ಮಂಗಳೂರು : ’ಪೌರತ್ವ ತಿದ್ದುಪಡಿ ಕಾಯದೆ(ಸಿಎಎ), ರಾಷ್ಟ್ರೀಯ ಪೌರತ್ವ ರಿಜಿಸ್ಟ್ರಿ(ಎನ್‌ಆರ್‌ಸಿ), ರಾಷ್ಟ್ರೀಯ ಜನರ ರಿಜಿಸ್ಟ್ರಿ(ಎನ್ ಪಿ ಆರ್) ಮುಂತಾದುವುಗಳು ಅನಗತ್ಯ ಕ್ರಮಗಳಾಗಿದ್ದು, ಇದರಿಂದ ಜನರ ಸಂಕಷ್ಟಗಳು ಹೆಚ್ಚಾಗಲಿವೆ. ಇವೆಲ್ಲದರಿಂದ ಮುಸ್ಲಿಮರಿಗೆ ಮಾತ್ರ ಸಮಸ್ಯೆಗಳಾಗಲಿವೆ ಮತ್ತು ಹಿಂದುಗಳು ಇದರ ಬಗ್ಗೆ ಬಯಪಡಬೇಕಾಗಿಲ್ಲ ಎಂದು ಜನರ ಮಧ್ಯೆ ಅಪಪ್ರಚಾರ ನಡೆಯುತ್ತಿದೆ.
ಆದರೆ ಈ ಕ್ರಮಗಳಿಂದ ಹಿಂದುಗಳಿಗೆ ಹೆಚ್ಚು ಅನಾನುಕೂಲವಾಗಲಿದೆ. ಅಸ್ಸಾಂದಲ್ಲಿ ಓಖಅ ನಡೆದು 19.01ಲಕ್ಷ ಜನರು ಪೌರತ್ವದಿಂದ ಹೊರಗುಳಿದಿದ್ದಾರೆ. ಅವರಲ್ಲಿ ಶೇಕಡಾ 75 ಅಂದರೆ 12.5 ಲಕ್ಷ ಜನ ಹಿಂದುಗಳಾಗಿದ್ದಾರೆ. ಇದನ್ನು ದೇಶಕ್ಕೆ ಅನ್ವಯಿಸಿದರೆ ಹಿಂದುಗಳೆ ಅತ್ಯಂತ ಸಂಕಷ್ಟಗಳಿಗೆ ಒಳಗಾಗಲಿದ್ದಾರೆ.’ ಎಂದು ಖ್ಯಾತ ವೈದ್ಯ ಹಾಗೂ ಪ್ರಗತಿಪರ ಚಿಂತಕ ಡಾ| ಬಿ ಶ್ರೀನಿವಾಸ ಕಕ್ಕಿಲ್ಲಾಯರು ಹೇಳಿದರು. ಅವರು ಭಾರತ ಕಮ್ಯುನಿಸ್ಟ್ ಪಕ್ಷದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ತಾರೀಖು 19.01.2020ರಂದು ಪಕ್ಷದ ಕಾರ್ಯಕರ್ತರಿಗೆ ನಡೆಸಿದ ಮಾಹಿತಿ ಶಿಬಿರದಲ್ಲಿ ಮಾತನಾಡುತ್ತಿದ್ದರು.
ಅವರು ಮುಂದುವರಿದು ’ಅಸ್ಸಾಂನಲ್ಲಿ ಪೌರತ್ವದಿಂದ ಹೊರಗುಳಿದ 12.05ಲಕ್ಷ ಹಿಂದುಗಳ ರಕ್ಷಣೆಗಾಗಿ ಪೌರತ್ವ ತಿದ್ದುಪಡಿ ಕಾನೂನನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಲಾಗಿದೆ. ಆದರೆ ಈ ಕ್ರಮವನ್ನು ಅಸ್ಸಾಂನ ಜನರು ವಿರೋಧಿಸುತ್ತಿದ್ದಾರೆ. ಅಸ್ಸಾಂನಲ್ಲಿ ಬಂಗ್ಲಾ ಬೆಂಗಾಳಿಗಳನ್ನು ಹೊರದೂಡಲು ಪೌರತ್ವ ರಿಜಿಸ್ಟ್ರಿ ಮಾಡಲಾಗಿದೆ. ಈಗ ಅವರಿಗೆ ಪೌರತ್ವ ಕೊಡುವುದರಿಂದ ಅಸ್ಸಾಂ ಜನರಿಗೆ ತೊಂದರೆಯಾಗಲಿದೆ ಎಂಬುದು ಅವರ ವಾದ.
