ಮೈಸೂರು : ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ವಿರುದ್ಧ ರಾಜ್ಯದೆಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಅಮೂಲ್ಯ ವಿರುದ್ಧ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅಮೂಲ್ಯ ತಂದೆ ಆಕೆಯ ಕೈ-ಕಾಲು ಮುರಿಯಿರಿ ಎಂದು ಹೇಳಿದ್ದಾರೆ. ಜೊತೆಗೆ ಅವಳ ರಕ್ಷಣೆಗೂ ಹೋಗಲ್ಲ ಎಂದಿದ್ದಾರೆ. ಆಕೆಯ ಹಿಂದಿರುವ ಸಂಘಟನೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕ್ರಮ ತೆಗೆದುಕೊಳ್ಳದಿದ್ದರೆ ಇದು ಕೊನೆಯಾಗಲ್ಲ,” ಎಂದರು.
“ಅಮೂಲ್ಯಗೆ ನಕ್ಸಲ್ ಜೊತೆ ಸಂಬಂಧ ಇರುವುದು ಸಾಬೀತಾಗಿದೆ. ಶಾಂತಿ ಸುವ್ಯವಸ್ಥೆ ಹಾಳು ಮಾಡುವುದು ಇವರ ಷಡ್ಯಂತ್ರವಾಗಿದೆ. ಮೊದಲು ಆಕೆಗೆ ಪ್ರೇರಣೆ ಕೊಟ್ಟವರು ಯಾರೆಂದು ತನಿಖೆಯಾಗಬೇಕು. ಆಗಲೇ ಇದಕ್ಕೆಲ್ಲಾ ಕೊನೆ ಸಿಗಲಿದೆ,” ಎಂದು ಬಿಎಸ್ವೈ ಹೇಳಿದರು.
ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದ ಅವರು, ನಾಡಿನ ಜನತೆಗೆ ಶಿವರಾತ್ರಿ ಹಬ್ಬದ ಶುಭಾಷಯಗಳನ್ನು ಹೇಳಿದರು. ಜೊತೆಗೆ ಬಜೆಟ್ ಕುರಿತಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಈ ಬಾರಿ ಬಜೆಟ್ ರೈತರ ಹಾಗೂ ಕೃಷಿಗೆ ಆದ್ಯತೆಯ ಬಜೆಟ್ ಆಗಲಿದೆ. ರೈತರಿಗೆ ಹೆಚ್ಚಿನ ಆದ್ಯತೆ ಕೊಡುತ್ತೇವೆ. ನೆರೆ ಸಂತ್ರಸ್ತರಿಗೆ ನಾವು ಎಲ್ಲ ಸಹಾಯ ಮಾಡಿದ್ದೇವೆ. ಚಿಕ್ಕ ಪುಟ್ಟ ಲೋಪವಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾದಲ್ಲಿ ಎಷ್ಟು ಖೋತಾ ಆಗಿದೆ ಎಂಬುದು ಲೆಕ್ಕ ಹಾಕುತ್ತಿದ್ದೇವೆ. ಅದನ್ನೆಲ್ಲ ಸರಿದೂಗಿಸಿ ಬಜೆಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.
Click this button or press Ctrl+G to toggle between Kannada and English