ಬೆಂಗಳೂರು : ಕನಿಷ್ಠ ವೇತನ, ಬಿಸಿಯೂಟ ತಯಾರಿಕೆಯಲ್ಲಿ ಖಾಸಗಿ ಹಸ್ತಕ್ಷೇಪ ಕೈಬಿಡುವಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಸಿಯೂಟ ತಯಾರಿಕರು ಎರಡು ದಿನದ ಬೃಹತ್ ಪ್ರತಿಭಟನೆಗೆ ಬೀದಿಗಿಳಿದಿದ್ದಾರೆ.
ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಹಾಗೂ ಸಿಐಟಿಯುಸಿ ಸಂಘಟನೆಯಿಂದ ಪ್ರತಿಭಟನೆ ನೇತೃತ್ವ ವಹಿಸಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಬಿಸಿಯೂಟ ಕಾರ್ಯಕರ್ತರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಪ್ರತಿಭಟನಾ ಮೆರವಣಿಗೆಗೆ ಮುಂದಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 1 ಲಕ್ಷ 18 ಸಾವಿರ ಬಿಸಿಊಟ ತಯಾರಕರಿದ್ದು, ಇಂದು (ಜ.21) ಮತ್ತು ನಾಳೆ ಶಾಲಾ ಮಕ್ಕಳಿಗೆ ಬಿಸಿ ಊಟ ವಿತರಿಸಲಾಗುವುದಿಲ್ಲ. ದಾವಣಗೆರೆ, ಹಾವೇರಿ, ಗದಗ, ಬಳ್ಳಾರಿ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.
ಮುಖ್ಯ ಅಡುಗೆ ತಯಾರಕರಿಗೆ ರೂ.2700, ಸಹಾಯಕ ಅಡುಗೆ ತಯರಕರಿಗೆ ರೂ.2600 ನೀಡಲಾಗ್ತಿದೆ. ರಾಜ್ಯ ಸರ್ಕಾರ ಶೇ.75 ರಷ್ಟು ಕೇಂದ್ರ ಸರ್ಕಾರ ಶೇ.25 ರಷ್ಟು ಹಣ ಪಾವತಿ ಮಾಡುತ್ತಿದೆ. ಶಾಲೆಗಳಲ್ಲಿ ಹೆಚ್ಚುವರಿ ಮೆನು ಜಾರಿಗೆ ತಂದಿದ್ದಾರೆ. ಇದರಿಂದ ಕೆಲಸ ಮಾಡಲು ಆಗುತ್ತಿಲ್ಲ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಾರ್ಯನಿರ್ವಹಿಸಲಾಗುತ್ತಿದೆ.
ಎಲ್ಲ ಕೆಲಸಗಾರರನ್ನು ಕಾರ್ಮಿಕ ಕಾಯ್ದೆ ಅಡಿಯಲ್ಲಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
Click this button or press Ctrl+G to toggle between Kannada and English