ಮಡಿಕೇರಿ : ಪೌರತ್ವ ಕಾಯ್ದೆ ವಿರುದ್ಧ ಪ್ರಗತಿಪರ ಜನಾಂದೋಲನ ವೇದಿಕೆ ಗಾಂಧಿ ಮಂಟಪದ ಬಳಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಎಸ್.ಎಸ್.ಎಫ್ ನ ಜಿಲ್ಲಾ ಸಮಿತಿ ಪ್ರಮುಖರು ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡರು. ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ ಅವರು ಮಾತನಾಡಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಯುವ ಯಾವುದೇ ಅನ್ಯಾಯಗಳನ್ನು ಪ್ರತಿಭಟಿಸುವ ಮಂದಿಗೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ನಿರುದ್ಯೋಗ, ಬೆಲೆ ಏರಿಕೆಯಂತಹ ಆಡಳಿತಾತ್ಮಕ ವೈಫಲ್ಯಗಳನ್ನು ಮರೆಮಾಚಿ ಸಮಾಜವನ್ನುಒಡೆದು ಆಳುವ ಮನೋಭಾವವನ್ನು ಆಡಳಿತ ವ್ಯವಸ್ಥೆ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿರೋಧಿಸುವವರ ವಿರುದ್ಧ ನೈಜ ಭಾರತೀಯರು ಈಗ ಒಂದಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಮಾತನಾಡಿ ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆಗಳು ಭಾರತದ ನೈಜ ಆಶಯಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದರು. ಸಂವಿಧಾನ ವಿರೋಧಿ ಚಟುವಟಿಕೆಯನ್ನು ಎಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ಶಾಫಿ ಸಅದಿ ಅವರು ಮಾತನಾಡಿ ಉಪವಾಸ ಸತ್ಯಾಗ್ರಹದ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವೆಂದರು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಲು ಸರ್ವ ಭಾರತೀಯರು ಒಗ್ಗೂಡಬೇಕೆಂದು ತಿಳಿಸಿದರು. ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.
ನಾಣಯ್ಯ ಹಾಗೂ ಇಬ್ರಾಹಿಂ ಭೇಟಿ
ಮಾಜಿ ಸಚಿವ ಎಂ.ಸಿ.ನಾಣಯ್ಯ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಸಾಹಿತಿ ಹಾಗೂ ಚಿಂತಕ ಬಾಲಸುಬ್ರಮಣ್ಯ ಕಂಜರ್ಪಣೆ ಮತ್ತಿತರ ಪ್ರಮುಖರು ಧರಣಿ ನಿರತರ ಬಳಿಗೆ ಬಂದು ನೈತಿಕ ಸ್ಥೈರ್ಯ ತುಂಬಿದರು. ಹೋರಾಟದ ರೂಪು ರೇಷೆಗಳ ಕುರಿತು ಚರ್ಚಿಸಿದರು.
Click this button or press Ctrl+G to toggle between Kannada and English