ಮಡಿಕೇರಿ : ರಾಜ್ಯದಲ್ಲಿ ಕೊರೊನಾ ವೈರಸ್ ಸಂಬಂಧಿಸಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತೀ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಗಳನ್ನು ಕೊರೊನಾ ಸಂಬಂಧಿಸಿದ ಪ್ರಕರಣಗಳಿಗೆ ಮೀಸಲಿಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು ಅವರು, ರಾಜ್ಯದ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಂದರುಗಳೂ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಕೊರೊನಾ ವೈರಾಣು ಸೋಂಕಿನ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದರು. ಈಗಾಗಲೇ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸಂಬಂಧಿತ ಜಾಗೃತಿ ಮೂಡಿಸಲು 15 ಎಲ್ ಇ ಡಿ ವಾಹನಗಳನ್ನು ರವಾನಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಮತ್ತೆ 15 ವಾಹನಗಳನ್ನು ಜನಜಾಗೃತಿಗಾಗಿ ರವಾನಿಸಲಾಗುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಕೊರೊನಾ ಸೋಂಕು ಸಂಬಂಧಿಸಿದಂತೆ ಈಗಾಗಲೇ 74 ಶಂಕಿತರ ರಕ್ತ ಪರೀಕ್ಷೆ ಕೈಗೊಳ್ಳಲಾಗಿದ್ದು ಇವರಲ್ಲಿ ವೈರಾಣುಗಳಿಲ್ಲ ಎಂದು ಸಾಬೀತಾಗಿದೆ ಎಂದೂ ಸಚಿವರು ಮಾಹಿತಿ ನೀಡಿದರು.
ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಸಮಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯ ಪ್ರರ್ವತ್ತನಾಗಿದ್ದು, ಔಷಧಿ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳ ಕೊರತೆ ಉಂಟಾಗದಂತೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದ ಆರೋಗ್ಯ ಸಚಿವರು, ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ತಪಾಸಣೆ ನಡೆಸುತ್ತಿರುವ ಸರ್ಕಾರಿ ಆಸ್ಪತ್ರೆಗಳ ವೈದ್ಯರ ವಿರುದ್ದ ಕಠಿಣ ಕ್ರಮ ಖಂಡಿತಾ ಎಂದು ಎಚ್ಚರಿಸಿದರು.
ಕೊಡಗು ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಡಿಕೇರಿ ತಾಲೂಕು ಅಧ್ಯಕ್ಷ ಕಾಂಗೀರ ಸತೀಶ್, ಮಡಿಕೇರಿ ನಗರಾಧ್ಯಕ್ಷ ಮನುಮುಂಜುನಾಥ್, ನಗರ ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್, ಪ್ರಮುಖರಾದ ಮಹೇಶ್ ಜೈನಿ, ಬಿ.ಕೆ. ಅರುಣ್ ಕುಮಾರ್, ಸತೀಶ್, ಸವಿತಾ ರಾಕೇಶ್, ಡೀನ್ ಬೋಪಣ್ಣ, ಮೇದಪ್ಪ, ಅಪ್ಪಣ್ಣ, ಜೀವನ್, ಕನ್ನಂಡ ಸಂಪತ್ ಸೇರಿದಂತೆ ಹಲವರು ಹಾಜರಿದ್ದರು.
Click this button or press Ctrl+G to toggle between Kannada and English