ಕೊಡವ ಬುಡಕಟ್ಟು ಸ್ಥಾನಮಾನ ವಿಚಾರ ಸಂಕಿರಣ : ಸಂಘಟಿತ ಹೋರಾಟಕ್ಕೆ ಕುಪ್ಪೇಂದ್ರ ರೆಡ್ಡಿ, ಹರಿಪ್ರಸಾದ್ ಕರೆ

9:51 AM, Monday, January 20th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

CNC

ಮಡಿಕೇರಿ : ಸತತ ಪ್ರಯತ್ನ ಮತ್ತು ಸಂಘಟಿತ ಹೋರಾಟ ಮಾಡದೇ ಇರುವುದರಿಂದ ಸಂವಿಧಾನ ಬದ್ಧವಾಗಿ ದೊರಕಬೇಕಿದ್ದ ಬುಡಕಟ್ಟು ಸ್ಥಾನಮಾನದ ಹಕ್ಕಿನಿಂದ ಕೊಡವ ಸಮುದಾಯ ವಂಚಿತವಾಗಿದೆ. ಕಳೆದ 70 ವರ್ಷಗಳಿಂದ ಸುಮ್ಮನಿದ್ದಿರಿ, ಇನ್ನಾದರೂ ಹೋರಾಟಕ್ಕೆ ಮುಂದಾಗಿ ಎಂದು ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಕೊಡವರಿಗೆ ಕರೆ ನೀಡಿದರು.

ನಗರದ ಹೊರವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಕೊಡವ ಬುಡಕಟ್ಟು ಸ್ಥಾನಮಾನದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡವ ಸಮುದಾಯದ ಶ್ರೀಮಂತ ಸಂಸ್ಕೃತಿ ಮತ್ತು ಪದ್ದತಿ ಪರಂಪರೆಗಳು ಬುಡಕಟ್ಟು ಸ್ಥಾನಮಾನಕ್ಕೆ ಸೂಕ್ತವಾಗಿದೆ. ಬ್ರಿಟೀಷರು ಕೂಡ ತಮ್ಮ ಜನಗಣತಿಯಲ್ಲಿ ಕೊಡವ ಸಮುದಾಯವನ್ನು ಬುಡಕಟ್ಟು ಜನಾಂಗ ಎಂದು ನಮೂದಿಸಿದ್ದರು. ಆದರೆ ಕೊಡವರು ಮಾತ್ರ ಈ ಸ್ಥಾನಮಾನದ ಬಗ್ಗೆ ಕೀಳರಿಮೆ ಹೊಂದಿ ಸಂವಿಧಾನ ಬದ್ದ ಹಕ್ಕಿನಿಂದ ದೂರವೇ ಉಳಿದು ಹೋದರು ಎಂದು ವಿಷಾದ ವ್ಯಕ್ತಪಡಿಸಿದರು.

ನಿಮ್ಮ ಮಕ್ಕಳಿಗೆ ಉನ್ನತ ಸರಕಾರಿ ಹುದ್ದೆಗಳು ಮತ್ತು ಮೀಸಲಾತಿಗಳು ದೊರೆಯಬೇಕಿದ್ದರೆ, ಬುಡಕಟ್ಟು ಸ್ಥಾನಮಾನ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಳೆದ ಹತ್ತು ಹಲವು ವರ್ಷಗಳಿಂದ ನಾಚಪ್ಪ ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದರೆ ಕೊಡವ ಸಮುದಾಯದಲ್ಲಿ ಒಗ್ಗಟ್ಟು ಇಲ್ಲದಿರುವುದರಿಂದಲೇ ಇಂತಹ ಹಕ್ಕಿನಿಂದ ಕೊಡವ ಸಮುದಾಯ ವಂಚಿತವಾಗಿದೆ ಎಂದು ಹೇಳಿದರು. ಈ ಸ್ಥಾನಮಾನ ಪಡೆಯಲು ಹೋರಾಡುತ್ತಿರುವ ನಾಚಪ್ಪ ಅವರಿಗೆ ಕೊಡವರು ಬೆಂಬಲ ನೀಡಬೇಕು. ಪ್ರತಿ ಮನೆಯಿಂದಲೂ ಒಬ್ಬೊಬ್ಬ ಸದಸ್ಯ ನಾಚಪ್ಪ ಅವರ ಹೋರಾಟಕ್ಕೆ ಕೈಜೋಡಿಸಲು ಬರಬೇಕೆಂದು ಕುಪ್ಪೇಂದ್ರ ರೆಡ್ಡಿ ಕರೆ ನೀಡಿದರು. ನೀವು ಹೋರಾಟಕ್ಕೆ ಮುಂದಾದರೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ ಕುಪ್ಪೇಂದ್ರ ರೆಡ್ಡಿ, ಹೋರಾಟವಿಲ್ಲದೇ ೭೦ ವರ್ಷಗಳನ್ನು ಕಳೆದಿದ್ದೀರಿ, ಇನ್ನು ಸುಮ್ಮನಿರದಿರಿ ಎಂದು ಸಲಹೆ ನೀಡಿದರು.

