ಸಜ್ಜನ “ಹರೇಕಳ ಹಾಜಬ್ಬ”ರಿಗೆ ಕಿರುಕುಳ

1:28 PM, Tuesday, November 13th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Harekala Hajabbaಮಂಗಳೂರು :ಹರೇಕಳ ಎಂಬ ಗ್ರಾಮದ ಹೆಸರು ಇಂದು ದೇಶ ವಿದೇಶಗಳಲ್ಲಿ ಗುರುತಿಸಲ್ಪಡಲು, ಅಲ್ಲಿನ ಸರಕಾರಿ ಶಾಲೆಗೆ ಖಾಸಗಿ ವ್ಯಕ್ತಿ, ಸಂಘ ಸಂಸ್ಥೆಗಳಿಂದ ಸಾಲು ಸಾಲಾಗಿ ದೇಣಿಗೆ ಬರಲು ಹರೇಕಳ ಹಾಜಬ್ಬ ಕಾರಣ. ಆದರೆ, ಇಂದು ಅದೇ ಹಾಜಬ್ಬರ ಸ್ಥಾನಪಲ್ಲಟಗೊಳಿಸಲು ಹಾಜಬ್ಬರಿಗೆ ಇನ್ನಿಲ್ಲದ ಕಿರುಕುಳ ನೀಡಲಾಗುತ್ತಿದೆ.

ಈವತ್ತು ಹರೇಕಳ ಎಂದ ತಕ್ಷಣ ಹಾಜಬ್ಬ ನೆನಪಾಗುತ್ತಾರೆ. ಅವರ ಶಾಲೆ ಕಣ್ಣೆದುರು ಬರುತ್ತದೆ. ಆದರೆ, ಹಾಜಬ್ಬರ ಯಶೋಗಾಥೆಯನ್ನು ಸಹಿಸಲು ಮಾತ್ರ ಸ್ಥಳೀಯ ಕೆಲವರಿಗೆ ಸಾಧ್ಯವಾಗಲಿಲ್ಲ. `ಶಾಲೆಯ ಹೆಸರಿನಲ್ಲಿ ಹಾಜಬ್ಬ ವೈಯಕ್ತಿಕ ಲಾಭ ಮಾಡಿಕೊಳ್ಳುತ್ತಾರೆ’ ಎಂದು ಶಂಕಿಸುವ ಕೆಲವರು ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲು ಕಳೆದ ಮೂರ್ನಾಲ್ಕು ತಿಂಗಳಿನಿಂದ ಕಸರತ್ತು ನಡೆಸುತ್ತಿದ್ದಾರೆ. ಊರಿಗೆ ಅರಸನಾದರೂ ತಾಯಿಗೆ ಮಗ ಎಂಬಂತೆ, ಹಾಜಬ್ಬರನ್ನು ರಾಜ್ಯಕ್ಕೆ ರಾಜ್ಯವೇ ಕೊಂಡಾಡುತ್ತಿದ್ದರೂ ಸ್ಥಳೀಯ ಕೆಲವರು ಹಾಜಬ್ಬರ ಯಶಸ್ಸನ್ನು ಸಹಿಸುತ್ತಿಲ್ಲ.

ಹರೇಕಳದ ನ್ಯೂಪಡ್ಪು ಎಂಬಲ್ಲಿ 2000ರಲ್ಲಿ ಸ್ಥಾಪನೆಗೊಂಡ ಸರಕಾರಿ ಶಾಲೆಯನ್ನು ಹಂತ ಹಂತವಾಗಿ ಮೇಲಕ್ಕೆತ್ತಲು ಹಾಜಬ್ಬರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅದನ್ನು ಆ ಶಾಲೆಯಲ್ಲಿ ಕಲಿತ ಪುಟಾಣಿಗಳು, ಅವರಿಗೆ ಕಲಿಸಿದ ಶಿಕ್ಷಕ-ಶಿಕ್ಷಕಿಯರು ಸಾರಿ ಹೇಳುತ್ತಾರೆ. ಅಷ್ಟೇ ಅಲ್ಲ, ಸರಕಾರಿ ಶಾಲೆಯಾದರೂ ಅದು `ಹರೇಕಳ ಹಾಜಬ್ಬ’ ಎಂದೇ ಗುರುತಿಸಲ್ಪಟ್ಟಿದೆ. ಹಾಗೇ ಹೇಳಬೇಡಿ ಎಂದು ಹಾಜಬ್ಬ ಹೇಳಿದರೂ ಕೂಡ ಜನರು ಮಾತ್ರ `ಹರೇಕಳ ಹಾಜಬ್ಬರ ಶಾಲೆ’ ಎಂದೇ ಕರೆಯುತ್ತಾರೆ.

