ಮಂಗಳೂರು :ನಾವು ನಿಮ್ಮವರೇ… ನಮ್ಮನ್ನು ನಿಮ್ಮಂತೆ ಕಾಣಿ… ನಮ್ಮ ಬಗ್ಗೆ ಮುಜಗರ… ಆತಂಕ ಬೇಡ. ಸಮಾಜದಲ್ಲಿ ನಮಗೂ ಗೌರವದ ಉದ್ಯೋಗ ಕೊಡಿ… ಭಿಕ್ಷೆ ಬೇಡುವುದನ್ನು ತತ್ಕ್ಷಣದಿಂದ ನಿಲ್ಲಿಸುವೆವು… ಹೀಗೆ ಕೆಲವು ಮಂಗಳಮುಖಿಯರು ಮಾಧ್ಯಮದ ಮೊರೆ ಹೊಕ್ಕಿದ್ದಾರೆ.
ಅಂದಹಾಗೆ, ಈ ಮಂಗಳಮುಖಿಯರನ್ನು ತೃತೀಯ ಲಿಂಗಿಗಳು, ಹಿಜಡಾಗಳು, ಚಕ್ಕಾಗಳು, ಹುಸ್ರಾಗಳು, ಕೊಟ್ಟಗಳು ಎಂದೆಲ್ಲಾ ಹೇಳುತ್ತಾರೆ. ನೋಡಲು ಇವರು ಗಂಡಸರ ಹಾಗೆ ಕಾಣುತ್ತಾರೆ. ಆದರೆ ವರ್ತನೆ ಮಾತ್ರ ಹೆಂಗಸರದ್ದು. ಹಾಗಾಗಿ ಇವರಲ್ಲಿ ಹೆಚ್ಚಿನವರು ಹೆಂಗಸಿನ ವೇಷ ಧರಿಸುತ್ತಾರೆ. ಅವರ ಹಾಗೆ ಮಾತನಾಡುತ್ತಾರೆ. ಮುಂಬೈ ಮತ್ತಿತರ ಮಹಾನಗರಗಳಲ್ಲಿ ಇವರನ್ನು ಲೈಂಗಿಕ ತೃಷೆಗಾಗಿ ಬಳಸುವವರೂ ಇದ್ದಾರೆ. ಇವರು ಎಲ್ಲೇ ಹೋದರೂ ಕೆಲಸ ಸಿಗದು. ಹಾಗಾಗಿ ಇವರು ಲೈಂಗಿಕ ಕಾರ್ಯಕರ್ತೆಯರಾಗಿ ದಿನದೂಡುವುದು ಅನಿವಾರ್ಯ. ಅದೇ ಅವರ ಹೊಟ್ಟೆಗೆ ಆಹಾರ ಒದಗಿಸುವ ವೃತ್ತಿಯಾಗಿದೆ.
ಮಾನಸಿಕವಾಗಿ ಕುಬ್ಜರಾಗಿರುವ, ಸಮಾಜದಿಂದ ಬೇರ್ಪಟ್ಟಿರುವ ಇವರು ತಮಗೂ ಬದುಕುವ ಹಕ್ಕಿದೆ ಎಂದು ಸಾರಲು ಒಂದೇ ವೇದಿಕೆಯಡಿ ಒಗ್ಗೂಡಿ ತಮ್ಮ ಸಮಸ್ಯೆ ಮತ್ತು ಅವುಗಳ ಪರಿಹಾರಕ್ಕೆ ಬೇಡಿಕೆಯ ಪಟ್ಟಿ ಸಲ್ಲಿಸುತ್ತಾ ಬಂದಿದ್ದರೂ ಕೂಡ ಸರಕಾರ ಮಾತ್ರ ಜಾಣ ಕಿವುಡಿನಂತೆ ವರ್ತಿಸುತ್ತಿದೆ.
