ಮಡಿಕೇರಿ : ಪಡಿತರ ವ್ಯವಸ್ಥೆಯಲ್ಲಿ ಕಂಡು ಬಂದಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ನಗರದಲ್ಲಿ ಪತ್ರಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಆಹಾರ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಜನಸಾಮಾನ್ಯರಿಗೆ ವಂಚನೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಇ.ರಾ.ದುರ್ಗಾಪ್ರಸಾದ್, ನಕಲಿ ರೇಷನ್ ಕಾರ್ಡ್‌ಗಳ ಸೃಷ್ಟಿಗೆ ಸರ್ಕಾರ ಮತ್ತು ಮೇಲಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣವೆಂದು ಆರೋಪಿಸಿದರು. ನಕಲಿ ಕಾರ್ಡ್‌ಗಳನ್ನು ಪತ್ತೆ ಹಚ್ಚುವ ನೆಪದಲ್ಲಿ ಬಡವರು, ಕೂಲಿ ಕಾರ್ಮಿಕರು ಹಾಗೂ ಶೋಷಿತ ವರ್ಗಕ್ಕೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ. ಈ ಪ್ರಯತ್ನದ ಹಿಂದೆ ಪಡಿತರ ವ್ಯವಸ್ಥೆಯನ್ನೇ ಸ್ಥಗಿತಗೊಳಿಸುವ ಹುನ್ನಾರ ಅಡಗಿದೆ ಎನ್ನುವ ಸಂಶಯ ಮೂಡುತ್ತಿದೆ ಎಂದು ಆರೋಪಿಸಿದರು.
ಎಪಿಎಲ್ ಮತ್ತು ಬಿಪಿಎಲ್ ಫಲಾನುಭವಿಗಳನ್ನು ಆಯ್ಕೆ ಮಾಡುವ ಕ್ರಮವೇ ಅವೈಜ್ಞಾನಿಕವಾಗಿದೆ ಎಂದು ಅಭಿಪ್ರಾಯಪಟ್ಟ ದುರ್ಗಾಪ್ರಸಾದ್, ಸಾಕಷ್ಟು ಅರ್ಹರನ್ನು ಪಡಿತರ ವ್ಯವಸ್ಥೆಯಿಂದ ದೂರವಿಟ್ಟು ವಂಚಿಸಲಾಗಿದೆ, ಇದು ಕೂಡ ವಂಚನೆಯ ಒಂದು ರೂಪವಾಗಿದೆ ಎಂದು ಟೀಕಿಸಿದರು.
ಪಾರದರ್ಶಕತೆಯನ್ನು ಸೃಷ್ಟಿಸುವ ಹೆಸರಿನಲ್ಲಿ ಸರಕಾರ ದಿನಕ್ಕೊಂದು ನಿಯಮ ರೂಪಿಸುತ್ತಿದ್ದು, ಈಗ ಹೆಬ್ಬೆರಳಿನ ಮುದ್ರೆ ಕೊಡಬೇಕಾದ ವ್ಯವಸ್ಥೆ ಇದೆ. ಈ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ಸಮಸ್ಯೆಗಳೇ ಹೆಚ್ಚಿದ್ದು, ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು, ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೇ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸರಕಾರ ಈ ನಿಯಮದ ಅನುಷ್ಠಾನವನ್ನು ಸರಳೀಕರಿಸಿ ಜನಸಾಮಾನ್ಯರಿಗೆ ಸಹಾಯವಾಗುವಂತೆ ವ್ಯವಸ್ಥೆಯನ್ನು ರೂಪಿಸಬೇಕು ಎಂದು ದುರ್ಗಾಪ್ರಸಾದ್ ಒತ್ತಾಯಿಸಿದರು.
ಬೇಡಿಕೆಗಳು
ನಕಲಿ ರೇಷನ್ ಕಾರ್ಡ್‌ಗಳ ಸೃಷ್ಟಿಗೆ ಕಾರಣಕರ್ತರಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಸರ್ವರ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಬೇಕು, ಪಡಿತರ ವ್ಯವಸ್ಥೆಯನ್ನು ಸರಳೀಕರಿಸಬೇಕು, ತಿಂಗಳ ಮೊದಲ ಹತ್ತು ದಿನ ಮಾತ್ರ ಇರುವ ಕಾರ್ಯಕ್ರಮವನ್ನು ಇಡೀ ತಿಂಗಳಿಗೆ ವಿಸ್ತರಿಸಬೇಕು, ಎಪಿಎಲ್, ಬಿಪಿಎಲ್ ಮಾನದಂಡವನ್ನು ರದ್ದುಗೊಳಿಸಿ ಎಲ್ಲರಿಗೂ ಅನ್ವಯವಾಗುವ ಸಾರ್ವತ್ರಿಕ ಪಡಿತರ ವ್ಯವಸ್ಥೆಯನ್ನು ಜಾರಿಗೆ ತರಬೇಕು, ಸರಕಾರದ ನಿಯಮದಂತೆ ಅಂಗಡಿಗಳನ್ನು ತೆರೆದಿಡುವಂತಗಬೇಕು, ಸರಕಾರದಿಂದ ನೀಡುವ ಎಲ್ಲಾ ಸರಕುಗಳು ಎಲ್ಲಾ ಪಡಿತರ ಅಂಗಡಿಗಳಲ್ಲಿ ಏಕರೂಪದಲ್ಲಿ ಸಿಗುವಂತಾಗಬೇಕು, ಕೊಡಗು ಜಿಲ್ಲೆಗೆ ಅನ್ವಯವಾಗುವಂತೆ ಪಡಿತರ ಪ್ರಮಾಣವನ್ನು ಹೆಚ್ಚಿಸಬೇಕು, ನಿತ್ಯೋಪಯೋಗಿ ವಸ್ತುಗಳಾದ ಸಕ್ಕರೆ, ಬೇಳೆ, ಸೀಮೆ ಎಣ್ಣೆ, ತಾಳೆ ಎಣ್ಣೆ, ಸೋಪು ಮೊದಲಾದವುಗಳನ್ನು ಪಡಿತರ ವ್ಯವಸ್ಥೆಯಲ್ಲಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಿಪಿಐಎಂ ನ ಜಿಲ್ಲಾ ಪದಾಧಿಕಾರಿಗಳಾದ ಮಹದೇವ್, ಜೋಶ್, ವೈ.ಕೆ.ಗಣೇಶ್, ಎ.ಸಿ.ಸಾಬು, ಹೆಚ್.ಬಿ.ರಮೇಶ್, ವಿರಾಜಪೇಟೆ ಕಾರ್ಯದರ್ಶಿ ಶಿವಪ್ಪ, ಕಾರ್ಯದರ್ಶಿ ಮಹೇಶ್, ಪಿ.ಆರ್.ಭರತ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
Click this button or press Ctrl+G to toggle between Kannada and English