ಮಡಿಕೇರಿ : ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆಯ ಬೆಂಬಲಿತ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ, ಎನ್‌ಆರ್‌ಸಿ ಮತ್ತು ಸಿಎಎ ಸಂವಿಧಾನ ಬಾಹಿರ ಕಾಯ್ದೆಯಾಗಿದ್ದು, ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಬಾರದೆಂದು ಒತ್ತಾಯಿಸಿದರು. ಕಾಯ್ದೆ ವಿರುದ್ಧ ದೇಶದಾದ್ಯಂತ ಯುವ ಜನತೆ ಪ್ರತಿಭಟನೆಯಲ್ಲಿ ತೊಡಗಿದ್ದಾರೆ, ಆದರೆ ಈ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಮತ್ತು ಗೋಲಿಬಾರ್ ಮೂಲಕ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಆರೋಪಿಸಿದರು.
ಮಂಗಳೂರಿನಲ್ಲಿ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಅಮಾಯಕ ಯುವಕರ ಮೇಲೆ ಪೊಲೀಸರು ಗೋಲಿಬಾರ್ ಮಾಡಿದ್ದು, ಇದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದರು. ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯದರ್ಶಿ ಇಬ್ರಾಹಿಂ, ಜಿಲ್ಲಾ ಸಮಿತಿ ಸದಸ್ಯ ತೈಸಿರ್, ಸದಸ್ಯರಾದ ಯಾಸಿರ್, ರಂಶೀದ್, ಶಕೀರ್, ಸುಹೈಲ್ ಮತ್ತಿತರರು ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English