ಸರಕಾರವೇನೋ ಮನಸ್ಸು ಮಾಡಿದ್ದರೆ, ಈ ವರ್ಷ ಹರೇಕಳ ಹಾಜಬ್ಬರ ಶಾಲೆಯಲ್ಲಿ ದ್ವಿತೀಯ ಪಿಯು ತರಗತಿ ನಡೆಯಬೇಕಾಗಿತ್ತು. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಪಿಯು ಕಾಲೇಜು ಸ್ಥಾಪಿಸಲು ಆಸಕ್ತಿ ವಹಿಸಲಿಲ್ಲ. ಹಾಗಂತ ಹಾಜಬ್ಬರು ಧೃತಿಗೆಡಲಿಲ್ಲ. ಅಧಿಕಾರಿಗಳ, ಶಾಸಕರ, ಸಚಿವರ ಬಳಿ ದುಂಬಾಲು ಬೀಳುತ್ತಿದ್ದಾರೆ. ಶಾಲೆಗೊಂದು ಆಟದ ಮೈದಾನ ಕೊಡಿ, ಪಿಯು ತರಗತಿ ನಡೆಸಲು ಅವಕಾಶ ಕಲ್ಪಿಸಿ ಎಂದು ಮನವಿ ಸಲ್ಲಿಸುತ್ತಲೇ ಇದ್ದಾರೆ. ಇವೆಲ್ಲದರ ಮಧ್ಯೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಹಾಜಬ್ಬರನ್ನು ಪದಚ್ಯುತಿಗೊಳಿಸಬೇಕು ಎಂದು ಕೆಲವು ಮಕ್ಕಳ ಹೆತ್ತವರು, ಪೋಷಕರು ಶಾಸಕ ಯು.ಟಿ.ಖಾದರ್ ರ ಮೇಲೆ ಒತ್ತಡ ಹಾಕುತ್ತಿದ್ದಾರೆ.

ರಾಜ್ಯ ಸರಕಾರವು ಪ್ರತಿಯೊಂದು ಸರಕಾರಿ ಶಾಲೆ ಮತ್ತು ಪ್ರೌಢಶಾಲೆಯಲ್ಲಿ `ಎಸ್ಡಿಎಂಸಿ’ ರಚಿಸಲು ಆದೇಶಿಸಿದೆ. ಅದಕ್ಕಾಗಿ ಕೆಲವೊಂದು ನೀತಿ ನಿಯಮ ರೂಪಿಸಿದೆ. ಅಂದರೆ, ಪ್ರತೀ ಎಸ್ಡಿಎಂಸಿಯಲ್ಲಿ 9 ಮಂದಿ ಸದಸ್ಯರಿರಬೇಕು. ಅದರಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮಹಿಳೆಯರು, ಎಸ್ಸಿ/ಎಸ್ಟಿಗೆ ಮೀಸಲಾಗಿ ಕಲ್ಪಿಸಿದೆ. ಮೂರುವರ್ಷ ಆಡಳಿತ ನಡೆಸಬೇಕು. ವಿದ್ಯಾರ್ಥಿಗಳ ಹೆತ್ತವರ ಪೈಕಿ ಒಬ್ಬರು ಶಾಲೆಯ ಅಧ್ಯಕ್ಷರಾಗಲು ಅವಕಾಶವಿದೆ. ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ ಸ್ಥಳೀಯ ಶಾಸಕರು ಕಾರ್ಯನಿರ್ವಹಿಸಬೇಕು.

ಶಾಸಕರು ತನ್ನ ಒತ್ತಡ ಕಡಿಮೆ ಮಾಡಲು ಮಕ್ಕಳ ಹೆತ್ತವರು ಅಥವಾ ಪೋಷಕರ ಪೈಕಿ ಒಬ್ಬರಿಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಬಹುದು. ಶಾಲೆಯ ಮುಖ್ಯ ಶಿಕ್ಷಕ/ಶಿಕ್ಷಕಿ ಕಾರ್ಯದರ್ಶಿಯಾಗಿರುತ್ತಾರೆ. ಪ್ರತೀ ತಿಂಗಳು ಸಭೆ ನಡೆಸಬೇಕು.

ಹಾಜಬ್ಬರಿಗೆ ಇಬ್ಬರು ಹೆಣ್ಣು ಮತ್ತು ಒಬ್ಬ ಗಂಡು ಮಕ್ಕಳಿದ್ದಾರೆ. ಹಿರಿಯ ಮಗಳು 7ನೆ ತರಗತಿ ಕಲಿತಿದ್ದರೆ,ಕಿರಿಯ ಮಗಳು 10ರಲ್ಲಿ ಅನುತ್ತೀರ್ಣಳಾಗಿದ್ದಾಳೆ. ಮಗ 7ನೆ ತರಗತಿಗೆ ತೀಲಾಂಜಲಿ ಹಾಕಿದ್ದಾನೆ.

