ಮಂಗಳೂರು : ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಏರ್ಪಡಿಸಿದ್ದ ರಾಜೋತ್ಸವದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ರಾಜ್ಯೋತ್ಸವದ ಸಂದೇಶ ನೀಡಲು ಪ್ರಾರಂಬಿಸುತ್ತಿದ್ದಂತೆ ಮೈದಾನದ ಹೊರಗಿನಿಂದ ರಾಜ್ಯ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತ ಒಳ ಪ್ರವೇಶಿಸಿದ ಎಸ್.ಎಫ್.ಐ. ಕಾರ್ಯಕರ್ತರು, ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರಕಾರಕ್ಕೆ ರಾಜ್ಯೋತ್ಸವ ಆಚರಿಸುವ ಅರ್ಹತೆಯಿಲ್ಲ ಎಂದು ಘೋಷಣೆ ಕೂಗುತ್ತ ರಾಜೋತ್ಸವ ಆಚರಣೆಗೆ ಅಡ್ಡಿಪಡಿಸಲು ಮುಂದಾದರು.
ಕಾರ್ಯಕರ್ತರು ದೆಹಲಿ ವಿಶ್ವವಿದ್ಯಾನಿಲಯದ ಉಪನ್ಯಾಸಕ ಪ್ರೊ.ಗೋವಿಂದ ತನ್ನ ವರದಿಯಲ್ಲಿ ವಿದ್ಯಾರ್ಥಿಗಳ ಕೊರತೆಯಿದೆ ಎಂದು ರಾಜ್ಯದ 12,740 ಕನ್ನಡ ಶಾಲೆಗಳನ್ನು ಮುಚ್ಚಲು ಶಿಫಾರಸ್ಸು ಮಾಡಿದ್ದು, ಅದರಂತೆ ರಾಜ್ಯ ಸರಕಾರವು ಕೂಡ ಆ ಶಾಲೆಗಳನ್ನು ಮುಚ್ಚುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರಕಾರಕ್ಕೆ ರಾಜ್ಯೋತ್ಸವ ಆಚರಿಸುವ ಅರ್ಹತೆಯಿಲ್ಲ ಎಂದು ಕೂಗುತ್ತಾ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.
ಕಾರ್ಯಕರ್ತರು ಮೈದಾನ ಪ್ರವೇಶಿಸಿದಂತೆ ಅವರನ್ನು ತಡೆಯುವಲ್ಲಿ ಯಶಸ್ವಿಯಾದ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದರು. ಕೆಲವು ಕಾರ್ಯಕರ್ತರು ಅತಿರೇಕವಾಗಿ ವರ್ತಿಸಿದರಿಂದ ಪೋಲೀಸರ ಲಾಠಿಯ ರುಚಿಯನ್ನು ಕೂಡ ಕಾಣುವಂತಾಯಿತು.
ಸಚಿವ ಸಿ.ಟಿ ರವಿ ಈ ಘಟನೆಗೆ ಪ್ರತಿಕ್ರಿಯೆ ನೀಡಿ ಎಸ್.ಎಫ್.ಐ ಕಾರ್ಯಕರ್ತರು ಯಾವತ್ತೂ ಕನ್ನಡಕ್ಕಾಗಿ ಹೊರಡುವುದನ್ನು ನಾನು ಕಂಡಿಲ್ಲ ಇದು ಚುನಾವಣಾ ಸನ್ನಿಹಿತವಾದಂತೆ ಜನರನ್ನು ಆಕರ್ಷಿಸಲು ಮಾಡಿರುವ ನಾಟಕ ಎಂದರು. ಎಸ್. ಎಫ್.ಐ ತನ್ನ ಹೆಸರಿನಲ್ಲ್ಲೇ ಕನ್ನಡವನ್ನು ಮರೆ ಮಾಚಿದೆ. ಇನ್ನು ಈ ಸಂಘಟನೆ ಯಾವ ಅರ್ಹತೆಯಿಂದ ಕನ್ನಡ ಪರ ಮಾತಾಡುತ್ತದೆ ಎಂದು ಪ್ರಶ್ನಿಸಿದರು. ಶಾಲೆಗಳನ್ನು ಮುಚ್ಚುವ ಬಗ್ಗೆ ಪ್ರಸ್ತಾಪಿಸಿದ ಅವರು ಕಡಿಮೆ ಮಕ್ಕಳಿರುವ ಶಾಲೆಗಳನ್ನು ಬೇರೆ ಶಾಲೆಗಳೊಂದಿಗೆ ವಿಲೀನಗೊಳಿಸಿ ಅವರಿಗೆ ವಾಹನದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಶಾಲೆಯಲ್ಲಿ ಮಕ್ಕಳೇ ಇಲ್ಲದಿದ್ದರೆ ಆ ಶಾಲೆಯನ್ನು ಕೇವಲ ನಾಮ ಫಲಕ ಹಾಕಿ ನಡೆಸಲು ಹೇಗೆ ಸಾದ್ಯ ಎಂದರು.
Click this button or press Ctrl+G to toggle between Kannada and English