ಕಾವೇರಿ ನದಿ ಹೂಳೆತ್ತಲು 130 ಕೋಟಿ ರೂ. : ಶಾಸಕ ಅಪ್ಪಚ್ಚುರಂಜನ್ ಭರವಸೆ

12:38 PM, Tuesday, January 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

appacchu

ಮಡಿಕೇರಿ : ಕಾವೇರಿ ನದಿ ಜಲಾನಯನ ಪ್ರದೇಶಗಳ ಹೂಳೆತ್ತಲು ಸರಕಾರದಿಂದ ಘೋಷಣೆಯಾಗಿರುವ ರೂ.130 ಕೋಟಿ ಹಣವನ್ನು ತಕ್ಷಣವೇ ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭರವಸೆ ನೀಡಿದ್ದಾರೆ.

ಕುಶಾಲನಗರದಲ್ಲಿ ನೂತನವಾಗಿ ಅಸ್ವಿತ್ವಕ್ಕೆ ಬಂದ ಕಾವೇರಿ ನದಿ ಪ್ರವಾಹ ಪೀಡಿತರ ರಕ್ಷಣಾ ವೇದಿಕೆ ಪ್ರತಿನಿಧಿಗಳು ಶಾಸಕರನ್ನು ಭೇಟಿ ಮಾಡಿ ಮುಂದಿನ ಸಾಲಿನಲ್ಲಿ ನೆರೆ ಮತ್ತೆ ಮರುಕಳಿಸದಂತೆ ಯೋಜನೆ ರೂಪಿಸಲು ಮನವಿ ಸಲ್ಲಿಸಿದ ಸಂದರ್ಭ ಅವರು ಪ್ರತಿಕ್ರಿಯಿಸಿದ್ದು, ಈಗಾಗಲೆ ಹಾರಂಗಿ-ಕಾವೇರಿ ನದಿಯ ಹೂಳೆತ್ತಲು ಸರಕಾರ ಯೋಜನೆ ರೂಪಿಸಿದೆ. ಕಳೆದ ಎರಡು ವರ್ಷಗಳಿಂದ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ನದಿ ಉಕ್ಕಿ ಹರಿದು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು ಮತ್ತೆ ಮರುಕಳಿಸದಂತೆ ತಕ್ಷಣವೇ ಯೋಜನೆ ಕೈಗೆತ್ತಿಕೊಳ್ಳಲು ಕ್ರಮಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ವೇದಿಕೆ ಪ್ರತಿನಿಧಿಗಳೊಂದಿಗೆ ಫೆಬ್ರವರಿ ಪ್ರಥಮ ವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ನಿಯೋಗಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪ್ರವಾಹಕ್ಕೆ ಕಾರಣ ಪತ್ತೆಹಚ್ಚಲು ತಜ್ಞರ ಸಮಿತಿ ನೇಮಿಸಿ ನದಿಯ ಹೂಳೆತ್ತಲು ಕಾರ್ಯಯೋಜನೆ ರೂಪಿಸುವುದು, ಕಾವೇರಿ ನದಿಯ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ನದಿಯ ಅಭಿವೃದ್ಧಿಗೆ ಯೋಜನೆ ರೂಪಿಸುವುದು. ಈ ಮೂಲಕ ಪಟ್ಟಣದ ಮತ್ತು ಗ್ರಾಮಗಳ ನದಿ ತಟಗಳ ಮನೆಗಳಿಗೆ ಮತ್ತೆ ಪ್ರವಾಹ ಮರುಕಳಿಸದಂತೆ ಎಚ್ಚರವಹಿಸಲು ಶಾಶ್ವತ ಕ್ರಿಯಾಯೋಜನೆ ರೂಪಿಸುವಂತೆ ವೇದಿಕೆ ಪ್ರಮುಖರು ಶಾಸಕರಿಗೆ ಮನವಿ ಪತ್ರದಲ್ಲಿ ಕೋರಿದ್ದಾರೆ.

ಮಳೆಗಾಲ ಸಂದರ್ಭ ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್ ಬಳಿಯಿಂದ ಕೊಪ್ಪ ಭಾರತಮಾತ ಶಾಲೆ ತನಕ ರಾಷ್ಟ್ರೀಯ ಹೆದ್ದಾರಿ ಪ್ರವಾಹದಿಂದ ಜಲಾವೃತಗೊಂಡು ಸಂಚಾರ ಕೆಲವು ದಿನಗಳ ಕಾಲ ಸಂಪೂರ್ಣ ಅಡ್ಡಿಯಾಗುತ್ತಿರುವ ಬಗ್ಗೆಯೂ ಸರಕಾರದ ಗಮನಕ್ಕೆ ತರಲಾಗುವುದು. ಕೆಲವೆಡೆ ರಸ್ತೆಯ ಎತ್ತರ ಹೆಚ್ಚಿಸುವುದರೊಂದಿಗೆ ಅಭಿವೃದ್ಧಿಗೊಳಿಸುವ ಯೋಜನೆಗೆ ಸಂಬಂಧಿಸಿದ ಸಚಿವರ ಗಮನ ಸೆಳೆಯಲಾಗುವುದು ಎಂದು ಶಾಸಕ ಅಪ್ಪಚ್ಚುರಂಜನ್ ತಿಳಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ವೇದಿಕೆಯ ಕಾರ್ಯಾಧ್ಯಕ್ಷ ಎಂ.ಎಂ.ಚರಣ್, ಕುಶಾಲನಗರ ಪಟ್ಟಣ ಸೇರಿದಂತೆ ಕಾವೇರಿ ನದಿ ತಟದ ಮನೆಗಳಿಗೆ ಮತ್ತೆ ಪ್ರವಾಹ ಬಂದು ಜನಜೀವನ ಏರುಪೇರಾಗದಂತೆ ಶಾಶ್ವತ ಯೋಜನೆ ರೂಪಿಸಲು ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಸಧ್ಯದಲ್ಲಿಯೇ ಪಟ್ಟಣದ ವಿವಿಧ ಬಡಾವಣೆಗಳು ಮತ್ತು ಗ್ರಾಮಗಳ ನಿವಾಸಿಗಳನ್ನು ಒಳಗೊಂಡಂತೆ ಮುಖ್ಯಮಂತ್ರಿ ಬಳಿ ತೆರಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ವೇದಿಕೆಯ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಉಪಾಧ್ಯಕ್ಷ ತೋರೆರ ಉದಯಕುಮಾರ್, ಪ್ರಧಾನ ಕಾರ್ಯದರ್ಶಿ ವರದ, ಖಜಾಂಚಿ ಕೊಡಗನ ಹರ್ಷ, ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು ಮತ್ತು ಕುಶಾಲನಗರದ ಶೈಲಜಾ ಬಡಾವಣೆ, ಕುವೆಂಪು ಬಡಾವಣೆ, ದಂಡಿನಪೇಟೆ, ಇಂದಿರಾ ಬಡಾವಣೆ, ಬಸಪ್ಪ ಬಡಾವಣೆ, ಯೋಗಾನಂದ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳ ನಿವಾಸಿಗಳ ೫೦ ಕ್ಕೂ ಅಧಿಕ ಪ್ರತಿನಿಧಿಗಳು ಹಾಜರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English