ಮೂಡುಬಿದಿರೆ : ಮನುಷ್ಯ ತನ್ನ ಸ್ವಾರ್ಥಪರ ಕ್ರಿಯೆಗಳಿಂದ ಪ್ರಕೃತಿಯನ್ನು ನಾಶ ಮಾಡುತ್ತಾ ಬಂದಿದ್ದು, ಇಂದು ನಮ್ಮ ವಾತಾವರಣ ಎನ್ನುವುದು ”ವಾತಾರಾವಣ”ವಾಗಿ ಮಾರ್ಪಟ್ಟಿದೆ ಎಂದು ಪರಿಸರವಾದಿ ಹಾಗೂ ಸರೀಸೃಪ ತಜ್ಞ ಗ್ಝೇವಿಯರ್ ಕಿರಣ್ ಪಿಂಟೋ ತಿಳಿಸಿದರು.
ಅವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್‌ನ ವತಿಯಿಂದ ”ನೇಚರ್ ಆಂಡ್ ಸ್ನೇಕ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ‍್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ನಮ್ಮ ಪರಿಸರದಲ್ಲಿ ಒಟ್ಟು84 ಲಕ್ಷಕ್ಕೂ ಅಧಿಕ ಜೀವರಾಶಿಗಳಿದ್ದು, ಮನುಷ್ಯ ಅವುಗಳಲ್ಲಿ ಒಂದು ಜೀವಿಯಷ್ಟೆ. ನಾವು ಸ್ವಚಂಧವಾಗಿ ಉಸಿರಾಡಲು ಕನಿಷ್ಠ 34 ಶೇಕಡಾದಷ್ಟು ಅರಣ್ಯದ ಅವಶ್ಯಕತೆಯಿದ್ದು, ಆದರೆ ಪ್ರಸ್ತುತ 18 ಶೇಕಡಾ ದಷ್ಟು ಮಾತ್ರ ಅರಣ್ಯವಿದ್ದು, ನಾವು ಉಸಿರಾಡಲು ಹಣ ನೀಡಿ ಆಮ್ಲಜನಕವನ್ನು ಖರೀದಿ ಮಾಡುವ ಪರಿಸ್ಥಿತಿ ಬಂದಿದೆ ಎಂದರು. ಆದ್ದರಿಂದ ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಕನಿಷ್ಠ 30 ಗಿಡಗಳನ್ನಾದರೂ ನೆಟ್ಟು, ಪರಿಸರದಲ್ಲಿ ಅರಣ್ಯವನ್ನು ವೃದ್ಧಿಸುವಲ್ಲಿ ಮುಂದಾಗಬೇಕು ಎಂದರು.
ಭಾರತದಲ್ಲಿ 185 ಜಾತಿಗೂ ಮಿಕ್ಕಿದ ಹಾವುಗಳಿದ್ದು, ಅವುಗಳಲ್ಲಿ ಕೇವಲ ೧೦ ಪ್ರಬೇಧದ ಹಾವುಗಳು ವಿಷಕಾರಿಗಳಾಗಿವೆ. ಇವುಗಳಲ್ಲಿ ಕಳಿಂಗ ಸರ್ಪ ಹಾಗೂ ಸೀ ಸ್ನೇಕ್ ಹಾವುಗಳು ಅತ್ಯಂತ ವಿಷಕಾರಿ ಹಾವುಗಳಾಗಿವೆ ಎಂದರು. ವಿಷಕಾರಿ ಹಾವುಗಳು ಕಚ್ಚಿದಾಗ ವಹಿಸಬೇಕಾದ ಪ್ರಥಮ ಚಿಕಿತ್ಸೆಯನ್ನು ವಿವರಿಸಿದ ಅವರು, ಹಾವುಗಳು ಕಚ್ಚಿದಾಗ ಭಯಪಡದೆ, ಕಚ್ಚಿರುವ ಜಾಗದಲ್ಲಿ ಮಧ್ಯಮ ಬಿಗಿತದಿಂದ ಕಟ್ಟಿ, ನೀರನ್ನು ಸೇವಿಸದೇ ಕೂಡಲೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದರು.
ಕಾರ‍್ಯಕ್ರಮದ ಅಧ್ಯಕ್ಷತೆವಹಿಸಿ ಮಾತಾನಾಡಿದ ಕಾಲೇಜಿನ ಪ್ರಾಚಾರ‍್ಯ ಪ್ರೋ ರಮೇಶ್ ಶೆಟ್ಟಿ, ಕಾಲೇಜಿನ ಇಕೋ ಕ್ಲಬ್‌ನಿಂದ ಇನ್ನೂ ಹೆಚ್ಚಿನ ಪರಿಸರಕ್ಕೆ ಸಂಬಂದಿಸಿದ ಕಾರ‍್ಯಕ್ರಮಗಳ ಮೂಲಕ ಯುವ ಜನತೆಯಲ್ಲಿ ಗಾಳಿ, ನೀರು, ಭೂಮಿಯ ಸಂರಕ್ಷಣೆಯ ಕುರಿತು ಜಾಗೃತಿಯನ್ನು ಮೂಡಿಸುವಂತಾಗಲಿ ಎಂದರು.
ಕಾರ‍್ಯಕ್ರಮವನ್ನು ಮಾನಸಿ ಕಾವೇರಮ್ಮ ನಿರ್ವಹಿಸಿ, ಕೀರ್ತನಾ ನಾಯಕ್ ಅತಿಥಿಗಳನ್ನು ಪರಿಚಯಿಸಿ, ಪೌಲ್ ಪ್ರಸನ್ನ ವಂದಿಸಿದರು. ಕಾರ‍್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಅಭಿನಂದನ್ ಶೆಟ್ಟಿ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ವೆಂಕಟೇಶ್ ನಾಯಕ್ ಉಪಸ್ಥಿತರಿಸದ್ದರು.
Click this button or press Ctrl+G to toggle between Kannada and English