ಮಂಗಳೂರು : ದ.ಕ.ಜಿಲ್ಲಾಡಳಿತದ ವತಿಯಿಂದ ಮಂಗಳೂರು ನೆಹರೂ ಮೈದಾನಿನಲ್ಲಿ (ನ.1) ಕನ್ನಡ ರಾಜ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ 7.45 ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಸುರಿಯುವ ತುಂತುರು ಮಳೆಯನ್ನೂ ಲೆಕ್ಕಿಸದೆ ಕನ್ನಡಾಭಿಮಾನದ ಸಂದೇಶವನ್ನು ಸಾರುವ ಅನೇಕ ವಾಹನಗಳ ಜಾಥ ಕನ್ನಡ ರಾಜ್ಯೋತ್ಸವಕ್ಕೆ ಮೆರುಗನ್ನು ನೀಡಿತು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಪಥಸಂಚಲನದ ಕಮಾಂಡರ್ ನಿಂದ ಗೌರವ ಸ್ವೀಕರಿಸಿ, ಪ್ಯಾರೆಡ್ ವೀಕ್ಷಿಸಿದರು. ಬಳಿಕ ಜಿಲ್ಲೆಯ ಜನತೆಗೆ ಸಂದೇಶ ನೀಡಿದರು.
ಕನ್ನಡಿಗರಿಗೆ ರಾಜ್ಯೋತ್ಸವ ನಿತ್ಯನೂತನವಾಗಿರಬೇಕು ಅದು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿರಬಾರದು. ಕನ್ನಡಿಗರು ಕನ್ನಡವನ್ನು ಕರ್ನಾಟಕದಲ್ಲಿ ತಮ್ಮ ನಿತ್ಯದ ವ್ಯವಹಾರದದಂತೆ ಬಳಸಬೇಕು ಎಂದವರು ಹೇಳಿದರು. ಭಾಷೆ ಎಂಬುದು ಒಬ್ಬರು ಮತ್ತೊಬ್ಬರ ಕೊರಳಿಗೆ ಪ್ರೀತಿಯಿಂದ ಹಾಕುವ ಹೂವಿನ ಹಾರವಾಗಬೇಕು. ಕನ್ನಡ ಕೇವಲ ಅರಿವಿನ ಭಾಷೆಯಲ್ಲ ಅದು ಅನ್ನ ಹಾಗೂ ಅಭಿಮಾನದ ಭಾಷೆ, ಕನ್ನಡಕ್ಕೆ ಹೊರಗಿನವರಿಂದ ಯಾವುದೇ ರೀತಿಯ ಅಪಾಯವಿಲ್ಲ. ಆದರೆ ಕನ್ನಡದ ಅಭಿಮಾನ ಇಲ್ಲದವರಿಂದಲೇ ಅಪಾಯವಿದೆ ಎಂದು ಎಚ್ಚರಿಸಿದರು.
ದ.ಕ. ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಘನತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಲು ಮುಂಬೈಯ ಬಾಬಾ ಅಟೋಮಿಕ್ ರಿಸರ್ಚ್ ಸೆಂಟರ್ ತಂತ್ರಜ್ಞಾನದ ಬಯೋಗ್ಯಾಸ್ ಸ್ಥಾವರವನ್ನು ಕಮಿಷನಿಂಗ್ ಮಾಡಲಾಗಿದೆ. ನಗರ ನೈರ್ಮಲೀಕರಣ ಯೋಜನೆಯ ಕುರಿತಾಗಿ 14 ಸದಸ್ಯರನ್ನೊಳಗೊಂಡ ಸಿಟಿ ಸಾನಿಟೇಶನ್ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ 19 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಇಬ್ಬರಿಗೆ ವಿಶೇಷ ಪುರಸ್ಕಾರವನ್ನು ಪ್ರದಾನ ಮಾಡಿದರು. ಕಲೆ, ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆ ತೋರಿದ ದ.ಕ. ಜಿಲ್ಲೆಯ 8 ಮಂದಿ ಮಕ್ಕಳಿಗೂ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಾಥಾದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ತಂಡಗಳಿಗೆ ಬಹುಮಾನ ನೀಡಲಾಗಿದ್ದು, ಪ್ರಥಮ ಬಹುಮಾನವನ್ನು ಸಂಜೀವಿನಿ ನರ್ಸಿಂಗ್ ಇನ್‌ಸ್ಟಿಟ್ಯೂಟ್ ಕುಡುಪು, ದ್ವಿತೀಯ ಯೆನೆಪೊಯ ಕಾಲೇಜು ಹಾಗೂ ತೃತೀಯ ಎಸ್‌ಸಿಎಸ್ ನರ್ಸಿಂಗ್‌ಕಾಲೇಜು ಪಡೆಯಿತು. ನೆಹರೂ ಮೈದಾನದಲ್ಲಿ ನಡೆದ ಪಥಸಂಚಲನದಲ್ಲಿ ಉತ್ತಮ ಪ್ರದರ್ಶನ ನೀಡಿದ ಎನ್‌ಸಿಸಿ ಏರ್‌ವಿಂಗ್ ಸೀನಿಯರ್ ಪ್ರಥಮ ಹಾಗೂ ಎನ್‌ಸಿಸಿ ಆರ್ಮಿ ಸೀನಿಯರ್ ತಂಡಕ್ಕೆ ದ್ವಿತೀಯ ಬಹುಮಾನ ನೀಡಲಾಯಿತು.
ಇದೇ ವೇಳೆ ದ.ಕ. ಜಿಲ್ಲೆಯ ಸ್ತ್ರೀ ಶಕ್ತಿ ಗುಂಪುಗಳು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕಾಗಿ ಸಂಚಾರಿ ಮಾರುಕಟ್ಟೆ ವಾಹನಕ್ಕೆ ಸಚಿವ ಸಿ.ಟಿ. ರವಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೊರಗಪ್ಪ ನಾಯ್ಕ, ಶಾಸಕರಾದ ಯು.ಟಿ.ಖಾದರ್, ಮೋನಪ್ಪ ಭಂಡಾರಿ, ಉಪ ಮೇಯರ್ ಅಮಿತಕಲಾ, ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನಾ, ಜಿಲ್ಲಾಧಿಕಾರಿ ಎನ್.ಎಸ್. ಚನ್ನಪ್ಪ ಗೌಡ, ಪೊಲೀಸ್ ಆಯುಕ್ತ ಮನೀಷ್ ಕರ್ಬೀಕರ್, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯಪ್ರಕಾಶ್, ಮನಪಾ ಆಯುಕ್ತ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English