ಮಡಿಕೇರಿ : ಕೊನೆಗೂ ಮಡಿಕೇರಿ ನಗರದ ರಸ್ತೆಗಳ ಅಭಿವೃದ್ಧಿಗೆ ಕಾಲ ಕೂಡಿ ಬಂದಿದೆ. ಮಹಾಮಳೆಯಿಂದ ಹದಗೆಟ್ಟಿದ್ದ ರಸ್ತೆಗಳ ದುರಸ್ತಿಗಾಗಿ ಸಾರ್ವಜನಿಕರು ಒತ್ತಾಯಿಸುತ್ತಲೇ ಬಂದಿದ್ದರೂ ನಗರಸಭೆ ಮಾತ್ರ ನಿರ್ಲಕ್ಷ್ಯ ವಹಿಸುತ್ತಲೇ ಬಂದಿತ್ತು. ಇದೀಗ ಮತ್ತೊಂದು ಮಳೆಗಾಲ ಸಮೀಪಿಸುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಆರಂಭಿಸಿದ್ದಾರೆ.
ನಗರೋತ್ಥಾನದ ೩ನೇ ಹಂತದ ವಿವಿಧ ಕಾಮಗಾರಿಗಳು ನಗರಸಭೆ ವತಿಯಿಂದ ನಡೆಯುತ್ತಿದ್ದು, ನಗರದ ಇಂದಿರಾಗಾಂಧಿ ವೃತ್ತ ಮತ್ತು ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದ ಸುತ್ತಲೂ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಈ ಎರಡು ಕಾಮಗಾರಿಗಳಿಗೆ ಒಟ್ಟು ೮೦ ಲಕ್ಷ ರೂ.ಗಳನ್ನು ವಿನಿಯೋಗ ಮಾಡಲಾಗುತ್ತಿದೆ. ಇಂದಿರಾಗಾಂಧಿ ವೃತ್ತದ ಒಂದು ಬದಿಯ ರಸ್ತೆಯನ್ನು ಈಗಾಗಲೇ ಕಾಂಕ್ರೀಟೀಕರಣ ಮಾಡಲಾಗಿದ್ದು, ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಮತ್ತೊಂದು ಬದಿಯ ರಸ್ತೆಯನ್ನು ಅಗೆದು ಕಾಂಕ್ರಿಟೀಕರಣಕ್ಕೆ ಸಜ್ಜುಗೊಳಿಸಲಾಗುತ್ತಿದೆ.
ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದ ಒಂದು ಬದಿಯ ರಸ್ತೆಯನ್ನು ಕೂಡ ಅಗೆಯಲಾಗಿದ್ದು, ಬಿರುಸಿನಿಂದ ಕಾಮಗಾರಿ ನಡೆಯುತ್ತಿದೆ. ಇದರ ಜೊತೆಯಲ್ಲೇ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ, ಒಳಚರಂಡಿ ನಿರ್ಮಾಣ ಹಾಗೂ ಕುಡಿಯುವ ನೀರಿನ ಪೈಪುಗಳ ಜೋಡಿಕೆ ಕಾರ್ಯ ಕೂಡ ನಡೆಯುತ್ತಿದೆ.
ಈ ಮುಖ್ಯ ರಸ್ತೆಗಳ ಅಭಿವೃದ್ದಿ ಕಾಮಗಾರಿಯಿಂದಾಗಿ ವಾಹನ ದಟ್ಟಣೆ ಕಂಡು ಬಂದಿದ್ದು, ವಾಹನಗಳ ಸಂಚಾರವನ್ನು ನಿಯಂತ್ರಿಸುವುದೇ ಟ್ರಾಫಿಕ್ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಜನರಲ್ ತಿಮ್ಮಯ್ಯ ವೃತ್ತದಿಂದ ರಾಜಾಸೀಟು ರಸ್ತೆ ಮೂಲಕ ಬಸ್ ಗಳ ಸಂಚಾರವಾಗುತ್ತಿದೆ. ಶಿವರಾತ್ರಿ ಹಬ್ಬ ಸೇರಿದಂತೆ ಸಾಲಾಗಿ ಮೂರು ರಜೆಗಳಿರುವುದರಿಂದ ನಗರಕ್ಕೆ ಆಗಮಿಸುವ ಪ್ರವಾಸಿಗರ ವಾಹನಗಳ ಸಂಖ್ಯೆಯೂ ಹೆಚ್ಚಾದರೆ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಮಳೆಗಾಲಕ್ಕೂ ಮೊದಲು ನಗರದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದೆಂದು ಪೌರಾಯುಕ್ತ ಎಂ.ಎಲ್.ರಮೇಶ್ ತಿಳಿಸಿದ್ದಾರೆ.
Click this button or press Ctrl+G to toggle between Kannada and English