ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಮಧ್ಯಾಹ್ನ ಕೈದಿಗಳ ಎರಡು ತಂಡಗಳ ನಡುವೆ ಘರ್ಷಣೆ ಸಂಭವಿಸಿದ್ದು, ಜೈಲ್ ವಾರ್ಡನ್ ಪುಟ್ಟಣ್ಣ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನ ಕೈದಿಗಳಿಗೆ ಊಟಕ್ಕೆ ಹೊರಗಡೆ ಬಿಟ್ಟ ಸಂದರ್ಭ ಕೈದಿಗಳ ನಡುವೆ ಮಾರಾಮಾರಿ ನಡೆದಿದೆ.
ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಕೈದಿಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೊಡಬೇಕೆಂಬ ಕೋರಿಕೆಯ ಮೇರೆಗೆ ಪೊಲೀಸರ ಸಮ್ಮತಿಯೊಂದಿಗೆ ಜೈಲು ಅಧಿಕಾರಿಗಳು ಅನುಮತಿ ನೀಡಿದ್ದರು, ನಮಾಜು ಮುಗಿಸಿ ಕೈದಿಗಳು ತಮ್ಮಸೆಲ್ ಗಳಿಗೆ ವಾಪಾಸಾಗುತ್ತಿದ್ದಾಗ ಇನ್ನೊಂದು ಗುಂಪಿನ ಕೈದಿಗಳು ಜೈಲಿನ ಆವರಣದಲ್ಲಿ ಕಲ್ಲು ಹಾಗೂ ಹೆಂಚುಗಳ ತುಂಡುಗಳನ್ನು ಮುಸ್ಲಿಂ ಕೈದಿಗಳ ಮೇಲೆ ಬಿಸಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಎರಡು ತಂಡಗಳ ನಡುವೆ ಹೊಡೆದಾಟ ಶುರುವಾಗಿದೆ.
ಈ ಸಂದರ್ಭ ಪರಿಸ್ಥಿತಿಯನ್ನು ನಿಯಂತ್ರಿಸಲು ತೆರಳಿದ ಜೈಲ್ ವಾರ್ಡನ್ ಅವರಿಗೆ ಕೈದಿಗಳ ತಂಡ ಚೆನ್ನಾಗಿ ಥಳಿಸಿದ್ದು ಅವರ ಎಡ ಕೈಗೆ ತೀವ್ರ ಗಾಯಗಳಾಗಿವೆ. ಕಲ್ಲು ತೂರಾಟದ ಬಳಿಕ ಕಾರಾಗೃಹಕ್ಕೆ ನಗರದ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಜೈಲಿನಲ್ಲಿ ಭದ್ರತಾ ಸಿಬ್ಬಂದಿಗಳ ಕೊರತೆ ಇದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ, ಈ ಕಾರಣದಿಂದಾಗಿ ಆಗಾಗ ಜೈಲು ಒಳಗಡೆ ಮಾರಾಮಾರಿ ನಡೆಯುತ್ತಲೇ ಇರುತ್ತದೆ ಎನ್ನಲಾಗಿದೆ. ಹಾಗೂ ಜೈಲು ಸೂಪರಿಂಟೆಂಡೆಂಟ್ ಅವರ ನಿರ್ಲಕ್ಷ್ಯವೇ ಈ ಎಲ್ಲಾ ಘಟನೆಗೆ ಕಾರಣ ಎಂದೂ ಹೇಳಲಾಗುತ್ತಿದೆ.
Click this button or press Ctrl+G to toggle between Kannada and English