ಮುಸ್ಲಿಂ ಜಮಾಅತ್‌ಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ : ಕೇಂದ್ರದ ನಿಲುವಿಗೆ ಖಂಡನೆ

9:32 AM, Wednesday, December 25th, 2019
Share
1 Star2 Stars3 Stars4 Stars5 Stars
(No Ratings Yet)
Loading...

Protest

ಮಡಿಕೇರಿ : ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಮತ್ತು ಪೌರತ್ವ ನೋಂದಣಿ(ಎನ್‌ಆರ್‌ಸಿ)ಯನ್ನು ವಿರೋಧಿಸಿ ಹಾಗೂ ಮಂಗಳೂರು ಗೋಲಿಬಾರ್ ಪ್ರಕರಣವನ್ನು ಖಂಡಿಸಿ ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್‌ಗಳ ಒಕ್ಕೂಟದಿಂದ ನಗರದ ಗಾಂಧಿ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.

ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್‌ಗಳ ಒಕ್ಕೂಟದ ಕಾರ್ಯಾಧ್ಯಕ್ಷ ಪಿ.ಎಂ. ಖಾಸಿಂ ಮತ್ತು ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್ ಅವರ ನೇತೃತ್ವದಲ್ಲಿ ನಗರದ ಗಾಂಧಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಕಾರ್ಯಕರ್ತರು ’ರಿಜೆಕ್ಟ್ ಸಿಎಎ, ಬಾಯ್‌ಕಾಟ್ ಎನ್‌ಆರ್‌ಸಿ, ಸೇವ್ ಇಂಡಿಯಾ’ ಎನ್ನುವ ಫಲಕಗಳನ್ನು ಪ್ರದರ್ಶಿಸಿ, ಅಂಬೇಡ್ಕರ್, ಮಹಾತ್ಮಾ ಗಾಂಧೀಜಿಯವರ ಭಾವ ಚಿತ್ರಗಳನ್ನು ಹಿಡಿದು ಕೇಂದ್ರದ ಧೋರಣೆಯನ್ನು ತೀವ್ರವಾಗಿ ವಿರೋಧಿಸಿದರು.

Protest

ಸಂವಿಧಾನ ಬದಲಿಸುವವರಿಗೆ ತಲೆಬಾಗುವುದಿಲ್ಲ-ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್‌ಗಳ ಒಕ್ಕೂಟದ ಕಾರ್ಯಾಧ್ಯಕ್ಷ ಪಿ.ಎಂ.ಖಾಸಿಂ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನಕ್ಕೆ ಮಾತ್ರ ತಲೆ ಬಾಗುತ್ತೇವೆಯೇ ಹೊರತು ಸಂವಿಧಾನವನ್ನು ಬದಲಾಯಿಸಲು ಹೊರಟಿರುವವರಿಗಲ್ಲ. ಈ ದೇಶದ ದಲಿತರು ಹಾಗೂ ಮುಸಲ್ಮಾನರು ಒಂದಾದಲ್ಲಿ ಅಮಿತ್ ಷಾ ಮತ್ತು ನರೇಂದ್ರ ಮೋದಿ ಅವರ ಅಧಿಕಾರ ನೆಲಕ್ಕುರುಳಲಿದೆ ಎಂದು ಎಚ್ಚರಿಕೆ ನೀಡಿದರು.

ಎಸ್‌ಡಿಪಿಐ ರಾಜ್ಯ ಸಮಿತಿಯ ಸದಸ್ಯ ಅಮಿನ್ ಮೊಹ್ಸಿನ್ ಮಾತನಾಡಿ, ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪೌರತ್ವ ನೋಂದಣಿ ಸಂವಿಧಾನಕ್ಕೆ ಹಾಗೂ ರಾಷ್ಟ್ರದ ಜಾತ್ಯತೀತ ಪರಂಪರೆಗಳಿಗೆ ವಿರುದ್ಧವಾಗಿದೆ. ಈ ಕಾಯ್ದೆಗಳನ್ನು ಪ್ರತಿಯೊಬ್ಬ ಭಾರತೀಯರು ತಿರಸ್ಕರಿಸುವ ಮೂಲಕ ಶಾಂತಿಯುತವಾದ ಚಳವಳಿಗೆ ನಾಂದಿ ಹಾಡಬೇಕೆಂದು ಕರೆ ನೀಡಿದರು.