ಈ ಹಿಜಡಾಗಳನ್ನು ನಿರ್ಲಕ್ಷಿಸಿದರೆ, ಅವರು ಕೇಳಿದ್ದನ್ನು ಕೊಡದಿದ್ದರೆ ತಮಗೆ ಅಪಶಕುನ ಎಂಬ ಭಾವನೆ ಮುಂಬೈಯಲ್ಲಿ ಸಾರ್ವತ್ರಿಕವಾಗಿದೆ. ಹಾಗಾಗಿ ಹಿಜಡಾಗಳು ಬರುವುದನ್ನು ಕಂಡ ಕೂಡಲೆ ತಮ್ಮ ಕೈಲಾದಷ್ಟು ಸಹಾಯ ಮಾಡುವವರ ಸಂಖ್ಯೆ ಮುಂಬೈಯಲ್ಲಿ ಹೆಚ್ಚು. ಹಾಗೇ ಬೇಡುವವರ ಸಂಖ್ಯೆ ಕೂಡ ಅಲ್ಲಿ ಅಧಿಕವಾಗಿದೆ.
ಇದೀಗ ಈ ಹಿಜಡಾಗಳು ಮಂಗಳೂರಿಗೆ ಕಾಲಿಟ್ಟಿದ್ದಾರೆ. ಭಿಕ್ಷಾಟನೆಗೆ ಮುಂದಾಗಿದ್ದಾರೆ. ಸ್ಟೇಟ್ ಬ್ಯಾಂಕ್, ಲೇಡಿಗೋಶನ್ ಆಸ್ಪತ್ರೆ ಸಮೀಪ ರಾತ್ರಿಯಂತೂ ಇವರ ಓಡಾಟ ಅತಿಯಾಗಿದೆ. ಅಂದಹಾಗೆ, ನಿಜವಾದ ಹಿಜಡಾಗಳು ಅಥವಾ ಮಂಗಳಮುಖಿಯರು ಹಣಕ್ಕಾಗಿ ಪೀಡಿಸುವುದಿಲ್ಲ, ಹಣಕ್ಕಾಗಿ ಮೈ ಮುಟ್ಟುವುದಿಲ್ಲ. ನೀವು ಕೊಟ್ಟ ಹಣವನ್ನು ಎತ್ತಿಕೊಂಡು ಹರಸುತ್ತಾರೆ. ನೀವು ಹಣ ಕೊಡದಿದ್ದರೆ ತಮ್ಮ ಪಾಡಿಗೆ ಮುಂದೆ ಹೋಗುತ್ತಾರೆ. ಆದರೆ, ಮಂಗಳೂರಿನಲ್ಲಿರುವ ಕೆಲವು ಹಿಜಡಾಗಳು ಮೈ ಮುಟ್ಟುವುದು, ಹಣಕ್ಕಾಗಿ ಪೀಡಿಸುವುದು ಕಂಡು ಬರುತ್ತದೆ. ಹಾಗಿದ್ದರೆ, ಇವರು ನಕಲಿಯಾ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಪೊಲೀಸರೇ ಉತ್ತರಿಸಬೇಕಾಗಿದೆ.
ಮೂಲವೊಂದರ ಪ್ರಕಾರ ನಗರದಲ್ಲಿ ನಕಲಿ ಹಿಜಡಾಗಳ ಹಾವಳಿ ಹೆಚ್ಚಾಗಿದೆ. ಹೆಂಗಸರ ವೇಷ ಹಾಕಿ ಯುವಕರ ಹಿಂದೆ ಬಿದ್ದು, ಅವರನ್ನು ಸಲಿಂಗ ಕಾಮಕ್ಕೆ ಬಳಸುವ ಬಳಿಕ ಹಣ, ಚಿನ್ನಾಭರಣ ದೋಚುವ ಕೆಲಸ ಎಗ್ಗಿಲ್ಲದೆ ಸಾಗಿದೆ. ಇದನ್ನು ಕೆಲವು ಸಂಘಟನೆಗಳ ಮುಖಂಡರು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ನಕಲಿ ಹಿಜಡಾಗಳನ್ನು ಪತ್ತೆ ಹಚ್ಚುವ ಕೆಲಸ ಮಾತ್ರ ಆಗಿಲ್ಲ.
