ನವ ದೆಹಲಿ : ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರಂಭವಾಗಿರುವ ಪ್ರತಿಭಟನೆಯ ಕಾವು ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಇಂದೂ ಸಹ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದ್ದು ದೆಹಲಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ 13 ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದೆ.
ಅಧಿಕ ವಾಹನ ಸಂದಣಿ ಹೊಂದಿರುವ ದೆಹಲಿಯಲ್ಲಿ ಮೆಟ್ರೋ ಸಂಚಾರ ಪ್ರಯಾಣಿಕರ ಜೀವನಾಡಿ. ಪ್ರತಿದಿನ ಲಕ್ಷಾಂತರ ಜನ ಮೆಟ್ರೋ ಸೇವೆಯನ್ನು ಅವಲಂಭಿಸಿದ್ದಾರೆ. ಆದರೆ, ಪೌರತ್ವ ಕಾಯ್ದೆ ವಿರೋಧಿ ಹೋರಾಟ ಹಿಂಸಾರೂಪ ಪಡೆಯುವ ಸಾಧ್ಯತೆಯನ್ನು ಅರಿತ ದೆಹಲಿ ಮೆಟ್ರೋ ಆಡಳಿತ ಮಂಡಳಿ ಇಂದು ನಗರದ ಪ್ರಮುಖ 13 ಮೆಟ್ರೋ ನಿಲ್ದಾಣವನ್ನು ರಾತ್ರಿ 12 ಗಂಟೆಯವರೆಗೆ ಸ್ಥಗಿತಗೊಳಿಸಲು ತೀರ್ಮಾನಿಸಿದೆ. ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಜನ ಟ್ರಾಫಿಕ್ ಕಿರಿಕಿರಿಯನ್ನೂ ಅನುಭವಿಸುವಂತಾಗಿದೆ.
ಆರಂಭದಲ್ಲಿ ಈಶಾನ್ಯ ಭಾರತ ದೆಹಲಿ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಹೋರಾಟ ಇದೀಗ ಇಡೀ ರಾಷ್ಟ್ರದಾದ್ಯಂತ ವ್ಯಾಪಿಸಿದೆ. ಹೋರಾಟದ ಕಿಚ್ಚು ದೆಹಲಿಯಿಂದ ದಕ್ಷಿಣ ಭಾರತದವರೆಗೆ ದಿನೇ ದಿನೇ ಹೆಚ್ಚುತ್ತಲೇ ಇದೆ.
ಇಷ್ಟು ದಿನ ತಣ್ಣಗಿದ್ದ ಬೆಂಗಳೂರಿನಲ್ಲೂ ಪರಿಸ್ಥಿತಿ ಈಗ ಕಾವೇರಿದೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಇಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಅಲ್ಲದೆ, ಪ್ರತಿಭಟನೆ ವೇಳೆ ಹಿಂಸಾಚಾರ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
Click this button or press Ctrl+G to toggle between Kannada and English