ಮಂಗಳೂರು :ಪಿಲಿಕುಳದಲ್ಲಿ ಇಂದು ನಡೆದ ರಾಜ್ಯಮಟ್ಟದ ಸ್ಕೌಟರ್ ಸಮಾವೇಶ ಇಂಡಬಾವನ್ನು ಕರ್ನಾಟಕ ಬ್ಯಾಂಕ್ ನ ಅಧ್ಯಕ್ಷ ಅನಂತ ಕೃಷ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇಶದ ಯುವ ಜನತೆಯಲ್ಲಿ ಇಂದು ಶಿಸ್ತು ಕಡಿಮೆಯಾಗುತ್ತಿದ್ದು ಅದನ್ನು ಬೆಳೆಸುವುದು ಅಗತ್ಯವಾಗಿದೆ. ಸ್ಕೌಟ್ ಹಾಗೂ ಗೈಡ್ ಈ ನಿಟ್ಟಿನಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿವೆ ಎಂದರು.
ಪಾಶ್ಚಿಮಾತ್ಯ ದೇಶಗಳಲ್ಲಿ ಜನರು ಕಡ್ಡಾಯವಾಗಿ 2 ವರ್ಷಗಳ ಕಾಲ ಮಿಲಿಟರಿಯಲ್ಲಿ ಕೆಲಸ ಮಾಡಬೇಕು. ಇದರಿಂದಾಗಿ ಅಲ್ಲಿನ ಜನರಲ್ಲಿ ಶಿಸ್ತು, ಸಂಯಮ, ಸಹಬಾಳ್ವೆ ಹೆಚ್ಚಾಗಿ ಕಂಡು ಬರುತ್ತದೆ. ಆದರೆ ನಮ್ಮ ದೇಶದಲ್ಲಿ ಕಾಲೇಜುಗಳಲ್ಲಿ ಎನ್.ಸಿ.ಸಿ. ಕಡ್ದಾಯಗೊಳಿಸಿದರೂ 6 ವರ್ಷಕ್ಕಷ್ಟೇ ಅದು ಸೀಮಿತಗೊಂಡಿತು. ನಮ್ಮ ಯುವಕರಿಗೆ ಶಿಸ್ತು ಕಲಿಸುವಂತಹ ಕಾರ್ಯಕ್ರಮಗಳನ್ನು ನಾವು ಶಾಲಾ ಕಾಲೇಜುಗಳಲ್ಲಿ ಅಳವಡಿಸಬೇಕು. ಆಗ ನಮ್ಮ ಸಮಾಜವು ಆರೋಗ್ಯಯುತವಾಗುತ್ತದೆ ಎಂದರು.
ನಮಗೆ ಸ್ವಾತಂತ್ರ್ಯ ಹಾಗೂ ಸ್ವೇಚ್ಚಾಚಾರದ ನಡುವಿನ ವ್ಯತ್ಯಾಸ ಗೊತ್ತಿರಬೇಕು ಏಕೆಂದರೆ ನಾವಿಂದು ಸ್ವೇಚ್ಚಾಚಾರವೇ ಸ್ವಾತಂತ್ರ್ಯ ಎಂಬ ಭ್ರಮೆಯಲ್ಲಿದ್ದೇವೆ. ಈ ತಪ್ಪು ತಿಳುವಳಿಕೆಯನ್ನು ಸರಿಪಡಿಸುವಲ್ಲಿ ಸ್ಕೌಟ್ ಗೈಡ್ ಮಹತ್ತರ ಪಾತ್ರ ವಹಿಸುತ್ತಿದೆ. ಉತ್ತಮ ಪ್ರಜೆಗಳನ್ನು ದೇಶಕ್ಕೆ ಕೊಡುವ ಕೆಲಸವನ್ನು ನಾವು ಹಿರಿಯರಾಗಿ ಮಾಡಬೇಕು. ಅದರಲ್ಲೂ ಶಿಕ್ಷಕರು ಮಹತ್ತರವಾದ ಜವಾಬ್ದಾರಿಯನ್ನು ಹೊಂದಿದ್ದಾರೆ. ಅದನ್ನು ಶಿಕ್ಷಕರು ಸರಿಯಾದ ರೀತಿಯಲ್ಲಿ ಪಾಲಿಸುವರು ಎಂಬ ನಂಬಿಕೆ ನನಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಮಾವೇಶವು ಮೂರು ದಿನಗಳ ವರೆಗೆ ನಡೆಯಲಿದ್ದು ಶಿಬಿರಾರ್ಥಿಗಳಿಗೆ ದಳ ವಿನ್ಯಾಸ, ಕಾರ್ಯಚಟುವಟಿಕೆಗಳನ್ನು ಮಾಡುವ ಬಗ್ಗೆ ತರಬೇತಿ, ಪ್ರೋಗ್ರಾಮ್ ಪ್ಲಾನ್, ಆರೋಗ್ಯ ರಕ್ಷಣೆ ಮೊದಲಾದವುಗಳ ಬಗ್ಗೆ ಮಾಹಿತಿಯನ್ನು ನೀಡಲಾಗುವುದು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎನ್. ಜಿ.ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವೆಗೆ ಪರ್ಯಾಯ ಹೆಸರು ನಮ್ಮ ಸ್ಕೌಟ್ ಅಂಡ್ ಗೈಡ್ ಆದ್ದರಿಂದ ಸರಕಾರವು ನಮಗೆ ಹಲವು ವಿಧವಾದ ಸವಲತ್ತುಗಳನ್ನು ಕೊಡುತ್ತಿದೆ. ಸ್ಕೌಟ್ ಅಂಡ್ ಗೈಡ್ ನಲ್ಲಿ ಇದ್ದು ವಿಶೇಷ ಸಾಧನೆ ಮಾಡಿದವರಿಗೆ ಸಿ.ಇ.ಟಿಯಂತಹ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಕೊಡುತ್ತದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಸ್ಕೌಟ್ ಆಯುಕ್ತ ರಾಮಶೇಷ ಶೆಟ್ಟಿ, ಜಿಲ್ಲಾ ಗೈಡ್ ಆಯುಕ್ತೆ ಐರಿನ್ ಡಿಕುನ್ಹ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಕದ್ರಿ, ಜಿಲ್ಲಾ ಕೋಶಾಧಿಕಾರಿ ವಾಸುದೇವ್ ಬೋಳೂರ್, ಶಿಬಿರ ಸಂಘಟಕ ಸಿ.ಎಸ್. ರೆಡ್ಡಿ, ಶಿಬಿರ ನಾಯಕ ಆನಂದ ಅಡಿಗ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English