ಕುಶಾಲನಗರ : ಗ್ರಾಮಪಂಚಾಯಿತಿ ಮಾಸಿಕ ಸಭೆಯ ನಡುವೆ ಅಧ್ಯಕ್ಷೆ ಮತ್ತು ಸದಸ್ಯನ ನಡುವೆ ಮಾತಿನ ಚಕಮಕಿ ನಡೆದು ಅಧ್ಯಕ್ಷೆ ಸದಸ್ಯನ ಶರ್ಟ್ ಅನ್ನು ಹರಿದು ಹಾಕಿದ ಘಟನೆ ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಈ ಹಿಂದಿನ ಸಭೆಯ ನಡಾವಳಿಗಳನ್ನು ಕಾರ್ಯರೂಪಕ್ಕೆ ತರದಿರುವ ಬಗ್ಗೆ ಸಭೆಯಲ್ಲಿ ಕೆಲವು ಸದಸ್ಯರು ಅಧ್ಯಕ್ಷರ ವಿರುದ್ಧ ಆರೋಪ ಮಾಡಿದ್ದಾರೆ. ಸಭೆಯನ್ನು ಸ್ಥಗಿತಗೊಳಿಸುವ ಸಂಬಂಧ ಚರ್ಚೆಗಳು ನಡೆಯುತ್ತಿರುವ ವೇಳೆ ಪಂಚಾಯಿತಿ ಅಧ್ಯಕ್ಷೆ ಭವ್ಯ ಮತ್ತು ಸದಸ್ಯ ಹರೀಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ಸಂದರ್ಭ ಉದ್ವೇಗಕ್ಕೆ ಒಳಗಾದ ಅಧ್ಯಕ್ಷೆ ಭವ್ಯ ಹರೀಶ್ ಅವರ ಶರ್ಟ್ಗೆ ಕೈಹಾಕಿದ್ದಾರೆ.
ಸದಸ್ಯ ಹರೀಶ್ ಏರುದನಿಯಲ್ಲಿ ಮಾತನಾಡುತ್ತಿದ್ದ ಸಂದರ್ಭ ಕೆರಳಿದ ಅಧ್ಯಕ್ಷೆ ಯಾವಾಗಲೂ ನನ್ನನ್ನೇ ಟಾರ್ಗೆಟ್ ಮಾಡುತ್ತೀಯ. ಈಗೇನು ನನ್ನನ್ನು ಹೊಡೆಯುತ್ತೀಯ ಎಂದು ಪ್ರಶ್ನಿಸಿ ಸಭೆಯ ಸಭಾಂಗಣದಲ್ಲಿ ಎಲ್ಲರ ಮುಂದೆ ಶರ್ಟ್ ಹಿಡಿದು ಎಳೆದಿದ್ದಾರೆ ಎಂದು ಸದಸ್ಯ ಹರೀಶ್ ಆರೋಪಿಸಿದ್ದಾರೆ. ಘಟನೆಯಿಂದ ಸದಸ್ಯ ಹರೀಶನ ಶರ್ಟ್ ಕೀಸೆ ಹರಿದು ಹೋಗಿದೆ.
ಘಟನೆಯಿಂದ ವಿಚಲಿತರಾದ ಇತರ ಸದಸ್ಯರು ಮರುಮಾತನಾಡದೆ ಸುಮ್ಮನಾದರೆ ಇತ್ತ ಹರೀಶ್ ಅಧ್ಯಕ್ಷೆ ವಿರುದ್ಧ ಹರಿಹಾಯ್ದಿದ್ದಾರೆ. ಸರ್ವ ಸದಸ್ಯರು ಮತ್ತು ಸಾರ್ವಜನಿಕರ ನಡುವೆ ತನಗೆ ಅವಮಾನ ಮಾಡಿದ್ದಾರೆ.
ಅಧ್ಯಕ್ಷೆ ವಿರುದ್ಧ ದೂರು ದಾಖಲಿಸಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹರೀಶ್ ಎಚ್ಚರಿಸಿದರು. ಬಳಿಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಿರಿಯ ಸದಸ್ಯರು, ಮಹಿಳಾ ಸದಸ್ಯರ ರಾಜಿ ತೀರ್ಮಾನದ ಬಳಿಕ ಪ್ರಕರಣ ತಣ್ಣಗಾಯಿತು.
Click this button or press Ctrl+G to toggle between Kannada and English