ದಕ್ಷಿಣ ಕನ್ನಡ ಜಿಲ್ಲೆಗೆ ಕೊರೋನಾ ವೈರಸ್ ಬಂದಿದ್ದು ದುಬೈನಿಂದ

6:51 PM, Friday, May 1st, 2020
Share
1 Star2 Stars3 Stars4 Stars5 Stars
(No Ratings Yet)
Loading...

corona-entryಮಂಗಳೂರು  : ದಕ್ಷಿಣ ಕನ್ನಡ ಜಿಲ್ಲೆಗೆ  ಕೊರೋನಾ ವೈರಸ್ ಬಂದಿದ್ದು ವಿದೇಶದಿಂದ.  ಮಾರ್ಚ್ 22ರಂದು ಮೊದಲ ಕೋವಿಡ್ ಸೋಂಕು  ಜಿಲ್ಲೆಯಲ್ಲಿ  ಪತ್ತೆಯಾಗಿತ್ತು. ದುಬೈನಿಂದ ಆಗಮಿಸಿದ  ಯುವಕನೊಬ್ಬನಲ್ಲಿ ಕೋವಿಡ್‌-19  ವೈರಾಣು ಪತ್ತೆಯಾಗಿತ್ತು.

ಮೇಲೆ ಎಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದರು ಒಂದಿಲ್ಲೊಂದು ಹೊಸ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯ ವರೆಗೆ ಒಟ್ಟು ಸೋಂಕಿತರ ಸಂಖ್ಯೆ 22ಕ್ಕೇರಿದ್ದು, ಆ ಪೈಕಿ ಓರ್ವ ಭಟ್ಕಳ, ಓರ್ವ ಉಡುಪಿ ಹಾಗೂ ನಾಲ್ವರು ಕೇರಳದವರಾಗಿದ್ದಾರೆ. ಉಳಿದ 16 ಮಂದಿ ದ.ಕ. ಜಿಲ್ಲೆಯವರು. ಒಟ್ಟು ಸೋಂಕಿತರ ಪೈಕಿ 12 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ದ.ಕ. ಜಿಲ್ಲೆಯ ಮೂಲದವರನ್ನು ತೆಗೆದುಕೊಂಡಾಗ 16 ಮಂದಿ ಸೋಂಕಿತರ ಪೈಕಿ 6 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇನ್ನು ಏಳು ಮಂದಿ ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮೂವರು ಕೋವಿಡ್‌-19 ದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ 16 ಕೋವಿಡ್‌-19 ಸೋಂಕಿತರ ಪೈಕಿ ಎಂಟು ಮಂದಿಯೂ ಪಡೀಲಿನ ಫಸ್ಟ್‌ ನ್ಯೂರೋ ಆಸ್ಪತ್ರೆಯೊಂದಿಗೆ ಸಂಪರ್ಕದಲ್ಲಿದ್ದರು ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಎ. 23ರಂದು ಮೃತಪಟ್ಟ ಬಂಟ್ವಾಳ ಕಸಬಾದ ವೃದ್ಧೆ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಾಗಿದ್ದರು. ಆ ವೃದ್ಧೆಯ ಸೊಸೆ ಎ. 19ರಂದು ಮೃತಪಟ್ಟಿದ್ದು, ಅತ್ತೆಯ ಉಪಚಾರದ ಹಿನ್ನೆಲೆಯಲ್ಲಿ ಅವರು ಅದೇ ಆಸ್ಪತ್ರೆಗೆ ಬಂದು ಹೋಗುತ್ತಿದ್ದವರು. ಎ. 30ರಂದು ನಿಧನ ಹೊಂದಿದ ಕಸಬಾದ ಇನ್ನೋರ್ವ ವೃದ್ಧೆ ಈ ಅತ್ತೆ-ಸೊಸೆಯ ನೆರೆಮನೆಯವರು. ಅವರ ಪುತ್ರಿಯೂ ಕೋವಿಡ್‌-19 ತುತ್ತಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಡುವೆ ಕೋವಿಡ್‌-19 ಪಾಸಿಟಿವ್‌ ಬಂದ ಶಕ್ತಿನಗರದ ವೃದ್ಧೆಯು ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಮತ್ತು ಅವರ ಪುತ್ರ ಅದೇ ಆಸ್ಪತ್ರೆಯಲ್ಲಿ ತಾಯಿಯ ಸಹಾಯಕ್ಕಿದ್ದವರು. ಕೋವಿಡ್‌-19 ದೃಢಪಟ್ಟ ಪಾಣೆಮಂಗಳೂರಿನ ಮಹಿಳೆ ಕೂಡ ಅದೇ ಆಸ್ಪತ್ರೆಯಲ್ಲಿ ಕೆಲಸಕ್ಕಿದ್ದವರು. ಇನ್ನು ಗುರುವಾರ ಕೋವಿಡ್‌-19 ದೃಢಪಟ್ಟ ಬೋಳೂರಿನ ಮಹಿಳೆಯು ಕಳೆದ ಒಂದು ವಾರದ ಹಿಂದಷ್ಟೇ ಅಲ್ಲಿಂದಲೇ ಚಿಕಿತ್ಸೆ ಪಡೆದು ಬಿಡುಗಡೆಗೊಂಡವರು. ಒಟ್ಟಾರೆ ಎಂಟು ಪ್ರಕರಣಗಳಲ್ಲಿ ಫಸ್ಟ್‌ ನ್ಯೂರೋ ಆಸ್ಪತ್ರೆ ಹೆಸರು ಕೇಳಿಬರುತ್ತಿದೆ.

ಕೋವಿಡ್‌-19 ಸೋಂಕಿ ನಿಂದ ಮೃತಪಟ್ಟ 67 ರ ವೃದ್ಧೆಯ ಶವಸಂಸ್ಕಾರವನ್ನು ಬೋಳೂರಿನ ರುದ್ರಭೂಮಿಯಲ್ಲಿ ಗುರುವಾರ ರಾತ್ರಿ ನೆರವೇರಿಸಲಾಯಿತು. ಕೋವಿಡ್‌-19 ದಿಂದ ಮೃತಪಟ್ಟವರ ಶವ ಸಂಸ್ಕಾರ ಕ್ರಿಯೆಗೆ ಈ ಹಿಂದೆ ನಗರದ ವಿವಿಧ ರುದ್ರಭೂಮಿ ಪ್ರದೇಶದಲ್ಲಿ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಮುಂದೆ ಬೋಳೂರಿನಲ್ಲಿಯೇ ನೆರವೇರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶಾಸಕರ ಸಮ್ಮುಖದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English