ಕಾರ್ಮಿಕ ನೀತಿ ವಿರುದ್ಧ ಕಾರ್ಮಿಕ ಸಂಘಟನೆಗಳಿಂದ ಕೊಡಗು ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ

2:07 PM, Thursday, January 9th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

madikeri

ಮಡಿಕೇರಿ : ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿದವು. ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.

ಮಡಿಕೇರಿ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡು ಬೇಡಿಕೆಯನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು.

madikeri

ರಾಷ್ಟ್ರೀಯ ಸಮಾನ ಕನಿಷ್ಟ ವೇತನ ರೂ.21 ಸಾವಿರ ನಿಗದಿಪಡಿಸಬೇಕು, ಗುತ್ತಿಗೆ ಪದ್ಧತಿ ನಿಯಂತ್ರಿಸಿ, ಸಮಾನ ವೇತನ ನೀಡಬೇಕು, ರಕ್ಷಣಾ ವಲಯದ ಉದ್ದಿಮೆಗಳು, ರೈಲ್ವೆ ಇಲಾಖೆ ಖಾಸಗೀಕರಣ ಕೈಬಿಡಬೇಕು, ರಕ್ಷಣೆ, ಕಲ್ಲಿದ್ದಲು, ಬ್ಯಾಂಕಿಂಗ್, ವಿಮೆ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಬಾರದು, ದುಡಿಯುವ ಕೈಗಳಿಗೆ ದೇಶವ್ಯಾಪಿ ಸಮಾನ ವೇತನ ಪದ್ಧತಿ ಜಾರಿಗೆ ತರಬೇಕು, ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು, ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ಕೋರ್ಟುಗಳನ್ನು ಸ್ಥಾಪಿಸಬೇಕು, ಎಲ್ಲರಿಗೂ ಸರ್ಕಾರದ ಮೂಲಕವೇ ತಲಾ ಹತ್ತು ಸಾವಿರ ರೂ. ಪಿಂಚಣಿ ಖಾತ್ರಿ ಪಡಿಸಬೇಕು, ಆರ್ಥಿಕ ಹಿಂಜರಿತಕ್ಕೆ ಕಾರಣವಾದ ಅಂಶಗಳನ್ನು ಕೈಬಿಡಬೇಕು, ಬೆಲೆ ಏರಿಕೆ ನಿಯಂತ್ರಿಸಬೇಕು, ಎಲ್ಲಾ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು, ರೈತರ ಹಾಗೂ ಕೂಲಿ ಕಾರ್ಮಿಕರ ಸಾಲಮನ್ನಾ ಮಾಡಬೇಕು, ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ನೌಕರರನ್ನು ಖಾಯಂಗೊಳಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಜಿಲ್ಲೆಯಲ್ಲಿರುವ ಮರಳಿನ ಸಮಸ್ಯೆಯನ್ನು ತಕ್ಷಣದಲ್ಲಿ ಪರಿಹರಿಸಬೇಕು, ಪಡಿತರ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಸಿಬೇಕು, ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಹೆಚ್.ಬಿ.ರಮೇಶ್, ಅಖಿಲ ಭಾರತ ಮಟ್ಟದಲ್ಲಿ ಕಾರ್ಮಿಕರ ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರಕ್ಕೆ ಕೊಡಗು ಜಿಲ್ಲೆಯ ತಾಲ್ಲೂಕು ಕೇಂದ್ರದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಹತ್ತು ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ತಮ್ಮ ಬೇಡಿಕೆ ಈಡೇರಿಕೆ ಒತ್ತಾಯಿಸಿವೆ ಎಂದರು.

