ಪೌರತ್ವ ತಿದ್ದುಪಡಿ ಕಾಯ್ದೆ : ಈಶಾನ್ಯ ಭಾರತದಲ್ಲೆಡೆ ಕೇಂದ್ರದ ವಿರುದ್ಧ ಪ್ರತಿಭಟನೆ

4:22 PM, Wednesday, December 11th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Assam

ಅಸ್ಸಾಂ : ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನೂತನ ಪೌರತ್ವ ತಿದ್ದುಪಡಿ ಕಾಯ್ದೆಯ ಮೇಲೆ ಇಂದು ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯುತ್ತಿರುವ ಬೆನ್ನಿಗೆ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಕೇಂದ್ರ ಸರ್ಕಾರ 2016ರ ರಿಂದಲೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ತುದಿಗಾಲಲ್ಲಿ ನಿಂತಿದೆ. ಆದರೆ, ಕಳೆದ ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ “ರಾಷ್ಟ್ರೀಯ ಪೌರತ್ವ ನೋಂದಣಿ” (ಎನ್ಆರ್ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಬಿ)ಯನ್ನು ಈಶಾನ್ಯ ರಾಜ್ಯಗಳು ಕಟುವಾಗಿ ವಿರೋಧಿಸುತ್ತಲೇ ಇದೆ.

“ಪೌರತ್ವ ತಿದ್ದುಪಡಿ ಮಸೂದೆ ದೇಶಕ್ಕೆ ಅಕ್ರಮವಾಗಿ ನುಸುಳಿದವರಿಗೂ ಪೌರತ್ವ ನೀಡಿ ಮಾನ್ಯತೆ ಮಾಡುತ್ತಿದೆ. ಅಲ್ಪಸಂಖ್ಯಾತ ಮುಸ್ಲೀಂ ಸಮುದಾಯದ ವಿರುದ್ಧ ತಾರತಮ್ಯ ಮಾಡುತ್ತಿದೆ. 1985 ಈಶಾನ್ಯ ರಾಜ್ಯಗಳ ಒಪ್ಪಂದದ ಮಹತ್ವವನ್ನೇ ಹಾಳುಗೆಡವುತ್ತಿದೆ, ಸ್ಥಳೀಯ ಹಿಂದೂಗಳೆ ಇಲ್ಲಿ ಅಲ್ಪಸಂಖ್ಯಾತರಾಗಲಿದ್ದಾರೆ ಹಾಗೂ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಸ್ವಾಯತ್ತತೆಯನ್ನು ಬಲಿಪಡೆಯುತ್ತಿದೆ” ಎಂಬುದು ಕಾಯ್ದೆಯನ್ನು ವಿರೋಧಿಸುತ್ತಿರುವ ಹೋರಾಟಗಾರರ ವಾದ.

ಆದರೆ, ಇಷ್ಟೆಲ್ಲಾ ಹೋರಾಟದ ನಡುವೆಯೂ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದಿದೆ. ಅಲ್ಲದೆ, ಇಂದು ರಾಜ್ಯಸಭೆಯಲ್ಲೂ ಈ ಮಸೂದೆಯನ್ನು ಮಂಡಿಸಿದೆ. ಪರಿಣಾಮ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿದ ದಿನದಿಂದ ಈಶಾನ್ಯ ರಾಜ್ಯಗಳ ಜನರ ಆಕ್ರೋಶ ಬೂದಿ ಮುಚ್ಚಿದ ಕೆಂಡದಂತಿತ್ತು. ಆದರೆ, ಈ ಕಾಯ್ದೆ ಲೋಕಸಭೆಯಲ್ಲಿ ಮಂಡನೆಯಾಗುತ್ತಿದ್ದಂತೆ ಜನರ ಆಕ್ರೋಶ ಕಟ್ಟೆಯೊಡೆದಿದ್ದು ಇದೀಗ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಪರಿಣಾಮ ಈಶಾನ್ಯ ಭಾರತದಲ್ಲಿ ಹಿಂಸಾಚಾರ ತಾಂಡವವಾಡುತ್ತಿದೆ.

ನೂತನ ಮಸೂದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯದ ಹೋರಾಟಗಾರರು ಹಾಗೂ 40ಕ್ಕೂ ಹೆಚ್ಚು ಸ್ಥಳೀಯ ವಿದ್ಯಾರ್ಥಿ ಸಂಘಟನೆಗಳು ಕಳೆದ ಸೋಮವಾರವೇ ಈಶಾನ್ಯ ರಾಜ್ಯಗಳ ಬಂದ್ಗೆ ಕರೆ ನೀಡಿತ್ತು. ಆದರೆ, ಇಂದು ಜನ ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

ಪರಿಣಾಮ ಅಸ್ಸಾಂ, ತ್ರಿಪುರದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಪರಿಸ್ಥಿತಿ ಕೈಮೀರಿದೆ. ಪ್ರತಿಭಟನಾಕಾರರನ್ನು ಚದುರಿಸಲು ಸೇನೆ ಮತ್ತು ಪೊಲೀಸರು ಟಿಯರ್ ಗ್ಯಾಸ್ ಸಿಡಿಸಿದೆ. ಆದರೂ ಪರಿಸ್ಥಿತಿ ಹತೋಟಿಗೆ ಬರುವ ಯಾವ ಸಾಧ್ಯತೆಯೂ ಕಾಣಿಸುತ್ತಿಲ್ಲ. ಹೀಗಾಗಿ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ 144 ಸೆಕ್ಷನ್ ಜಾರಿ ಮಾಡಲಾಗಿದ್ದು ರಕ್ಷಣೆಗಾಗಿ ಹೆಚ್ಚುವರಿ ಸೈನ್ಯವನ್ನು ನೇಮಿಸಲಾಗಿದೆ. ಆದರೂ ಈಶಾನ್ಯ ಭಾರತದಲ್ಲಿ ಹಿಂಸಾಚಾರ ನಿಲ್ಲುವ ಯಾವುದೇ ಲಕ್ಷಣಗಳೂ ಗೋಚರಿಸುತ್ತಿಲ್ಲ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English