ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ : ವುಮೆನ್ ಇಂಡಿಯಾ ಮೂವ್‌ಮೆಂಟ್ ಪ್ರತಿಭಟನೆ

11:39 AM, Thursday, December 5th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Women-india

ಮಡಿಕೇರಿ : ಮಹಿಳೆಯರ ಭದ್ರತೆಯನ್ನು ಸರ್ಕಾರಗಳು ತನ್ನ ಆದ್ಯತೆಯ ವಿಷಯವನ್ನಾಗಿ ಪರಿಗಣಿಸಬೇಕು ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ತಪ್ಪಿತಸ್ತರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸಿ ವುಮೆನ್ ಇಂಡಿಯಾ ಮೂವ್‌ಮೆಂಟ್‌ನ ಕೊಡಗು ಜಿಲ್ಲಾ ಘಟಕ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿತು.

ವುಮೆನ್ ಇಂಡಿಯಾ ಮೂವ್‌ಮೆಂಟ್‌ನ ಜಿಲ್ಲಾಧ್ಯಕ್ಷೆ ನಫೀಸ ಅಡ್ಕಾರ್ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಜಿಲ್ಲಾಡಳಿತ ಭವನದ ಮುಂಭಾಗ ಘೋಷಣೆಗಳ ಸಹಿತ ಪ್ರತಿಭಟನೆ ನಡೆಸಿದರು. ನಿತ್ಯೋಪಯೋಗಿ ವಸ್ತುಗಳ ಬೆಲೆ ಹೆಚ್ಚಳವನ್ನು ಖಂಡಿಸಿದರು.
ಈ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ನಫೀಸ ಅಡ್ಕಾರ್ ಮಾತನಾಡಿ, ರಾಷ್ಟ್ರವ್ಯಾಪಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳಾ ಸಮಾಜ ಭಯದ ನೆರಳಿನಲ್ಲಿ ಬದುಕುವಂತಾಗಿದೆ. ಹೀಗಿದ್ದೂ ನಮ್ಮನ್ನಾಳುವ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ’ಅಚ್ಛೇ ದಿನ್’ಗಾಗಿ ಕಾಯುತ್ತಲೇ ಬಂದಿದ್ದರು, ಅದಿನ್ನೂ ಬಂದೇ ಇಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ನಿತ್ಯೋಪಯೋಗಿ ವಸ್ತುಗಳ ಬೆಲೆಯೂ ಅನಿಯಂತ್ರಿತವಾಗಿ ಹೆಚ್ಚುತ್ತಲೇ ಇದೆ. ಈರುಳ್ಳಿ ಸೇರಿದಂತೆ ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದ್ದು, ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿ, ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೈತಿಕ ಹೊಣೆ ಹೊತ್ತು ಅಧಿಕಾರ ತ್ಯಜಿಸಬೇಕೆಂದು ಆಗ್ರಹಿಸಿದರು.

ಮಾಲೆಗಾಂವ್ ಸ್ಪೋಟದ ಆರೋಪಿ, ಜಾಮೀನಿನಲ್ಲಿರುವ ಪ್ರಜ್ಞಾ ಸಿಂಗ್ ಠಾಕೋರ್ ಸಂಸದರ ವೇಶದಲ್ಲಿ ಸಂಸತ್ ಪ್ರವೇಶಿಸಿರುವುದು ದೇಶದ ದುರಂತ. ಮಹಾತ್ಮಾ ಗಾಂಧೀಜಿಯನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಯನ್ನು ಸಂಸತ್ತಿನಲ್ಲಿ ಹೊಗಳಿರುವ ದೇಶದ್ರೋಹದ ಆರೋಪ ಹೊತ್ತಿರುವ ಪ್ರಜ್ಞಾ ಸಿಂಗ್ ಹೇಳಿಕೆಯು ಅವರ ಫ್ಯಾಸಿಸ್ಟ್ ಮನಸ್ಥಿತಿಯನ್ನು ತೋರಿಸುತ್ತದೆಂದು ಟೀಕಿಸಿದರು. ಬಳಿಕ ಬೇಡಿಕೆಗಳ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಡಾ. ಸ್ನೇಹ ಅವರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ವುಮೆನ್ ಇಂಡಿಯಾ ಮೂಮೆಂಟ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಫೀಸ ಅಕ್ಬರ್, ಸದಸ್ಯರಾದ ತನುಜ, ಜಯ ಬ್ಯಾಡಗೊಟ್ಟ, ಮೇರಿ ವರ್ಗೀಸ್, ಎನ್‌ಡಬ್ಲ್ಯುಎಫ್ ನಗರಾಧ್ಯಕ್ಷರಾದ ಜಾಕಿಯಾ ಹುರೈರ ಮೊದಲಾದವರು ಪಾಲ್ಗೊಂಡಿದ್ದರು.

ಬೇಡಿಕೆಗಳು-ದೇಶದ ಮಹಿಳೆಯರ ಭದ್ರತೆಯನ್ನು ಸರ್ಕಾರವು ತನ್ನ ಆದ್ಯತೆ ವಿಷಯವಾಗಿ ಪರಿಗಣಿಸಬೇಕು. ಅತ್ಯಾಚಾರ ತ್ವರಿತ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಜಾರಿಗೊಳಿಸಬೇಕು, ಅಶ್ಲೀಲ ಜಾಲತಾಣಗಳು, ಸಿನಿಮಾಗಳು, ಅಮಲು ಪದಾರ್ಥ ಮತ್ತು ಮಾದಕ ದ್ರವ್ಯಗಳನ್ನು ಸಂಪೂರ್ಣ ನಿಷೇಧಿಸಬೇಕು, ದಿನ ಬಳಕೆ ಸಾಧನಗಳಿಗೆ, ಔಷಧಿ ಸಾಮಗ್ರಿಗಳಿಗೆ, ತರಕಾರಿ, ಹಣ್ಣು ಹಂಪಲುಗಳಿಗೆ ಶೂನ್ಯ ತೆರಿಗೆ ಜಾರಿಗೊಳಿಸಬೇಕು ಹಾಗೂ ಅವುಗಳ ಬೆಲೆಗಳನ್ನು ನಿಯಂತ್ರಿಸಬೇಕು. ಲೂಟಿಕೋರ ದಲ್ಲಾಳಿ-ಮಧ್ಯವರ್ತಿಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಯನ್ನು ಶೋಷಿಸುವ ಕಾಳಸಂತೆಕೋರರು ಮತ್ತು ದಲ್ಲಾಳಿಗಳನ್ನು ನಿಯಂತ್ರಿಸುವಲ್ಲಿ ನಿರ್ಲಕ್ಷ್ಯತೆ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮಾರುಕಟ್ಟೆಗಳ ನಿಯಂತ್ರಣವನ್ನು ಆದ್ಯತೆಯೊಂದಿಗೆ ಪರಿಗಣಿಸಬೇಕು, ಬಾಂಬ್ ಸ್ಪೋಟದ ಆರೋಪಿ, ರಾಷ್ಟ್ರಪಿತನ ಕೊಲೆಯನ್ನು ಸಮರ್ಥಿಸಿದ ಪ್ರಜ್ಞಾಸಿಂಗ್ ಠಾಕೋರ್‌ರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English