“ಮಂಗಳಮುಖಿಯರಂತೆ ವೇಷ ಹಾಕಿಕೊಂಡು ಭಿಕ್ಷಾಟನೆ ಮಾಡುವ ಮೂಲಕ, ಜನರಿಗೆ ತೊಂದರೆ ಕೊಡುವ ಮೂಲಕ ಕೆಲವರು ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ. ಈ ರೀತಿಯಾಗಿ ವರ್ತಿಸುವವರಿಗೆ ಶಿಕ್ಷೆಯಾಗಲಿ. ಹಾಗೆಂದು ನಮ್ಮ ಸಮುದಾಯವನ್ನೇ ಕೆಟ್ಟ ದೃಷ್ಟಿಯಿಂದ ನೋಡದಿರಿ. ಭಿಕ್ಷಾಟನೆಗೆ ತೊಡಗುವ ನೈಜ ಮಂಗಳಮುಖಿಯರು ಯಾರನ್ನೂ ಪೀಡಿಸುವುದಿಲ್ಲ. ಕೊಟ್ಟದ್ದನ್ನು ಗೌರವದಿಂದ ಸ್ವೀಕರಿಸುತ್ತಾರೆ. ಕಸ ಗುಡಿಸುವ ಕೆಲಸವಾದರೂ ಸರಿ. ನಮಗೆ ಸರಕಾರದಿಂದ ಪುನರ್ವಸತಿಯ ವ್ಯವಸ್ಥೆಯೊಂದಿಗೆ ಸೂಕ್ತ ಉದ್ಯೋಗ ದೊರಕಿದರೆ ನಾವು ಸಮಾಜದಲ್ಲಿ ಎಲ್ಲರಂತೆ ನಮ್ಮ ಬದುಕು ಕಟ್ಟಿಕೊಳ್ಳಬಲ್ಲೆವು ಎನ್ನುತ್ತಾರೆ ಒಬ್ಬ ಮಂಗಳಮುಖಿ.
ತಮಿಳುನಾಡು, ಆಂಧ್ರಪ್ರದೇಶದಲ್ಲಿ ಮಂಗಳಮುಖಿಯರಿಗೆ ನೀಡಲಾಗುವ ಸೌಲಭ್ಯಗಳನ್ನು ಕರ್ನಾಟಕ ಸರಕಾರವೂ ನೀಡಬೇಕು. ನಮಗೊಂದು ಗುರುತುಪತ್ರ. ಮತದಾನದ ಹಕ್ಕು, ಕೈಗಳಿಗೊಂದು ಗೌರವದಿಂದ ಬಾಳಲು ಸಾಧ್ಯವಾಗುವ ಉದ್ಯೋಗ ನೀಡಿದರೆ ನಮ್ಮ ಜೀವನವನ್ನು ನಾವು ರೂಪಿಸಿಕೊಳ್ಳುತ್ತೇವೆ. ಸರಕಾರದ ಜೊತೆ ನಮ್ಮ ಹಲವು ವರ್ಷಗಳ ಬೇಡಿಕೆಯಿದು. ಜನಪ್ರತಿನಿಧಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡುತ್ತಾರಾದರೂ ಇನ್ನೂ ಈಡೇರಿಕೆಯಾಗಿಲ್ಲ. ನಮ್ಮ ದಿನನಿತ್ಯದ ಜೀವನೋಪಾಯ, ಮನೆ ಬಾಡಿಗೆ ಕಟ್ಟಲು ಭಿಕ್ಷಾಟನೆ, ಲೈಂಗಿಕ ಕಾರ್ಯಕರ್ತೆಯರಾಗಿ ಬದುಕು ಕಂಡುಕೊಳ್ಳುತ್ತಿರುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಮತ್ತೊಬ್ಬ ಮಂಗಳಮುಖಿ.
ನಮ್ಮ ಕಲ್ಯಾಣಕ್ಕಾಗಿ ಕೆಲಸ ಮಾಡುವ ಎನ್ಜಿಒಗಳು ಬೆಂಗಳೂರು ಮತ್ತಿತರ ಕಡೆ ಇದೆ. ಆದರೆ ಮಂಗಳೂರಿನಲ್ಲಿರುವ ನಮಗೆ ಯಾವುದೇ ಸೌಲಭ್ಯವಿಲ್ಲ.ನಮ್ಮನ್ನು ನಾನಾ ಹೆಸರುಗಳಿಂದ ಕೆಟ್ಟದಾಗಿ ಕರೆಯುತ್ತಾರೆ. ಮನಸ್ಸಿಗೆ ತುಂಬಾ ನೋವಾಗುತ್ತಿತ್ತು ಎನ್ನುತ್ತಾರೆ ಮತ್ತೊಬ್ಬ ಮಂಗಳಮುಖಿ.
