ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ನಾಳೆ ಗಲ್ಲು ಶಿಕ್ಷೆ

4:13 PM, Thursday, March 19th, 2020
Share
1 Star2 Stars3 Stars4 Stars5 Stars
(No Ratings Yet)
Loading...

nkrbhaya-case

ನವದೆಹಲಿ : ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ಕ್ಷಣಗಣನೆ ಆರಂಭವಾಗಿದೆ. ಅಂದುಕೊಂಡಂತೆ ನಡೆದರೆ ಶುಕ್ರವಾರ ಮುಂಜಾನೆ ನಾಲ್ವರು ಅಪರಾಧಿಗಳನ್ನು ನೇಣಿಗೇರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕೊನೆಯ ಬಾರಿಗೆ ಅಪರಾಧಿಗಳನ್ನು ಭೇಟಿಯಾಗುತ್ತಿದ್ದಾರೆ.

ನಿರ್ಭಯಾ ಪ್ರಕರಣದ ಮೂವರು ಅಪರಾಧಿಗಳು ಈಗಾಗಲೇ ಮುಚ್ಚಿದ ಕೋಣೆಯಲ್ಲಿ ಕುಟುಂಬಸ್ಥರನ್ನು ಕೊನೆಯ ಬಾರಿ ಭೇಟಿಯಾಗಿದ್ದಾರೆ. ನಿಯಮಗಳ ಪ್ರಕಾರ ಹೀಗೆ ಮುಚ್ಚಿದ ಕೋಣೆಯಲ್ಲಿ ಕೊನೆಯ ಬಾರಿ ಕುಟುಂಬಸ್ಥರನ್ನು ಭೇಟಿಯಾಗಲು, ಅವರನ್ನು ಸ್ಪರ್ಷಿಸಿ ಮಾತುಕತೆ ನಡೆಸಲು ಅವಕಾಶವಿದೆ. ಆದರೆ ಅಕ್ಷಯ್‌ ಠಾಕೂರ್‌ನನ್ನು ಆತನ ಕುಟುಂಬಸ್ಥರು ಇನ್ನೂ ಭೇಟಿಯಾಗಿಲ್ಲ ಎಂದು ತಿಹಾರ್‌ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಆತನ ಪತ್ನಿ ಮತ್ತು ಪೋಷಕರಿಗೆ ಗುರುವಾರದ ಮೊದಲು ಬಂದು ಭೇಟಿಯಾಗುವಂತೆ ಹೇಳಲಾಗಿದೆ.

2012 ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರೂ ಅಪರಾಧಿಗಳನ್ನು ಶುಕ್ರವಾರ ತಿಹಾರ್‌ ಜೈಲಿನಲ್ಲಿ ನೇಣಿಗೆ ಏರಿಸಲು ದಿನ ನಿಗದಿ ಮಾಡಲಾಗಿದೆ.

ವಿನಯ್‌ ಶರ್ಮಾ ಮತ್ತು ಪವನ್‌ ಗುಪ್ತಾರನ್ನು ಅವರ ಕುಟುಂಬಸ್ಥರು ಫೆಬ್ರವರಿ 29 ರಂದು ಭೇಟಿಯಾಗಿದ್ದರು. ಕುಟುಂಬಸ್ಥರನ್ನು ಭೇಟಿಯಾದ ನಂತರ ಇಬ್ಬರೂ ಅಳಲು ಆರಂಭಿಸಿದ್ದರು. ಅದರಲ್ಲೂ ವಿನಯ್‌ ಶರ್ಮಾ ಒಂದೇ ಸಮನೆ ಅಳಲು ಆರಂಭಿಸಿದ್ದ. ನಂತರ ಜೈಲಿನ ಅಧಿಕಾರಿಗಳು ಆತನನ್ನು ಸಮಾಧಾನಪಡಿಸಿದ್ದರು.

ಮಾರ್ಚ್‌ 2 ರಂದು ಕುಟುಂಬಸ್ಥರು ಭೇಟಿಯಾಗಲು ಬಂದಾಗ ಮುಖೇಶ್‌ ಸಿಂಗ್‌ ಮಾತ್ರ ಮೌನವಾಗಿದ್ದ. ಕುಟುಂಬಸ್ಥರು ಮಾತ್ರ ಅಳುತ್ತಲೇ ಇದ್ದರು. ಈ ವೇಳೆ ಸಿಂಗ್‌ ಇನ್ನೂ ಕಾನೂನಿನಲ್ಲಿ ಅವಕಾಶಗಳು ಬಾಕಿ ಇವೆ ಎಂದು ಅವರಿಗೆ ಭರವಸೆ ನೀಡುತ್ತಿದ್ದ. ಆದರೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವೇಳೆ ನಾನು ದಿಲ್ಲಿಯಲ್ಲೇ ಇರಲಿಲ್ಲ ಎಂಬ ಮುಖೇಶ್‌ ಸಿಂಗ್‌ ಅರ್ಜಿಯನ್ನು ನ್ಯಾಯಾಲಯ ಮಂಗಳವಾರ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆತನ ಎಲ್ಲಾ ಪ್ರಯತ್ನಗಳೂ ವಿಫಲವಾಗಿದ್ದವು.

