚು ಪಡೆದರು. ಕವಿತಾ ಯಾದವ್‌ ವನಿತೆಯರ 10,000 ಮೀ. ಓಟದಲ್ಲಿ ಭಾರತಕ್ಕೆ ಇನ್ನೊಂದು ಬೆಳ್ಳಿ ದೊರಕಿಸಿಕೊಟ್ಟರು.

ಈ ಮೊದಲು ವನಿತೆಯರ 1,500 ಮೀ.ನಲ್ಲಿ ಭಾರತದ ಚಂದಾ ಬೆಳ್ಳಿ ಗೆದ್ದರೆ ತಂಡ ಸದಸ್ಯೆ ಚಿತ್ರಾ ಪಲಕೀಝ್ ಕಂಚು ಪಡೆದರು.

ಆ್ಯತ್ಲೆಟಿಕ್ಸ್‌ ಸ್ಪರ್ಧೆಯ ಮೊದಲ ದಿನ ಭಾರತ 4 ಚಿನ್ನ, 4 ಬೆಳ್ಳಿ ಮತ್ತು 2 ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ.

ಭಾರತೀಯ ಶೂಟರ್‌ಗಳು ನಾಲ್ಕು ಚಿನ್ನ ಸಹಿತ 9 ಪದಕ ಗೆದ್ದುಕೊಂಡಿದ್ದಾರೆ. 19ರ ಹರೆಯದ ಮೆಹುಲಿ, ಚೈನ್‌ ಸಿಂಗ್‌, ಯೊಗೇಶ್‌ ಸಿಂಗ್‌ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದರೆ 10 ಮೀ. ಏರ್‌ರೈಫ‌ಲ್‌ನಲ್ಲಿ ಭಾರತೀಯ ತಂಡ ಚಿನ್ನ ಜಯಿಸಿದೆ. ಫೈನಲ್‌ನಲ್ಲಿ ಮೆಹುಲಿ 253.3 ಅಂಕ ಗಳಿಸಿ ಚಿನ್ನ ಗೆದ್ದರು. ಇದು ಹಾಲಿ ವಿಶ್ವದಾಖಲೆಯ ಸಾಧನೆಗಿಂತ (252.9) 0.4 ಅಂಕ ಹೆಚ್ಚು. ಈ ವಿಶ್ವದಾಖಲೆ ಭಾರತೀಯ ಶೂಟರ್‌ ಅಪೂರ್ವ ಚಾಂಡೇಲ ಅವರ ಹೆಸರಲ್ಲಿದೆ.

ಒಟ್ಟಾರೆ 18 ಚಿನ್ನ ಸಹಿತ 43 ಪದಕ ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English