ನಮ್ಮನ್ನು ನಾವು ಮಂಗಳಮುಖಿಯರೆಂದು ಸಾಬೀತುಪಡಿಸಲು ಯಾವುದೇ ರೀತಿಯ ವೈದ್ಯಕೀಯ ಪರೀಕ್ಷೆಗೂ ನಾವು ಸಿದ್ಧ. ನಾವು ಮಂಗಳಮುಖಿಯರೆಂದು ನಮಗೆ ಅರಿವಾದ ಬಳಿಕ ನಾವಾಗಿಯೇ ಈ ಬದುಕನ್ನು ಇಷ್ಟ ಪಟ್ಟವರು. ಹೆಣ್ಣಿನ ರೂಪದಲ್ಲಿ ಬದಕಲು ಬಯಸಿದವರು. ಇದೇ ಬದುಕಿನಲ್ಲಿ ಸಾಯಲು ಇಷ್ಟ ಪಡುವವರು ಎನ್ನುತ್ತಾರೆ.
ನಮಗೂ ಮದುವೆಯಾಗುವ, ಮಕ್ಕಳನ್ನು ಹೆರುವ ಆಸೆಯಾಗುತ್ತಿದೆ. ಆದರೆ, ಏನು ಮಾಡುವುದು? ಪ್ರಕೃತಿದತ್ತ ಕೊಡುಗೆಗಳು ನಾವು. ಹೆತ್ತಬ್ಬೆಯೆ ನಮ್ಮನ್ನು ಮನೆಯಿಂದ ಹೊರಗೆ ಹಾಕಿದ ಮೇಲೆ ಬದುಕು ಕಟ್ಟಲು ನಾವು ಹೀಗೆ ಮಾಡಬೇಕಾಗುತ್ತದೆ ಎಂದು ಮಂಗಳಮುಖಿಯೊಬ್ಬರು ತಮ್ಮ ವೃತ್ತಿಯ ಬಗ್ಗೆ ಹೇಳುತ್ತಾರೆ. ಸಮಾಜದಿಂದ ಮಾತ್ರವಲ್ಲ, ಹೆತ್ತವರಿಂದಲೇ ಕಡೆಗಣಿಸಲ್ಪಡುವ ಮಂಗಳಮುಖಿಯರು ಅನಿವಾರ್ಯವಾಗಿ ತಮ್ಮ ಸ್ವಂತ ಊರಿನಿಂದ ದೂರವಾಗಿ ಬೇರೆ ಊರುಗಳಲ್ಲಿ ನೆಲೆ ಕಂಡುಕೊಳ್ಳುವುದು ಸಾಮಾನ್ಯ. ಈ ರೀತಿಯಾಗಿ ತಮ್ಮವರಿಂದಲೇ ದೂರವಾಗುವ ಮಂಗಳಮುಖಿಯರು ಸಮಾಜದಿಂದ ಬಯಸುವುದು ಗೌರವದ ಬದುಕು, ಬದುಕಿಗೊಂದಿಷ್ಟು ಪ್ರೀತಿಯ ಸೆಲೆ, ಸಮಾಜ ನೀಡುವ ಗೌರವ.
ಮಂಗಳಮುಖಿಯರ ವೇಷ ಧರಿಸಿ ಅವರ ಹೆಸರಿನಲ್ಲಿ ಜನರಿಂದ ಸುಲಿಗೆ ಮಾಡುವ ಕೆಲಸವೂ ನಡೆಯುತ್ತಿರುವುದು ವಾಸ್ತವವಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕೆನ್ನುವುದು ಮಂಗಳಮುಖಿಯರ ಆಗ್ರಹವಾಗಿದೆ.
Click this button or press Ctrl+G to toggle between Kannada and English