ಮಂಗಳೂರು : ವಿವಿಧ ನೆಪವೊಡ್ಡಿ ಸಾರ್ವಜನಿಕರು ಮತ್ತು ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಗುರುವಾರ ಮೀನು ಸಾಗಾಟ ಸ್ಥಗಿತಗೊಳಿಸಿದ ಲಾರಿ ಚಾಲಕರು ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಗಮನ ಸೆಳೆದರು.
ಮಂಗಳೂರು ದಕ್ಕೆ ಮೀನು ಲಾರಿ ಚಾಲಕರ ಸಂಘ (ಸಿಐಟಿಯು) ಮತ್ತು ಕರಾವಳಿ ಕರ್ನಾಟಕ ಚಾಲಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಮುಖಂಡ ವಸಂತ ಆಚಾರಿ ಮಾತನಾಡಿದರು.
ಮೀನು ಸಾಗಾಟ ಲಾರಿಗಳ ಮೀನು ತ್ಯಾಜ್ಯ ನೀರು ಸಂಗ್ರಹವಾಗುವ ಟ್ಯಾಂಕ್‌ಗಳಿಂದ ನೀರು ಹೊರಚೆಲ್ಲಲು ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸೂಕ್ತ ಸ್ಥಳದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು. ಪರಿಸರ ಹಾಳಾಗುತ್ತದೆ, ಅಪಘಾತವಾಗುತ್ತದೆ ಎಂಬ ಕಾರಣ ನೀಡಿ ಲಾರಿಗಳನ್ನು ತಡೆದು ಚಾಲಕರಿಗೆ ಹಲ್ಲೆ ನಡೆಸುವುದನ್ನು, ಹಣ ಲೂಟಿ ಮಾಡುವುದನ್ನು, ಮೊಬೈಲ್ ಕಸಿಯುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪೊಲೀಸರು ಕೂಡಾ ಮೀನು ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ಕಿರುಕುಳ ನೀಡುತ್ತಿದ್ದಾರೆ. ಎಫ್‌ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದರಿಂದ ಚಾಲಕ, ಮಾಲಕರಿಗೆ ಸಮಸ್ಯೆಯೊಡ್ಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮೀನು ಸಾಗಾಟ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ ಹಿನ್ನಲೆಯಲ್ಲಿ ಸದಾ ಗಿಜುಗುಟ್ಟುತ್ತಿದ್ದ ಬಂದರು ದಕ್ಕೆಯಲ್ಲಿ ಮೀನು ವ್ಯವಹಾರದ ಚಟುವಟಿಕೆ ಅಷ್ಟೇನೂ ಕಾಣಿಸಲಿಲ್ಲ. ಬೋಟ್‌ಗಳಿಂದ ಮೀನುಗಳನ್ನು ಅನ್‌ಲೋಡ್ ಮಾಡುತ್ತಿದ್ದ ಕಾರ್ಮಿಕರು ಕೂಡ ಮುಷ್ಕರದಲ್ಲಿ ಪಾಲ್ಗೊಂಡ ಕಾರಣ ಮೀನುಗಾರಿಕೆಯ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.
Click this button or press Ctrl+G to toggle between Kannada and English