ಮಂಗಳೂರು : ಕಾರ್ಮಿಕರ ಕನಿಷ್ಠ ವೇತನ, ಸಾಮಾಜಿಕ ಸುರಕ್ಷೆ, ಕೆಲಸದ ಭದ್ರತೆ ಮುಂತಾದುವುಗಳು ಸರಕಾರದ ಹೊಣೆಯಾಗಿದೆ. ದೇಶದ ಸಂಪತ್ತಿನ ಉತ್ಪಾದಕರು ಕಾರ್ಮಿಕರು. ಅಂತಹ ಕಾರ್ಮಿಕ ವರ್ಗವನ್ನು ಸರಕಾರ ಒಟ್ಟಾರೆಯಾಗಿ ನಿರ್ಲಕ್ಷಿಸುತ್ತಿದೆ.
ಸರಕಾರದ ಮುಂದಿಟ್ಟಿರುವ ನಮ್ಮ12 ಅಂಶಗಳ ಬೇಡಿಕೆಗಳು ಜೀವನ ನಿರ್ವಹಣೆಗಿರುವ ಕನಿಷ್ಠ ಬೇಡಿಕೆಗಳು. ಇಂದಿನ ಮುಷ್ಕರದ ಮೂಲಕ ನಾವು ಸರಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇವೆ. ಕಾರ್ಮಿಕ ದಂಗೆಯೆದ್ದರೆ ಸರಕಾರಕ್ಕೇ ತೊಂದರೆ.’ ಎಂದು ಸಿಐಟಿಯುನ ದಕ ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸರಕಾರವನ್ನು ಎಚ್ಚರಿಸಿದರು. ಅವರು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (ಜೆಸಿಟಿಯು) ದಕ ಜಿಲ್ಲಾ ಸಮಿತಿ, ಇಂದು (08-01-2020ರಂದು) ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಮಂಗಳೂರಿನ ಪುರಭವನದ ಆವರಣದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಪ್ರದರ್ಶನದಲ್ಲಿ ಮಾತನಾಡುತ್ತಿದ್ದರು.
ಅವರು ಮುಂದುವರಿದು ’ಬದುಕಲು ಬೇಕಾದ ಕನಿಷ್ಠ ಅವಶ್ಯಕತೆಗಳನ್ನು ಪರಿಗಣಿಸಿ ಜೆಸಿಟಿಯು ಕನಿಷ್ಠ ವೇತನ ರೂ. 21000/- ಆಗಬೇಕೆಂದು ಕೇಳಿಕೆಯಿತ್ತಿದೆ. ಆದರೆ ಸರಕಾರ ನಿಗದಿಪಡಿಸಿದ ಕನಿಷ್ಠ ವೇತನ ಸುಮಾರು ರೂ. 4300/-ರಿಂದ ಒಂದು ಕಾರ್ಮಿಕನ ಕುಟುಂಬದ ಜೀವನ ನಿರ್ವಹಣೆ ಅಸಾಧ್ಯ. ಇಂದಿನ ದಿನಗಳಲ್ಲಿ ಸರಕಾರಿ ಕಛೇರಿ ಸಮೇತ ಹೆಚ್ಚಿನೆಡೆ ಖಾಯಂ ನೌಕರರು ಕಡಿಮೆಯಾಗಿದ್ದು ಗುತ್ತಿಗೆ ನೌಕರರು ಬಹುಸಂಖ್ಯೆಯಲ್ಲಿದ್ದಾರೆ. ಈ ಗುತ್ತಿಗೆ ಕಾರ್ಮಿಕರಿಗೆ ಸಿಗುತ್ತಿರುವ ಸಂಬಳ ಅತ್ಯಂತ ಕಡಿಮೆ. ಒಂದೇ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರಿಗೂ ಸಮಾನ ವೇತನ ಸಿಗಬೇಕೆಂದು ನಾವು ಕೇಳುತ್ತೇವೆ.’ ಎಂದರು.
ಜೆಸಿಟಿಯು ಬೇಡಿಕೆಗಳ ಘೋಷಣೆಯೊಂದಿಗೆ ಪ್ರದರ್ಶನ ಪ್ರಾರಂಭವಾಯಿತು. ಜೆಸಿಟಿಯು ಜಿಲ್ಲಾ ಸಂಚಾಲಕ ಹಾಗೂ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಯಚ್ ವಿ ರಾವ್ ಸ್ವಾಗತಿಸಿ ಕಾರ್ಮಿಕರ ಬೇಡಿಕೆಗಳ ಬಗ್ಗೆ ವಿವರಿಸಿದರು.ಎನ್ ಟಿಯುಸಿಯ ಜಿಲ್ಲಾ ಕಾರ್ಯದರ್ಶಿ ಚಿತ್ತರಂಜನ ಶೆಟ್ಟಿ ಬೊಂಡಾಲ, ಎಐಸಿಸಿಟಿಯುನ ರಾಜ್ಯ ಕಾರ್ಯದರ್ಶಿ ಭರತ್, ಬ್ಯಾಂಕ್ ನೌಕರರ ಸಂಘಟನೆಯ ವಿನ್ಸೆಂಟ್ ಡಿ ಸೋಜ, ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ರಾಘವ, ವಿಮಾ ಸಂಘಟನೆಯ ರಾಘವೇಂದ್ರ ರಾವ್ ಮುಂತಾದವರು ಜೆಸಿಟಿಯು ಬೇಡಿಕೆಗಳ ಬಗ್ಗೆ ಮಾತನಾಡಿದರು. ಬ್ಯಾಂಕ್ ಸಂಗಾತಿಗಳು ಕ್ರಾಂತಿಗೀತೆ ಹಾಡಿದರು. ಸಿಐಟಿಯುನ ಬಾಲಕೃಷ್ಣ ಶಟ್ಟಿ ವಂದಿಸಿದರು.
ಬೇಡಿಕೆಗಳ ಬಗೆಗಿನ ಘೋಷಣೆಗಳೊಂದಿಗೆ ಪ್ರದರ್ಶನ ಮುಕ್ತಾಯವಾಯಿತು.
Click this button or press Ctrl+G to toggle between Kannada and English