ಮಡಿಕೇರಿ : ದಕ್ಷಿಣ ಕೊಡಗಿನಲ್ಲಿ ನಿರಂತರ ವಿದ್ಯುತ್ ಕಡಿತಗೊಳಿಸುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೋಣಿಕೊಪ್ಪ ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಬಾಳೆಲೆ, ಶ್ರೀಮಂಗಲ, ಹುದಿಕೇರಿ ಹಾಗೂ ಪೊನ್ನಂಪೇಟೆ ಹೋಬಳಿಯ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು, ಬೆಳೆಗಾರರು, ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡು ಮಾನವ ಸರಪಳಿ ನಿರ್ಮಿಸಿ ಇಲಾಖಾ ಅಧಿಕಾರಿಗಳ ಕಾರ್ಯವೈಖರಿಯನ್ನು ಟೀಕಿಸಿದರು. ಗೋಣಿಕೊಪ್ಪ, ಪೊನ್ನಂಪೇಟೆ ಮುಖ್ಯ ರಸ್ತೆತಡೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಚೆಸ್ಕಾಂನ ಹಿರಿಯ ಅಧಿಕಾರಿಗಳು ತಬ್ಬಿಬ್ಬಾದ ಪ್ರಸಂಗವೂ ನಡೆಯಿತು. ವಾರ್ಷಿಕ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಮಾತ್ರ ಬೆಳೆಗಾರ ಕಾಫಿ ಬೆಳೆಗೆ ನೀರು ಒದಗಿಸಲು ನಿರಂತರ ವಿದ್ಯುತ್ ಕೇಳುತ್ತಾನೆ. ಈ ಮೂರು ತಿಂಗಳ ಶ್ರಮದ ಮೇಲೆ ರೈತರು ಹಾಗೂ ಬೆಳೆಗಾರರ ಬದುಕು ನಿಂತಿದೆ. ಆದರೆ ಇದರ ಗಾಂಭೀರ್ಯತೆ ಅರಿಯದ ಅಧಿಕಾರಿಗಳು ದಕ್ಷಿಣ ಕೊಡಗಿನ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ರೈತ ಸಂಘದ ಮುಖಂಡ ಮನುಸೋಮಯ್ಯ ಆರೋಪಿಸಿದರು.
ಪ್ರಮುಖರಾದ ಪುಚ್ಚಿಮಾಡ ಅಶೋಕ್, ನಲ್ಲೂರಿನ ಸುಜಯ್ ಬೋಪಯ್ಯ, ಹುದಿಕೇರಿಯ ಚಕ್ಕೇರ ವಾಸು ಕುಟ್ಟಪ್ಪ,ಬಿರುನಾಣಿಯ ಕರ್ತಮಾಡ ಸುಜು ಪೊನ್ನಪ್ಪ, ಕಿರುಗೂರಿನ ಚೆಪ್ಪುಡೀರ ಕುಟ್ಟಪ್ಪ, ತಿತಿಮತಿಯ ಚೆಪ್ಪುಡೀರ ಕಾರ್ಯಪ್ಪ, ಟಿ.ಶೆಟ್ಟಿಗೇರಿಯ ಅಪ್ಪಚಂಗಡ ಮೋಟಯ್ಯ, ಶ್ರೀಮಂಗಲದ ಅಜ್ಜಮಾಡ ಚಂಗಪ್ಪ,ನಲ್ಲೂರಿನ ಪುಚ್ಚಿಮಾಡ ಲಾಲಾ ಪೂಣಚ್ಚ ಸೇರಿದಂತೆ ಅನೇಕ ಭಾಗದ ರೈತ ಮುಖಂಡರು ವಿದ್ಯುತ್ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಖಜಾಂಜಿ ಇಟ್ಟಿರ ಸಭಿತ, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೇಮಾಡ ಮಂಜುನಾಥ್, ಅಮ್ಮತ್ತಿ ಹೋಬಳಿ ಸಂಚಾಲಕ, ಮಂಡೇಪಂಡ ಪ್ರವೀಣ್, ಹುದಿಕೇರಿ ಹೋಬಳಿ ಸಂಚಾಲಕ ಚಂಗುಲಂಡ ಸೂರಜ್, ಶ್ರೀಮಂಗಲ ಹೋಬಳಿ ಸಂಚಾಲಕ ಚಟ್ಟಂಗಡ ಕಂಬ ಕಾರ್ಯಪ್ಪ, ತಾಲೂಕು ಸಂಚಾಲಕ ಬಾಚಮಾಡ ಭವಿ ಕುಮಾರ್, ಮಾಯಮುಡಿಯ ಪುಚ್ಚಿಮಾಡ ರಾಯ್ ಮಾದಪ್ಪ, ಚೆಸ್ಕಾಂ ಅಧಿಕಾರಿಗಳಾದ ಸುರೇಶ್, ಸೇರಿದಂತೆ ಮಲ್ಚೀರ ಅಶೋಕ್, ಮಲ್ಚೀರ ಗಿರೀಶ್, ತೀತರಮಾಡ ರಾಜ, ಮರಿಸ್ವಾಮಿ, ಜಗದೀಶ್, ಬೋಡಂಗಡ ಅಶೋಕ್, ಅಳಮೇಯಂಗಡ ಬೋಸ್, ಸುರೇಶ್ ಸುಬ್ಬಯ್ಯ, ಕಾಡ್ಯಮಾಡ ಉದಯ್, ಚಕ್ಕೇರ ಸೂರ್ಯ ಮತ್ತಿತರರು ಪಾಲ್ಗೊಂಡಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಇದ್ದ ಕಾರಣ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಸಮಸ್ಯೆ ಬಗೆಹರಿಯಲಿದೆ
ವಿದ್ಯುತ್ ಕಡಿತದ ಸಮಸ್ಯೆ ಮತ್ತು ವೋಲ್ಟೇಜ್ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಹೆಚ್ಚುವರಿ ಟ್ರಾನ್ಸ್ ಫಾರ್ಮ್‌ಗಳನ್ನು ಅಳವಡಿಸಿ ವಿದ್ಯುತ್ ಸಮಸ್ಯೆಯನ್ನು ನಿವಾರಿಸಲಾಗುವುದು ಎಂದು ಚೆಸ್ಕಾಂನ ಮೈಸೂರು ವಿಭಾಗದ ಮುಖ್ಯ ಇಂಜಿನಿಯರ್ ಜಿ.ಎಲ್.ಚಂದ್ರಶೇಖರ್ ಭರವಸೆ ನೀಡಿದರು.
Click this button or press Ctrl+G to toggle between Kannada and English