ಕೀಳಿರಿಮೆ ಬೇಡ
ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಕೊಡವ ಸಮುದಾಯದ ಆಚಾರ ವಿಚಾರಗಳು ದೇಶದ ಬೇರ‍್ಯಾವ ಸಮುದಾಯದಲ್ಲಿ ಕಂಡು ಬರುವುದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾವೇರಿ ನದಿ ದಡದಲ್ಲಿ ಉಗಮಿಸಿದ ಜನಾಂಗವೊಂದು ಇಂದು ವಿನಾಶದ ಅಂಚಿಗೆ ಬಂದು ನಿಂತಿದ್ದು, ಈ ಕೊಡವ ಸಮುದಾಯ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಗಳು ಉಳಿಯಬೇಕೆಂದರೆ ಸಂವಿಧಾನ ಬದ್ದ ಸ್ಥಾನಮಾನದಿಂದ ಮಾತ್ರವೇ ಸಾಧ್ಯ ಎಂದು ಪ್ರತಿಪಾದಿಸಿದರು.

CNC

ಬುಡಕಟ್ಟು ಮೀಸಲಾತಿಯ ಬಗ್ಗೆ ಕೊಡವರಲ್ಲಿ ಕೀಳರಿಮೆ ಇದ್ದಲ್ಲಿ ಅದನ್ನು ಬಿಟ್ಟುಬಿಡಿ ಎಂದು ಹೇಳಿದ ಬಿ.ಕೆ. ಹರಿಪ್ರಸಾದ್, ಈ ದೇಶದಲ್ಲಿ ವಿದ್ಯೆ ಎಂಬುವುದು ಕೂಡ ಕೆಲವರಿಗೆ ಮೀಸಲಾಗಿತ್ತು ಎಂಬುದನ್ನು ಮರೆಯದಿರಿ ಎಂದು ಕಿವಿಮಾತು ಹೇಳಿದರು. ಸಂಸ್ಕೃತ ಮಾತನಾಡುವ 50 ಸಾವಿರ ಜನಸಂಖ್ಯೆಯ ಸಮುದಾಯಕ್ಕೆ ಮೀಸಲಾತಿ ದೊರಕಿದೆ. ಕೊಡಗಿನಲ್ಲಿ ಹುಟ್ಟಿಬೆಳೆದ, 1.5 ಲಕ್ಷ ಜನಸಂಖ್ಯೆ ಇರುವ ಕೊಡವ ಸಮುದಾಯಕ್ಕೆ ಮೀಸಲಾತಿ ಏಕೆ ದೊರಕಿಲ್ಲ ಎಂದು ಹರಿಪ್ರಸಾದ್ ಪ್ರಶ್ನಿಸಿದರು. ಕೊಡವರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದಿದ್ದಾರೆ, ಆದರೆ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಅವರು ವಿಷಾಧಿಸಿದರು. ಈ ಹಿನ್ನಲೆಯಲ್ಲಿ ರಾಜ್ಯಸಭೆಯಲ್ಲಿ ಕೊಡವ ಭಾಷೆಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಧ್ವನಿ ಎತ್ತಿದ್ದೆ ಎಂದು ಹರಿಪ್ರಸಾದ್ ಸಮರ್ಥಿಸಿಕೊಂಡರು. ಕೊಡಗು ಜಿಲ್ಲೆ ಕರ್ನಾಟಕದ ಕೀರೀಟವಿದ್ದಂತೆ. ಅದರ ಸ್ಥಾನಮಾನ ಉಳಿಸಿಕೊಂಡು ಹೋಗಬೇಕಿದೆ. ಇದನ್ನು ಪ್ರತಿಯೊಬ್ಬ ಕೊಡವ ಕೂಡ ಮನದಟ್ಟು ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಕೊಡವರ ಬೇಡಿಕೆಗಳ ಧ್ವನಿ ವಿಧಾನ ಸೌಧ ಮತ್ತು ಪಾರ್ಲಿಮೆಂಟ್‌ನಲ್ಲಿ ಪ್ರತಿಧ್ವನಿಸಬೇಕಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಶಾಸಕರು ಮತ್ತು ಸಂಸದರು ಕೊಡವ ಸಮುದಾಯದವರೇ ಆಗಬೇಕಿದೆ. ಪಕ್ಷ ಯಾವುದೇ ಇರಲಿ, ಆದರೆ ಅಭ್ಯರ್ಥಿ ಕೊಡವ ಸಮುದಾಯದವರೇ ಆಗಬೇಕೆಂದು ಸಂಕಲ್ಪ ಮಾಡಬೇಕೆಂದು ಹರಿಪ್ರಸಾದ್ ಹೇಳಿದರು. ನಿಮ್ಮ ಪೂರ್ವಜರಿಗೆ ಗೌರವ ಸಲ್ಲಿಸಬೇಕಿದ್ದರೆ ಜಿಲ್ಲೆಯ ಸಂಸ್ಕೃತಿ, ಭಾಷೆ, ಪದ್ದತಿ, ಪರಂಪರೆ, ಆಚಾರ ವಿಚಾರಗಳನ್ನು ಉಳಿಸುವ ಕೆಲಸಕ್ಕೆ ಹೋರಾಡುತ್ತಿರುವ ನಾಚಪ್ಪ ಅವರಿಗೆ ಸಮುದಾಯದವರು ಬೆಂಬಲಿಸಬೇಕೆಂದು ಹರಿಪ್ರಸಾದ್ ಕರೆ ನೀಡಿದರು.

ಸಿಎನ್‌ಸಿ ಸಂಘಟನೆಯ ಸಂಚಾಲಕ ಎನ್.ಯು. ನಾಚಪ್ಪ ಮಾತನಾಡಿ, ಕೊಡವ ಸಮುದಾಯದ ಪದ್ದತಿ, ಸಂಸ್ಕೃತಿ, ಉಳಿಯಬೇಕಿದ್ದರೆ ಅದು ಬುಡಕಟ್ಟು ಹಕ್ಕುಗಳಿಂದ ಮಾತ್ರವೇ ಸಾಧ್ಯ. ಬ್ರಿಟಿಷರು ಕೂಡ ಜನಗಣತಿಯಲ್ಲಿ ಬುಡಕಟ್ಟು ಜನಾಂಗ ಎಂದು ನಮೂದಿಸಿದ್ದರು. ಕೊಡವರ ಬಂದೂಕು ಹಕ್ಕು ಕೂಡ ಆಬಾಧಿತವಾಗಿದ್ದು, ಎಲ್ಲಿಯೂ ದೇಶ ವಿರೋಧಿ ಕೃತ್ಯಗಳಿಗೆ ಬಳಕೆಯಾಗಿಲ್ಲ. ಹೀಗಾಗಿಯೇ ಸ್ವಾತಂತ್ರ ನಂತರವೂ ಬಂದೂಕು ಹಕ್ಕು ದೊರೆತಿದೆ ಎಂದು ಹೇಳಿದರು. ಶೆಡ್ಯೂಲ್ ಪಟ್ಟಿಯಲ್ಲಿ ಬರುವ ಬುಡಕಟ್ಟು ಹಕ್ಕುಗಳನ್ನು ತಿಳಿಯದಿದ್ದರೆ ಕೊಡವರ ಬದುಕಿಗೆ ಯಾವುದೇ ಭವಿಷ್ಯವೂ ಇಲ್ಲದಾಗುತ್ತದೆ ಎಂದು ನಾಚಪ್ಪ ಎಚ್ಚರಿಸಿದರು. ಈ ದಿಸೆಯಲ್ಲಿ ಕೊಡವ ನ್ಯಾಷನಲ್ ಸಂಘಟನೆ ಕಳೆದ 29ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದೆ. ನೂರು ಪ್ರಯತ್ನಗಳು ವಿಫಲವಾದರೂ ನಿರಂತರ ಹೋರಾಟದಿಂದ ಮಾತ್ರ ಹಿಂದೆ ಸರಿಯುವುದಿಲ್ಲ ಎಂದು ನಾಚಪ್ಪ ಸ್ಪಷ್ಟಪಡಿಸಿದರು.

