ಮಡಿಕೇರಿ : ಸೋಮವಾರಪೇಟೆ ತಾಲೂಕಿನ ಬಾಣಾವರ ವ್ಯಾಪ್ತಿಯ ಸಿದ್ದಲಿಂಗಪುರ, ಸಂಗಯ್ಯನಪುರ, ಬಸರಿಗುಪ್ಪೆ, ಅಳಿಲುಗುಪ್ಪೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಡಿವಾಣ ಹಾಕುವಂತೆ ಆಗ್ರಹಿಸಿ ಸಾರ್ವಜನಿಕರು ಬಾಣಾವರ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದರು.
12 ಕಾಡಾನೆಗಳ ಹಿಂಡು ಈ ಭಾಗದಲ್ಲಿ ಬೀಡುಬಿಟ್ಟಿದ್ದು, ಜನವಸತಿ ಪ್ರದೇಶದಲ್ಲಿಯೇ ಸಂಚರಿಸುತ್ತಿವೆ. ಗ್ರಾಮಸ್ಥರ ಕೃಷಿ ಫಸಲು ನಷ್ಟಗೊಳಿಸುತ್ತಿವೆ. ಕಳೆದ ವಾರ ಅರಣ್ಯ ರಕ್ಷಕನ ಮೇಲೆಯೇ ಧಾಳಿ ನಡೆಸಿದೆ. ಇದರೊಂದಿಗೆ ರಸ್ತೆ, ಹೊಲಗಳಿಗೆ ತೆರಳುವ ಕೃಷಿಕರ ಮೇಲೂ ಧಾಳಿ ನಡೆಸುತ್ತಿವೆ. ಆನೆಗಳನ್ನು ಕಾಡಿಗಟ್ಟುವಂತೆ ಹಲವಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಶಮಾ ಅವರೊಂದಿಗೆ ಮಾತುಕತೆ ನಡೆಸಿದ ಪ್ರತಿಭಟನಾಕಾರರು, ಆನೆಗಳನ್ನು ಬಾಗೇರಿ ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳಬೇಕು. ಕೆಲವೆಡೆಗಳಲ್ಲಿ ಆನೆ ಕಂದಕವನ್ನು ದುರಸ್ತಿಗೊಳಿಸಬೇಕು. ಸೋಲಾರ್ ಬೇಲಿಯನ್ನು ಸಮರ್ಪಕಗೊಳಿಸಬೇಕು. ಕೆಸ, ಗೆಣಸು ಸೇರಿದಂತೆ ಇತರ ಬೆಳೆಗಳ ನಷ್ಟಕ್ಕೂ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಗಣಗೂರು ಗ್ರಾ.ಪಂ. ಸದಸ್ಯ ಶಶಿಕುಮಾರ್, ತೊರೆನೂರು ಗ್ರಾ.ಪಂ. ಸದಸ್ಯ ರವಿಕುಮಾರ್, ಪ್ರಮುಖರಾದ ಮಧುಶಂಕರ್, ನಾಪಂಡ ಬೋಪಯ್ಯ, ಬೇಬಿ, ರೋಹಿತ್, ಶೇಖರ್, ಅರಣ್ಯ ಇಲಾಖೆಯ ಸತೀಶ್, ಪುನೀತ್ ಅವರುಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English