ಮಂಗಳೂರು : ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಉಪ ಸಂಪಾದಕಿಯಾಗಿ, ಸಾಹಿತಿ ವಿ.ಗ. ನಾಯಕ ಅವರ ಪುತ್ರಿ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೆದುಳಿನ ಸಮಸ್ಯೆಯಿಂದ ಮಂಗಳವಾರ ನಿಧನರಾದರು.
ಕಳೆದೊಂದು ವರ್ಷದಿಂದ ಮೆದುಳಿನ ಸಮಸ್ಯೆ ಅವರನ್ನು ಕಾಡುತ್ತಿತ್ತು. ಅವರು ಕಳೆದ 19 ವರ್ಷಗಳಿಂದ ವಿಜಯ ಕರ್ನಾಟಕ ಮಂಗಳೂರು ಕಚೇರಿಯಲ್ಲಿ ವರದಿಗಾರ್ತಿಯಾಗಿ, ಹಿರಿಯ ಉಪಸಂಪಾದಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅವಳಿ ಸ್ನಾತಕೋತ್ತರ ಪದವಿಗಳು, ಅವಳಿ ಪಿಎಚ್ ಡಿ ಮಹಾಪ್ರಬಂಧಗಳು, ಬೃಹತ್ ಎಂ.ಫಿಲ್ ಗ್ರಂಥಗಳ ಜತೆಗೆ 15ಕ್ಕೂ ಅಧಿಕ ಕೃತಿಗಳನ್ನು ರಚಿಸಿದ ಸೀತಾಲಕ್ಷ್ಮಿ ಭಾಷೆ, ರಂಗಭೂಮಿ, ಕಲೆ ಮತ್ತು ಸಂಸ್ಕೃತಿ ವಿಚಾರದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದರು.
ಯಾವುದೇ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದರು. ಸಾಹಿತ್ಯ ಸಮ್ಮೇಳನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಆರೋಗ್ಯ, ಕನ್ನಡ ಸಾಹಿತ್ಯ, ನುಡಿಸಿರಿ ಹೀಗೆ ಯಾವುದೇ ಕಾರ್ಯಕ್ರಮ ಬಂದರೂ ಮೊದಲು ಎದ್ದು ಕಾಣುತ್ತಿದ್ದ ಹೆಸರು ಅವರದು.
ಅಡ್ಯನಡ್ಕ ಬಳಿಯ ಕೇಪು ಕಲ್ಲಂಗಳದ ಸೀತಾಲಕ್ಷ್ಮಿ ಅಡ್ಯನಡ್ಕದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದರು. ಬಳಿಕ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಡಿಗ್ರಿ ಪಡೆದರು. ನಂತರ ಕನ್ನಡದಲ್ಲಿ ಎಂ ಎ ಮಾಡಿದರು. ಬಳಿಕ ಡಾಕ್ಟರೇಟ್ ಪದವಿ ಪಡೆದರು.
ಕಳೆದ ಹಲವು ವರ್ಷಗಳಿಂದ ತಂದೆ, ತಾಯಿ ಜತೆ ಮಂಗಳೂರಿನ ಕೊಟ್ಟಾರ ಚೌಕಿಯ ಬಳಿ ವಾಸವಾಗಿದ್ದರು. ಇವರ ಕುಟುಂಬ ಮೂಲತ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರ್ಕಿಕೋಡಿಯವರು. ಇವರ ತಂದೆ ಶಿಕ್ಷಕ ವೃತ್ತಿ ಸೇರಿದ ಬಳಿಕ ದ.ಕ.ಜಿಲ್ಲೆಯ ಅಡ್ಯನಡ್ಕಕ್ಕೆ ಬಂದು ನೆಲೆಸಿದ್ದರು.
ಪ್ರತಿಭಾನ್ವಿತೆಯಾಗಿದ್ದ ಸೀತಾಲಕ್ಷ್ಮಿ ಕನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದರು.
Click this button or press Ctrl+G to toggle between Kannada and English