ಕಲಬುರಗಿ : ಕಲಬುರಗಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಜೂನ್ ಒಳಗಾಗಿ ’ಬೃಹತ್ ಕೃಷಿ ಮೇಳ’ ನಡೆಸಲು ಚಿಂತನೆ ಮಾಡಲಾಗಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕರಾದ ಡಾ. ಎಲ್. ಎಚ್. ಮಂಜುನಾಥ್ ತಿಳಿಸಿದರು.
ಕಲಬುರಗಿ ಆಕಾಶವಾಣಿಗೆ ಇತ್ತೀಚೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು ಯೋಜನೆಯ ಬಲು ದೊಡ್ಡ ಕಾರ್ಯಕ್ರಮ ಕೃಷಿ ಮೇಳ ಆಯೋಜನೆಯಾಗಿದ್ದು ಈ ಭಾಗದಲ್ಲಿ ಕೃಷಿ, ಕೃಷಿ ಮಾಧ್ಯಮ, ಕೃಷಿ ಯಂತ್ರೋಪಕರಣ, ಕೃಷಿಯ ಆಧುನಿಕ ಬೆಳವಣಿಗೆ , ಅನುದಾನ, ಜಾನುವಾರು ಪ್ರದರ್ಶನ ಹೀಗೆ ವಿಭಿನ್ನವಾಗಿರುವ ಮಾಹಿತಿ ಒದಗಣೆಗಾಗಿ ಕಲಬುರಗಿಯಲ್ಲಿ ಕೃಷಿ ಮೇಳ ನಡೆಸಲಾಗುವುದೆಂದರು.
ಯೋಜನೆಯ ಪ್ರಸ್ತುತ ರಾಜ್ಯ ವ್ಯಾಪಿ ಇದ್ದು 2015ರಲ್ಲಿ ಬೀದರ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಆರಂಭಿಸುವುದರೊಂದಿಗೆ ಕಲ್ಯಾಣ ಕರ್ನಾಟಕದ ಪ್ರಗತಿಗೆ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು. ಪ್ರಸ್ತುತ 52,000 ಸಂಘಗಳ ರಚನೆಯಾಗಿದ್ದು ಇದರಲ್ಲಿ 10 ಸಾವಿರ ಕೃಷಿಕರು ಹಾಗೂ40 ಸಾವಿರ ದುರ್ಬಲ ವರ್ಗದವರನ್ನು ಒಳಗೊಂಡಿದೆ ಎಂದರು. ನಾಲ್ಕು ವರ್ಷಗಳಲ್ಲಿ 1500 ಕೋಟಿ ರೂ. ಬ್ಯಾಂಕ್ ವ್ಯವಹಾರ ನಡೆಸುತ್ತಿದೆ. ಜ್ಞಾನ ದೀಪ ಕಾರ್ಯಕ್ರಮ ಸ್ವಚ್ಛ ಶ್ರದ್ಧಾಕೇಂದ್ರ ಸುಜ್ಞಾನ ನಿಧಿ ಶಿಷ್ಯವೇತನ ನಮ್ಮೂರು ನಮ್ಮ ಕೆರೆ, ಮಾಸಾಶನ, ಕೃಷಿ ಯಶಸ್ವಿಗಾಗಿ ನಡೆದಿದೆ. ಈಗಾಗಲೇ 60 ಕೆರೆಗಳ ಅಭಿವೃದ್ಧಿಯಾಗಿದ್ದು ಇನ್ನು 30 ಕೆರೆಗಳ ಪುನಶ್ಚೇತನಕ್ಕೆ ಮುಂದಾಗಿದೆ. ದಾವಣಗೆರೆಯಲ್ಲಿ ’ಕಟಾವು ಯಂತ್ರ ಬ್ಯಾಂಕ್ ಆರಂಭಿಸಿದ್ದು ಇದನ್ನು ಕಲ್ಯಾಣ ಕರ್ನಾಟಕಕ್ಕೆ ವಿಸ್ತರಿಸಲು ಯೋಜಿಸಲಾಗಿದೆ. ಈ ಭಾಗದಲ್ಲೂ ಸರ್ವರ ಸಹಕಾರದಿಂದ ಯೋಜನಯ ಎಲ್ಲ ಕಾರ್ಯಕ್ರಮ ಯಶಸ್ವಿ ಸಾಧಿಸಿದೆ ಎಂದು ಮಂಜುನಾಥ್ ಹೇಳಿದರು.
ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಇವರನ್ನು ಸಂದರ್ಶಿಸಿದ್ದರು. ಯೋಜನೆಯ ಕಲಬುರಗಿ ಪ್ರಾದೇಶಿಕ ನಿರ್ದೇಶಕ ಶಿವರಾಯ ಪ್ರಭು ಹಾಗೂ ನಿರ್ದೇಶಕ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು. ಡಾ. ಎಲ್ ಎಚ್. ಮಂಜುನಾಥ್ ಅವರಿಗೆ ಕಾರ್ಯಕ್ರಮ ಮುಖ್ಯಸ್ಥರಾದ ರಾಜೇಂದ್ರ ಆರ್ ಕುಲಕರ್ಣಿ ಸ್ಮರಣಿಕೆ, ಕೃತಿ ನೀಡಿ ಗೌರವಿಸಿದರು. ಕಾರ್ಯಕ್ರಮ ನಿರ್ವಾಹಕರಾದ ಅನಿಲ ಕುಮಾರ ಎಚ್. ಎನ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English