ಪ್ರೌಢಶಾಲೆ ಸ್ಥಾಪನೆಯಾಗುತ್ತಲೇ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸ್ಥಾನ ಬೇರೊಬ್ಬರ ಪಾಲಾಯಿತು. ಶಾಸಕ ಯು.ಟಿ.ಖಾದರ್ ಹಾಜಬ್ಬರಿಗೆ ಪ್ರೌಢಶಾಲೆಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ (ಬ್ಯಾಂಕ್ ಮತ್ತಿತರ ದಾಖಲೆ ಪತ್ರಗಳಿಗೆ ಸಹಿ ಹಾಕುವುದು) ನೀಡಿದರು. ಇದೀಗ ಹಾಜಬ್ಬರ ಮೂರು ಮಕ್ಕಳು ಕೂಡ ಶಾಲೆ, ಪ್ರೌಢಶಾಲೆಯಲ್ಲಿ ಕಲಿಯುತ್ತಿಲ್ಲ. ಅವರ ಸಾಧನೆಯನ್ನು ಸಹಿಸದ ಕೆಲವರು ಅದೇ ಕಾರಣ ಹೇಳಿಕೊಂಡು ಹಾಜಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಬಾರದು ಎಂದು ಒತ್ತಾಯಿಸುತ್ತಿದ್ದಾರೆ. ಅಷ್ಟೇ ಅಲ್ಲ, ಶಾಸಕರು ಶಾಲೆಗೆ ಖುದ್ದು ಬಂದು ಚುನಾವಣೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅಧ್ಯಕ್ಷ ಸ್ಥಾನ ಯಾರಿಗೆ ಕೊಡಬೇಕು ಎಂಬುದು ಅಧ್ಯಕ್ಷರ ವಿವೇಚನೆಗೆ ಬಿಟ್ಟ ವಿಚಾರ. ಆದಾಗ್ಯೂ ಕೆಲವು ಮಂದಿಯ ಒತ್ತಡ ನಿಂತಿಲ್ಲ.

ಅಂದಹಾಗೆ ಜಿ.ಪಂ., ತಾ.ಪಂ, ಗ್ರಾ.ಪಂ ಸದಸ್ಯರು, ಶಿಕ್ಷಣ ಪ್ರೇಮಿಗಳು ಹೀಗೆ ಶಾಲೆಯ ಆಸುಪಾಸಿನ ವ್ಯಕ್ತಿಗಳಿಗೆ ಎಸ್ಡಿಎಂಸಿಯಲ್ಲಿ ಗೌರವ ಸದಸ್ಯತ್ವ ಅಥವಾ ಪದನಿಮಿತ್ತ ಸದಸ್ಯತ್ವ ನೀಡಲು ಅವಕಾಶವಿದೆ. ಇದೀಗ ಹಾಜಬ್ಬರ ಮಕ್ಕಳು ಆ ಶಾಲೆಯಲ್ಲಿ ಕಲಿಯುತ್ತಿಲ್ಲವಾದರೂ ಹಾಜಬ್ಬರಿಗೆ ಪದನಿಮಿತ್ತ ಅಥವಾ ಗೌರವ ಸದಸ್ಯತ್ವ ನೀಡಬಹುದಾಗಿದೆ. ಆದರೆ, ಅದಕ್ಕೆ ಯಾರೂ ಒಪ್ಪುವುದಿಲ್ಲ. ಅಂದಹಾಗೆ, ಹಾಜಬ್ಬರ ಅಧಿಕಾರವಧಿ 2012ರ ಜುಲೈಗೆ ಮುಗಿದಿದೆ. ಆ ಬಳಿಕವಂತೂ ಸ್ಥಾನಪಲ್ಲಟಕ್ಕೆ ಒತ್ತಡ ಹೆಚ್ಚಾಗಿದೆ. ಇದರಿಂದ ಹಾಜಬ್ಬ ಅಧೀರರಾಗಿದ್ದಾರೆ.

ಆಟದ ಮೈದಾನ ವಿಸ್ತರಿಸಲು 20 ಸೆಂಟ್ಸ್ ಕುಮ್ಕಿ ಜಾಗ ಖರೀದಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ಪಿಯು ತರಗತಿ ಆರಂಭಿಸಲು ಆಸಕ್ತರಾಗಿದ್ದಾರೆ. ಇವರೆಡನ್ನು ಮಾಡಿ ಮುಗಿಸಿದ ಬಳಿಕ ನನ್ನ ಪಾಡಿಗೆ ನಾನಿರುವೆ ಎಂದು ಹಾಜಬ್ಬ ನೊಂದು ನುಡಿಯುತ್ತಾರೆ. ಆದರೆ, ವಿದ್ಯಾರ್ಹಿಗಳ ಹೆತ್ತವರು/ಪೋಷಕರ ಒತ್ತಡ ನಿಂತಿಲ್ಲ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English