Protest

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾಯ್ದೆಯನ್ನು ಮೊದಲು ಕರ್ನಾಟಕದಲ್ಲಿ ಜಾರಿಗೆ ತರುವುದಾಗಿ ಅಮಿತ್ ಶಾ ಹಾಗೂ ನರೇಂದ್ರ ಮೋದಿ ಹೇಳಿದ್ದು, ಈ ಕಾಯ್ದೆಯನ್ನು ಜಾರಿಗೆ ತರಲು ಮುಂದಾದಲ್ಲಿ ತೀವ್ರವಾಗಿ ವಿರೋಧಿಸುವುದಾಗಿ ಎಚ್ಚರಿಕೆ ನೀಡಿದರು. ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ಹೋರಾಟ ನಿರತ ಯುವಕರು ಹಾಗೂ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಯುವಕರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿ ಅಮಾಯಕರನ್ನು ಸಾಯಿಸಿದ್ದಾರೆ ಎಂದು ಆರೋಪಿಸಿದ ಅವರು, ಅಲ್ಲಿನ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ದಾಖಲಾತಿ ನೀಡಲಾರೆವು-ಪೌರತ್ವ ನೋಂದಣಿಗೆ ಪ್ರತಿಯೊಬ್ಬ ಮುಸಲ್ಮಾನ ತಮ್ಮ ದಾಖಲೆಗಳನ್ನು ನೀಡಬೇಕು ಎಂದು ಹೇಳಿದೆಯಾದರೂ, ಮುಸಲ್ಮಾನರು ಎಂದಿಗೂ ತಮ್ಮ ದಾಖಲಾತಿಗಳನ್ನು ನೀಡುವುದಿಲ್ಲ ಎಂದು ಅಮಿನ್ ಮೊಹ್ಸಿನ್ ಸ್ಪಷ್ಟಪಡಿಸಿದರು.

Protest

ಸಾಹಿತಿ ಹಾಗೂ ಅಂಕಣಕಾರ ಶಿವಸುಂದರ್ ಮಾತನಾಡಿ, ಪೌರತ್ವ ಮಸೂದೆ ಧಾರ್ಮಿಕ ನೆಲೆಯ ತಾರತಮ್ಯವಾಗಿದ್ದು, ಇದು ಸಂವಿಧಾನದ ಮೂಲ ತತ್ತ್ವಕ್ಕೆ ವಿರುದ್ಧವಾಗಿದೆ. ಎನ್‌ಆರ್‌ಸಿ ಹಾಗೂ ಸಿಎಎ ಕಾಯ್ದೆಯಿಂದ ಕೇವಲ ಮುಸಲ್ಮಾನರಿಗೆ ಮಾತ್ರವಲ್ಲದೇ, ಹಿಂದೂಗಳಿಗೂ ತೊಂದರೆಯಾಗಲಿದೆ ಎಂದರು. ಸ್ವಾತಂತ್ರ್ಯ ಹೋರಾಟದ ಸಂದರ್ಭ ಹಿಂದುಗಳೊಂದಿಗೆ ಮುಸಲ್ಮಾನರೂ ಕೂಡ ಕೈಜೋಡಿಸಿದ್ದರಿಂದ ಇಂದು ದೇಶಕ್ಕೆ ಸ್ವತಂತ್ರ್ಯ ಸಿಕ್ಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಎನ್‌ಆರ್‌ಸಿ ಮತ್ತು ಸಿಎಎ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಮುಸಲ್ಮಾನರಿಗೆ ನೇರವಾಗಿ ಚಾಕು ಇರಿದರೆ ಹಿಂದೂಗಳಿಗೆ ಪರೋಕ್ಷವಾಗಿ ಚಾಕು ಇರಿಯುತ್ತಿದ್ದಾರೆ ಎನ್ನುವುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ದೇಶದ ಐಕ್ಯತೆಗಾಗಿ ಹಿಂದೂ ಮುಸಲ್ಮಾನರು ಒಗ್ಗೂಡಿ ಹೋರಾಡುವ ಮೂಲಕ ಮತ್ತೊಮ್ಮೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ದೇಶ ಗಂಭೀರ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ ಮತ್ತು ಜನ ಸಾಮಾನ್ಯರು ಹಲವು ಸಂಕಷ್ಟಗಳ ನಡುವೆ ದಿನದೂಡುತ್ತಿದ್ದಾರೆ. ಇವುಗಳೆಲ್ಲವನ್ನು ಮರೆಮಾಚಿ ಜನರ ದಿಕ್ಕನ್ನು ಬೇರೆಡೆ ಸೆಳೆಯುವುದಕ್ಕಾಗಿ ಕೇಂದ್ರ ಸರ್ಕಾರ ಈ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು. ಭಾರತ ಧರ್ಮ ಆಧಾರಿತ ದೇಶವಲ್ಲ, ಸರ್ವ ಧರ್ಮೀಯರಿಂದ ಕೂಡಿರುವ ದೇಶ, ಇಂತಹ ಅದ್ಭುತ ಪರಿಕಲ್ಪನೆಗೆ ಸಿಎಎ ಕಾಯ್ದೆ ಅಡ್ಡಿಪಡಿಸುತ್ತಿದ್ದು ಇದನ್ನು ದೇಶದ ಪ್ರತಿಯೊಬ್ಬ ನಾಗರೀಕ ಖಂಡಿಸಬೇಕು ಎಂದು ಶಿವಸುಂದರ್ ಹೇಳಿದರು.

Protest

ಸಮಾವೇಶದ ಬಳಿಕ ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ಡಾ.ಸ್ನೇಹ ಅವರ ಮೂಲಕ ಪ್ರತಿಭಟನಾಕಾರರು ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಸಮಾವೇಶದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಪ್ರಮುಖರಾದ ಅಬ್ದುಲ್ ಲತೀಫ್, ಮನ್ಸೂರ್, ಅಬೂಬಕ್ಕರ್, ಮನ್ಸೂರ್, ಇಸ್ಮಾಯಿಲ್, ಉಮ್ಮರ್ ಫೈಝಿ, ತಫ್ಸೀರ್ ರಝಾಕ್ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English