ದೇಶದ ಸಾದಾರಣ80% ಜನರಲ್ಲಿ ಜನನ ಪ್ರಮಾಣ ಪತ್ರಗಳಿಲ್ಲ. ಹಾಗಿರುವಾಗ ಅವರ ತಂದೆತಾಯಿಗಳ ಬಗ್ಗೆಗಿನ ದಾಖಲೆ ಒದಗಿಸುವುದು ಅಸಾಧ್ಯ. ಅದನ್ನೆಲ್ಲಾ ಒದಗಿಸಲು ಸಾಧ್ಯವಾಗದವರು ಪೌರತ್ವ ರಹಿತರಾಗುತ್ತಾರೆ. ಇದರಿಂದ ದೇಶದ ಬಡವರು, ದಲಿತರು, ಆದಿವಾಸಿಗಳು ಮುಂತಾದವರು ಹೆಚ್ಚು ಸಂಕಷ್ಟಗಳಿಗೆ ಒಳಗಾಗಲಿದ್ದಾರೆ.
ಅಸ್ಸಾಮಲ್ಲಿ ನಡೆದ ಪೌರತ್ವ ರಿಜಿಸ್ಟ್ರಿ ಸಮಯದಲ್ಲಿ ಅಲ್ಲಿನ ಜನರು ಅದರಲ್ಲೂ ಮುಖ್ಯವಾಗಿ ಹೊರ ರಾಜ್ಯಗಳಲ್ಲಿ ನೆಲೆಸಿರುವ ಅಸ್ಸಾಮಿಗರು ದಾಖಲೆಗಳನ್ನು ಒದಗಿಸಲು ಬೇಕಾಗಿ ತಿಂಗಳುಗಟ್ಟಲೆ ರಜೆ ಹಾಕಿ ಪಟ್ಟ ಪೇಚಾಟಗಳು ಅಷ್ಟಿಷ್ಟಲ್ಲ. ಈಗ ಅದನ್ನು ದೇಶಕ್ಕೆ ಅನ್ವಯಿಸಿದಾಗ ಆಗುವ ಸಂಕಷ್ಟಗಳನ್ನು ಊಹಿಸಲೂ ಅಸಾಧ್ಯ.
ರಾಷ್ಟ್ರೀಯ ಪೌರತ್ವ ರಿಜಿಸ್ಟ್ರಿ ಬದಲಾಗಿ ರಾಷ್ಟ್ರೀಯ ಜನ ರಿಜಿಸ್ಟ್ರಿಯನ್ನು ಜನಗಣತಿಯೊಂದಿಗೆ ನಡೆಸಲಾಗುವುದು ಎಂದು ಸರಕಾರ ಹೇಳಿದೆ. ಆದರೆ ಈ ಮಾಹಿತಿಯನ್ನು ಪೌರತ್ವ ರಿಜಿಸ್ಟ್ರಿಗೆ ಉಪಯೋಗಿಸುವ ಎಲ್ಲಾ ಸಾಧ್ಯತೆಗಳಿವೆ. 2011ರಲ್ಲೂ ಜನ ರಿಜಿಸ್ಟ್ರಿ ನಡೆಸಲಾಗಿತ್ತು.2020ರಲ್ಲಿ ಅದನ್ನು ಮತ್ತೆ ನಡೆಸುವಾಗ ನಾವು ಕೊಟ್ಟ ಮಾಹಿತಿ 2011ರ ಮಾಹಿತಿಗಳಿಗೆ ಅಲ್ಪ ಸ್ವಲ್ಪದಷ್ಟೂ ವ್ಯತ್ಯಾಸವಾದರೆ ಆಗ ಆ ವ್ಯಕ್ತಿ ಸಂಶಾಯಾಸ್ಪದ ಪಟ್ಟಿಯಲ್ಲಿ ಸೇರುತ್ತಾನೆ. ಮತ್ತೆ ಅದನ್ನು ಸರಿಮಾಡಲು ಹರಸಾಹಸ ಪಡಬೇಕಷ್ಟೆ.
ಇದನ್ನೆಲ್ಲಾ ನಾವು ಜನರಿಗೆ ತಿಳಿಸಬೇಕು. ಜನರಿಗೆ ಈ ಕ್ರಮಗಳ ಬಗ್ಗೆ ಸರಿಯಾದ ಮಾಹಿತಿಗಳಿಲ್ಲ. ಹೆಚ್ಚಿನವರು ಸಂಘಪರಿವಾರದ ಸುಳ್ಳುಗಳಿಗೆ ಮರುಳಾಗಿದ್ದಾರೆ. ಆದ್ದರಿಂದ ನಾವು ಜನರ ಬಳಿ ಹೋಗಿ ಅವರಿಗೆ ಸರಿಯಾದ ಮಾಹಿತಿ ನೀಡಿ ಅವರನ್ನು ಎಚ್ಚರಿಸುವುದು ಇಂದಿನ ಅಗತ್ಯ.’ ಎಂದು ಅವರು ಹೇಳಿದರು.
ನಂತರ ನಡೆದ ಪ್ರಶ್ನೋತ್ತರಗಳಲ್ಲಿ ಕಾರ್ಯಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಸಮರ್ಪಕವಾಗಿ ಉತ್ತರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ವಿ ಕುಕ್ಯಾನ್ ವಹಿಸಿದ್ದರು. ಶೇಖರ್‌ರವರ ಧನ್ಯವಾದದೊಂದಿಗೆ ಸಭೆ ಮುಕ್ತಾಯವಾಯಿತು.
Click this button or press Ctrl+G to toggle between Kannada and English