madikeri

ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಮಾರಕ ನೀತಿಗಳ ವಿರುದ್ಧ ವಿವಿಧ ಕ್ಷೇತ್ರಗಳ ಕಾರ್ಮಿಕರು ಹಲವು ಬಾರಿ ಮುಷ್ಕರಗಳನ್ನು ನಡೆಸಿದರು ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರ ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಕೆ.ಎಸ್.ಮುತ್ತಮ್ಮ ಮಾತನಾಡಿ, ಸರ್ಕಾರ ಜಾರಿಗೆ ತರುವ ಹತ್ತು ಹಲವು ಯೋಜನೆಗಳನ್ನು ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೂ ದುಡಿಯುವ ಕೈಗಳಿಗೆ ಸೂಕ್ತ ಸೌಲಭ್ಯವನ್ನು ಸರ್ಕಾರ ನೀಡುತ್ತಿಲ್ಲ. ತಮ್ಮ ಬೇಡಿಕೆಗಳು ಈಡೇರುವವರೆಗೂ ನಿರಂತರ ಹೋರಾಟ ನಡೆಯಲಿದೆ ಎಂದರು.

ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ತೆಕ್ಕಡ ಪೂರ್ಣಿಮಾ ಮಾತನಾಡಿ, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಿರಂತರ ಪತ್ರಿಭಟನೆಗಳು ನಡೆಸುತ್ತ ಬಂದರೂ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆತ್ತಿಲ್ಲ, ಈ ಕಾರಣದಿಂದ ಎಲ್ಲಾ ಆಶಾ ಕಾರ್ಯಕರ್ತೆರು ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿರುವುದಾಗಿ ಹೇಳಿದರು. ಬಾಕಿ ಇರುವ ವೇತನ ಕಾರ್ಯಕರ್ತೆಯರ ಖಾತೆಗೆ ಬರುವವರೆಗೂ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟಿಸಲಾಗುವುದು ಎಂದರು.

madikeri

ಸಿಐಟಿಯು ಜಿಲ್ಲಾಧ್ಯಕ್ಷ ಎ.ಮಹಾದೇವ, ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು, ಎನ್.ಡಿ.ಕುಟ್ಟಪ್ಪ, ಉಪಕಾರ್ಯದರ್ಶಿ ರಾಚಾಪ್ಪಜಿ, ಎಐಯುಟಿಯುಸಿ ಸಂಚಾಲಕ ಬಿ.ರವಿ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘದ ಮಡಿಕೇರಿ ತಾಲ್ಲೂಕು ಕಾರ್ಯದರ್ಶಿ ಅಕ್ಕಮ್ಮ, ಎಲ್‌ಐಸಿ ಪ್ರತಿನಿಧಿ ಶಶಿಕಿರಣ್, ಜಿಲ್ಲಾ ಸರಕಾರಿ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಕಾರ್ಯದರ್ಶಿ ಜಾನಕಿ, ಪದಾಧಿಕಾರಿ ಟಿ.ಜೆ. ಶೀಲಾ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಅಶ್ರಫ್, ಅಕ್ಷರ ದಸೋಹ ಮತ್ತು ಬಿಸಿಯೂಟ ನೌರರ ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಪಿ.ಡಿ. ತುಳಸಿ, ಎಆರ್‌ಬಿಇಎ ಮುಖಂಡರು, ಗ್ರಾಮ ಪಂಚಾಯ್ತಿ ನೌಕರರ ಸಂಘದ ಮುಖಂಡರು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಲ್ಲು ತೂರಿದ ಕಿಡಿಗೇಡಿಗಳು
ಕಾರ್ಮಿಕ ಸಂಘಟನೆಗಳ ಪ್ರತಿಭಟನೆಯ ದಿನವಾದ ಬುಧವಾರ ಬೆಳಗ್ಗೆ ನಗರದ ಚೈನ್ ಗೇಟ್ ಬಳಿ ಅಪರಿಚಿತ ಕಿಡಿಗೇಡಿಗಳು ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲು ತೂರಿದ ಘಟನೆ ನಡೆದಿದೆ. ಬಸ್‌ನ ಮುಂಭಾಗದ ಗಾಜು ಒಡೆದಿದ್ದು, ಚಾಲಕ ಹಾಗೂ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English