ಕೊನೆಯ ಭೇಟಿ ನಂತರವೂ ಅಪರಾಧಿಗಳ ಜೊತೆ ವಾರದ ಭೇಟಿಗೆ ಕುಟುಂಬಸ್ಥರಿಗೆ ಅವಕಾಶ ನೀಡಲಾಗಿತ್ತು. ಆದರೆ ಪ್ರತ್ಯೇಕ ಮತ್ತು ಮುಖಾಮುಖಿ ಭೇಟಿಗೆ ಅವಕಾಶ ಇರಲಿಲ್ಲ.

ಅಕ್ಷಯ್‌ ಠಾಕೂರ್‌ ತನ್ನ ಕುಟುಂಬಸ್ಥರು ಬುಧವಾರ ಬರಲಿದ್ದಾರೆ ಎಂಬುದಾಗಿ ತಿಹಾರ್‌ ಜೈಲಿನ ಅಧಿಕಾರಿಗಳಿಗೆ ಹೇಳಿದ್ದ. ಆದರೆ ಆತನ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ, ತನ್ನ ಕುಟುಂಬಸ್ಥರು ಬರಬಹುದು ಎಂಬ ನಿರೀಕ್ಷೆ ಆತನಿಗೆ ಇಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

“ನಾವು ಆತನಿಗೆ ಆತನ ಪತ್ನಿ ಜೊತೆ ಫೋನ್‌ ಸಂಭಾಷಣೆಗೆ ಅವಕಾಶ ಕಲ್ಪಿಸಿದ್ದೆವು. ಇದಾದ ನಂತರ ಆತ ತನ್ನ ಪತ್ನಿ ಬುಧವಾರ ಬಂದು ಭೇಟಿಯಾಗುವುದಾಗಿ ಹೇಳಿದ್ದ,” ಎಂದುದಾಗಿ ಅಧಿಕಾರಿ ವಿವರಿಸಿದ್ದಾರೆ. ಆತನ ಪತ್ನಿ ಪುನಿತಾ ದೇವಿ (29) ಬಿಹಾರದ ಔರಂಗಬಾದ್‌ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತನ್ನ ಉಳಿದ ಜೀವಮಾನವನ್ನು ವಿಧವೆಯಾಗಿ ಕಳೆಯಲು ಇಷ್ಟವಿಲ್ಲ ಎಂದು ಆಕೆ ಹೇಳಿದ್ದಾರೆ.

ಆಕೆ ಗುರುವಾರ ದಿಲ್ಲಿಯ ಪಟಿಯಾಲಾ ಹೌಸ್‌ ನ್ಯಾಯಾಲಯಕ್ಕೆ ಬಂದಿದ್ದ ವೇಳೆ ದುಃಖ ತಡೆದುಕೊಳ್ಳಲಾಗದೆ ಅಳಲು ಆರಂಭಿಸಿದ್ದರು. ನಂತರ ಏಕಾಏಕಿ ಕುಸಿದು ಬಿದ್ದಿದ್ದರು. ಅವರು ಸಂಜೆ ಮೊದಲು ಅಕ್ಷಯ್‌ ಠಾಕೂರ್‌ನನ್ನು ಭೇಟಿಯಾಗಲಿದ್ದಾರಾ ಎಂಬುದು ತಿಳಿದು ಬಂದಿಲ್ಲ.

ಇದರ ನಡುವೆ ನೇಣಿಗೇರಿಸಲು ಬೇಕಾದ ಸಿದ್ಧತೆಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ಈಗಾಗಲೇ ಅಣಕು ಪ್ರಕ್ರಿಯೆ ಕೂಡ ನಡೆದಿದೆ. ಅಧಿಕಾರಿಗಳು ನಾಲ್ವರ ಆರೋಗ್ಯದ ಮೇಲೆಯೂ ನಿಗಾ ಇಟ್ಟಿದ್ದು, ಜೈಲಿನ ಕೋಣೆ ಹೊರಗಡೆ ಹೆಚ್ಚಿನ ಭದ್ರತೆ ಏರ್ಪಡಿಸಲಾಗಿದೆ. ಯಾವುದೇ ಅಹಿತರಕರ ಘಟನೆಗಳು ಜರುಗದಂತೆ ತಡೆಯಲು ಈ ವ್ಯವಸ್ಥೆ ಮಾಡಲಾಗಿದೆ.

ಒಟ್ಟು ಆರು ಅಪರಾಧಿಗಳಲ್ಲಿ ರಾಮ್‌ ಸಿಂಗ್‌ ಎಂಬಾತ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ, ಇನ್ನೋರ್ವ ಬಾಲಪರಾಧಿಯನ್ನು ನಂತರ ಬಿಡುಗಡೆ ಮಾಡಲಾಗಿತ್ತು. ಉಳಿದ ನಾಲ್ವರು ಶುಕ್ರವಾರ ನೇಣಿಗೇರಲಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English