ಮಂಗಳೂರು : ಕೃಷಿ ಚಟುವಟಿಕೆಯಲ್ಲಿ ಯಾಂತ್ರಿಕರಣ ಹಾಗೂ ರಾಸಾಯನಿಕ ಬಳಕೆ ಮಾನವ ಜೀವ ಸಂಕುಲಕ್ಕೆ ಮಾರಕವಾಗಿದ್ದು, ಕೃಷಿ ಹಾಗೂ ಆಹಾರ ಪದ್ಧತಿಗಳ ಬದಲಾವಣೆಯ ಪ್ರಭಾವದಿಂದ ಜನಸಂಸ್ಕೃತಿ, ಜೀವನಾರ್ವತಕ ಮತ್ತು ವಾರ್ಷಿಕಾವರ್ತನ ಆಚರಣೆಗಳು ಮಹತ್ವವನ್ನು ಕಳೆದುಕೊಳ್ಳುತ್ತಿದ್ದು, ಜೀವ ವೈವಿಧ್ಯತೆಯಿಂದ ಕೂಡಿದ ತುಳುನಾಡಿನ ಭೌಗೋಳಿಕ ಪರಂಪರೆ, ಸಸ್ಯ ಸಂಪತ್ತು, ಪಾರಂಪರಿಕ ಕಸುಬುಗಳು, ವೈದ್ಯಪದ್ಧತಿಗಳು ಜನಜೀವನದಿಂದ ಮರೆಯಾಗುತ್ತಿದ್ದು, ನಗರೀಕರಣದ ಆಕರ್ಷಣೆಯಿಂದ ಆಧೀಮಾ ಸಂಸ್ಕೃತಿ ನಾಶವಾಗುತ್ತಿದೆ. ಪ್ರಾಕೃತಿಕ ಸಂಪನ್ಮೂಲ ಆಧಾರಿತ ಕೃಷಿ ಬದುಕನ್ನು ಮರುಸೃಷ್ಟಿಸುವ ಮೂಲಕ ತುಳು ಪರಂಪರೆಯನ್ನು ಉಳಿಸಬೇಕು ಎಂದು ತುಳು ಮತ್ತು ಆರೆಭಾಷೆ, ಜಾನಪದ ಸಂಶೋಧಕ, ಪ್ರಾಧ್ಯಾಪಕರಾದ ಡಾ. ವಿಶ್ವನಾಥ ಬದಿಕಾನ ಹೇಳಿದರು.
ಅವರು ತುಳು ನಾಡು ನುಡಿ ಭಾಷೆಯ ಬೆಳವಣಿಗೆಗೆ ಶ್ರಮಿಸುವ ನೆಲೆಗಟ್ಟಿನಲ್ಲಿ ಸಂಘಟಿತವಾದ ತುಳು ಜೋಕುಲೆ ಕೂಟ ಮಂಗಳೂರು ವತಿಯಿಂದ ಗಣೇಶ್ ಸಂಕೀರ್ಣ ಬೆಂದೂರುವೆಲ್‌ನಲ್ಲಿ ನಡೆದ ’ ಇಲ್ಲಾ ಜಾಲ್‌ಡ್ ಪಾತೆರಕತೆ ’ ಎಂಬ ಕಾರ್ಯಕ್ರಮದಲ್ಲಿ ತುಳು ಭಾಷಾ ಆಧ್ಯನಾಸಕ್ತರನ್ನುದ್ಧೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ತುಳು ಜಾನಪದ ಸಂಶೋಧನೆ, ಕಾಲಜ್ಞಾನ, ಲೋಕದೃಷ್ಟಿ, ಕೃಷಿ ಜ್ಞಾನ, ಆಚರಣೆ, ವಾರ್ಷಿಕ ಮತ್ತು ಜೀವನಾವರ್ತಕ ಆಚರಣೆಗಳು, ಜಾನಪದ ಕತೆಗಳು, ತುಳು ಮತ್ತು ಅರೆಭಾಷೆ ಸಂಬಂಧ, ಆರಾಧನ ಸಂಸ್ಕೃತಿ, ತುಳು ಸಂಶೋಧನೆಯ ಸಾಧ್ಯತೆಗಳ ಕುರಿತು ಉಪನ್ಯಾಸವನ್ನು ಅವರು ನೀಡಿದರು, ನಂತರ ಸಂವಾದ ನಡೆಸಿ, ಸಸ್ಯ-ಪ್ರಾಣಿ-ಮಾನವ ಜೊತೆಗಿನ ಅಂತರ್ ಸಂಬಂಧಗಳನ್ನು ವಿವರಿಸಿ, ಕಾಲಜ್ಞಾನ, ಜಾತಿ ಏಣಿಶ್ರೇಣಿ ವ್ಯವಸ್ಥೆ, ಜಾನಪದ ಕತೆಗಳು, ಸೂತಕ, ಮಡಿ ಮೈಲಿಗೆ ಕಲ್ಪನೆಯಲ್ಲಿ ಜನಪದರ ಬದುಕು, ಹುಟ್ಟು ಸಾವು, ಆಹಾರ ಪದ್ಧತಿಗಳ ಕುರಿತು ಚರ್ಚಿಸಿದರು.
ಈ ಕಾರ್ಯಕ್ರಮದಲ್ಲಿ ಜಾನಪದ ಸಂಶೋಧಕರು, ಪ್ರಾಧ್ಯಾಪಕರು ಆದ ಡಾ. ಸಾಯಿಗೀತಾ ಹೆಗ್ಡೆ, ತುಳು ಜೋಕುಲೆ ಕೂಟ ಮಂಗಳೂರುನ ಸದಸ್ಯರುಗಳು, ವಿವಿಧ ಕಾಲೇಜಿನ ಪ್ರಾಧ್ಯಾಪಕರುಗಳು, ವಿದ್ಯಾರ್ಥಿಗಳು, ಸಮಾನ ಮನಸ್ಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ತುಳು ಭಾಷಾ ಅಧ್ಯಯನಾಸ್ತಕರು ಭಾಗವಹಿಸಿದ್ದರು.
Click this button or press Ctrl+G to toggle between Kannada and English