ಜೈಲಲ್ಲಿ ನಿರ್ಭಯಾ ಹಂತಕನ ಹೈಡ್ರಾಮ : ಗೋಡೆಗೆ ತಲೆ ಚಚ್ಚಿಕೊಂಡ ಅಪರಾಧಿ ವಿನಯ್ ಶರ್ಮಾ

1:42 PM, Thursday, February 20th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

vinay-sharma

ನವದೆಹಲಿ : ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ ಹೈ ಡ್ರಾಮಾ ನಡೆಸಿದ್ದು, ಗೋಡೆಗೆ ತಲೆ ಚಚ್ಚಿಕೊಳ್ಳುವ ಮೂಲಕ ನಾಟಕವಾಡಿದ್ದಾನೆ.

ಈ ಕುರಿತು ಜೈಲಿನ ಮೂಲಗಳು ಮಾಹಿತಿ ನೀಡಿದ್ದು, ಫೆಬ್ರವರಿ 16ರಂದು ಈ ಘಟನೆ ನಡೆದಿದೆ. ತಕ್ಷಣವೇ ಜೈಲು ಅಧಿಕಾರಿಗಳು ತಡೆದಿದ್ದಾರೆ. ಗೋಡೆಗೆ ಬಲವಾಗಿ ತಲೆ ಚಚ್ಚಿಕೊಂಡಿದ್ದರಿಂದ ವಿನಯ್ ಶರ್ಮಾಗೆ ಗಾಯವಾಗಿದೆ. ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ. ನಿರ್ಭಯಾ ಅತ್ಯಾಚಾರಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ಗೋಡೆಗೆ ತಲೆ ಚೆಚ್ಚಿಕೊಂಡಿರುವುದು ಸತ್ಯ, ತಲೆಗೆ ಗಾಯವಾಗಿದೆ ಎಂದು ಜೈಲು ಅಧಿಕಾರಿಗಳು ಕೂಡ ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೇ ವಿನಯ್ ಪರ ವಕೀಲರು ಕೋರ್ಟಿಗೆ ಹೇಳಿಕೆ ನೀಡಿದ್ದು, ವಿನಯ್ ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ. ಅಲ್ಲದೆ ಸೆಲ್‍ನಲ್ಲಿ ವಿನಯ್ ಮೇಲೆ ಹಲ್ಲೆ ನಡೆಸಲಾಗಿದ್ದು, ತಲೆಗೆ ಪೆಟ್ಟು ಬಿದ್ದಿದೆ. ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ಆದ್ದರಿಂದ ಮರಣದಂಡನೆ ವಿಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಹೇಳಿಕೆ ನಂತರ ಜೈಲು ಅಧಿಕಾರಿಗೆ ಈ ಕುರಿತು ಕೋರ್ಟ್ ಸಹ ಸೂಚನೆ ನೀಡಿದ್ದು, ಕಾನೂನಿನ ಪ್ರಕಾರ ವಿನಯ್ ಕುರಿತು ಕಾಳಜಿ ವಹಿಸುವಂತೆ ಆದೇಶಿಸಿದೆ.

ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಅಲ್ಲದೆ ಹೊಸ ಮರಣದಂಡನೆ ಜಾರಿಗೊಳಿಸಿದ ನಂತರ ಗಲ್ಲು ಶಿಕ್ಷೆ ಮುಂದೂಡುವುದು ಸಂತ್ರಸ್ತರ ಹಕ್ಕುಗಳಿಗೆ ಚ್ಯುತಿ ತಂದಂತೆ ಎಂದು ದೆಹಲಿ ನ್ಯಾಯಾಲಯ ವ್ಯಾಖ್ಯಾನಿಸಿದೆ.

ಮುಖೇಶ್ ಕುಮಾರ್ ಸಿಂಗ್(32), ಪವನ್ ಗುಪ್ತಾ(25), ವಿನಯ್ ಕುಮಾರ್ ಶರ್ಮಾ(26), ಅಕ್ಷಯ್ ಕುಮಾರ್(31) ಈ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸುವಂತೆ ಕೋರ್ಟ್ ಆದೇಶಿಸಿದೆ. ಇದು ಕೋರ್ಟ್ ನೀಡುತ್ತಿರುವ ಮೂರನೇ ಆದೇಶವಾಗಿದ್ದು, ಈ ಬಾರಿಯಾದರೂ ಗಲ್ಲಿಗೇರಿಸಲಾಗುತ್ತದೆಯೇ ಎಂಬುದು ಸಂತ್ರಸ್ತರ ಪ್ರಶ್ನೆಯಾಗಿದೆ.

ಜನವರಿ 7ರಂದು ಕೋರ್ಟ್ ಈ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಅಡಿಷನಲ್ ಸೆಶನ್ ಜಡ್ಜ್ ಧರ್ಮೇಂದ್ರ ರಾಣಾ ಅವರು ಆದೇಶ ಹೊರಡಿಸಿದ್ದರು. ನಂತರ ಜನವರಿ 17 ಹಾಗೂ 31ರಂದು ನಡೆದ ವಿಚಾರಣೆ ವೇಳೆ ಶಿಕ್ಷೆಯನ್ನು ಮುಂದೂಡಲಾಗಿದೆ. ಅದರಂತೆ ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English