ಮಂಗಳೂರು : ಕಾವೂರು ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಯುವ ಛಾಯಾಗ್ರಾಹಕ ಕೌಶಿಕ್ (22) ಮರವೂರಿನಲ್ಲಿ ಫಲ್ಗುಣಿ ನದಿಯಲ್ಲಿ ಮುಳುಗಿ ಶನಿವಾರ ಮೃತಪಟ್ಟಿದ್ದಾರೆ.
ಕಾವೂರು ಪಳನೀರ್ ಕಟ್ಟೆ ನಿವಾಸಿಯಾಗಿದ್ದ ಕೌಶಿಕ್ ತಾಯಿಯೊಂದಿಗೆ ವಾಸವಿದ್ದರು. ತಾಯಿಯ ಏಕೈಕ ಪುತ್ರನಾಗಿದ್ದ ಈತ ಕುಟುಂಬದ ಆಧಾರ ಸ್ತಂಭವಾಗಿದ್ದರು.
ಪ್ರಥಮ ಪಿಯುಸಿ ಬಳಿಕ ವಿದ್ಯಾಭ್ಯಾಸ ತೊರೆದು ಕಾವೂರಿನ ದಿಯಾ ಸ್ಟುಡಿಯೋದಲ್ಲಿ ಕೆಲಸ ಮಾಡಲಾರಂಭಿಸಿದ್ದ ಕೌಶಿಕ್ ಫೋಟೊ ಹಾಗು ವೀಡಿಯೋ ತೆಗೆಯುವುದರಲ್ಲಿ ಪರಿಣತಿ ಹೊಂದಿದ್ದರು. ತಾನೊಬ್ಬ ಉತ್ತಮ ಛಾಯಾಗ್ರಾಹಕನಾಗಬೇಕೆಂಬ ಕನಸು ಕಂಡಿದ್ದ ಕೌಶಿಕ್ ಸಾಧು ಸ್ವಭಾವದ ಹುಡುಗನಾಗಿದ್ದ ಎಂದು ಸ್ಟುಡಿಯೋ ಮಾಲಕ ಅಶೋಕ್ ತಿಳಿಸಿದ್ದಾರೆ.
ನಾಲ್ವರು ಗೆಳೆಯರೊಂದಿಗೆ ಮರವೂರುಗೆ ಚಿಪ್ಪು (ಮರುವಾಯಿ) ಹೆಕ್ಕಲು ಹೋಗಿದ್ದರು. ಈ ಸಂದರ್ಭ ನೀರಿನಲ್ಲಿ ಮುಳುಗಿದ್ದಾರೆ. ಜತೆಗಿದ್ದವರು ಬೊಬ್ಬೆ ಹಾಕಿದಾಗ ಸ್ಥಳೀಯರೊಬ್ಬರು ಬಂದು ರಕ್ಷಣೆಗೆ ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಬಳಿಕ ಮೃತದೇಹವನ್ನು ಮೇಲಕ್ಕೆತ್ತಲಾಯಿತು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ
Click this button or press Ctrl+G to toggle between Kannada and English