ಕೊಡವ ಭಾಷೆಗೆ ಸಂವಿಧಾನದ ಮಾನ್ಯತೆ, ಕೊಡವ ಸಮುದಾಯವನ್ನು ಶೆಡ್ಯೂಲ್ ಪಟ್ಟಿಗೆ ಸೇರ್ಪಡೆಗೊಳಿಸುವುದು, ಕೊಡವರ ಭೂಮಿಗೆ ಸಂವಿಧಾನ ಬದ್ದ ರಕ್ಷಣೆ ನೀಡುವುದು ಸೇರಿದಂತೆ ಒಟ್ಟು 8 ನಿರ್ಣಯಗಳನ್ನು ಅಂಗೀಕರಿಸಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿ ಕೊಡವ ಕೊಡವತಿಯರು ಸರ್ವಾನುಮತದಿಂದ ಈ ನಿರ್ಣಯಕ್ಕೆ ಬೆಂಬಲ ಸೂಚಿಸಿದರು. ಇದೇ ಸಂದರ್ಭ ಸಿಎನ್‌ಸಿ ಹೋರಾಟದ ಕುರಿತು ನೆರೆದಿದ್ದವರಿಗೆ ಎನ್.ಯು. ನಾಚಪ್ಪ ಪ್ರತಿಜ್ಞಾ ವಿಧಿ ಬೋಧಿಸಿದರು. ವಿಚಾರ ಸಂಕಿರಣಕ್ಕೂ ಮುನ್ನ ವ್ಯಾಲಿಡ್ಯೂ ತಂಡದಿಂದ ಕೊಡವ ಸಮುದಾಯದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ. ನಾಣಯ್ಯ, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಬೊಟ್ಟೋಳಂಡ ಮಿಟ್ಟು ಚಂಗಪ್ಪ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್‌ಮಾಡ ರಾಜೀವ್ ಬೋಪಯ್ಯ, ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ನೆರವಂಡ ಅನೂಪ್, ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿಕಾಳಪ್ಪ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಪಾಡಿ ಇಗ್ಗುತ್ತಪ್ಪ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲವ ಚಿಣ್ಣಪ್ಪ, ಬೊಟ್ಟೊಳಂಡ ಕಾಶಿ ಅಚ್ಚಯ್ಯ, ಜಮ್ಮಡ ನಂದ, ಚೇಂದ್ರಿಮಾಡ ಡಾಲಿ, ಚೇಂದಂಡ ಜಿಮ್ಮಿ, ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಹಂಚೆಟ್ಟಿರ ಮನುಮುದ್ದಪ್ಪ, ಪಾಂಡಂಡ ಜೋಯಪ್ಪ ಸೇರಿದಂತೆ ಮತ್ತಿತ್ತರ ಪ್ರಮುಖರು ಹಾಜರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English